ರಾಜಮೌಳಿ (Rajamouli) ನಿರ್ದೇಶನ ಮಾಡಿ, ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರ್ ನಟಿಸಿರುವ ‘ವಾರಣಾಸಿ’ ಸಿನಿಮಾ ವಿಶ್ವದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿದೆ. ‘ಆರ್ಆರ್ಆರ್’ ಸಿನಿಮಾದ ಬಳಿಕ ರಾಜಮೌಳಿಯ ಸಿನಿಮಾಗಳಿಗೆ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಭಾರಿ ಬೇಡಿಕೆ ಕುದುರಿದ್ದು, ‘ವಾರಣಾಸಿ’ ಸಿನಿಮಾದ ಬಗ್ಗೆ ಸಿನಿಮಾ ಪ್ರೇಮಿಗಳಲ್ಲಿ ಈಗಿನಿಂದಲೇ ಕುತೂಹಲ ಜೋರಾಗಿದೆ. ಸಿನಿಮಾದ ಹೆಸರನ್ನು ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ರಾಜಮೌಳಿ ಘೋಷಣೆ ಮಾಡಿದ್ದರು. ಆದರೆ ಆ ಟೈಟಲ್ ಘೋಷಣೆಯ ಬಳಿಕ ಸಣ್ಣ ವಿವಾದವೊಂದು ಹುಟ್ಟಿಕೊಂಡಿತ್ತು. ಆದರೆ ಈಗ ಆ ವಿವಾದ ಸುಖಾಂತ್ಯವಾಗಿದೆ.
ರಾಜಮೌಳಿ ಅವರು ‘ವಾರಣಾಸಿ’ ಸಿನಿಮಾ ಘೋಷಣೆ ಮಾಡಿದ್ದಾಗ ನಿರ್ದೇಶಕ ಸುಬ್ಬಾರೆಡ್ಡಿ ಅವರು ‘ವಾರಣಾಸಿ’ ಸಿನಿಮಾದ ಟೈಟಲ್ ತಮ್ಮ ಬಳಿ ಇದ್ದು, ರಾಜಮೌಳಿ ತಮ್ಮ ಅನುಮತಿ ಪಡೆಯದೇ ಸಿನಿಮಾದ ಹೆಸರನ್ನು ಬಳಸಿಕೊಂಡಿದ್ದಾರೆ ಎಂದು ಹೇಳಿದ್ದರು. ಆದರೆ ಈಗ ‘ವಾರಣಾಸಿ’ ಸಿನಿಮಾದ ಹೆಸರನ್ನು ಸಿನಿಮಾದ ನಿರ್ಮಾಪಕರಿಗೆ ನೀಡಿದ್ದಾರೆ. ಆ ಮೂಲಕ ವಿವಾದವನ್ನು ಖುದ್ದು ತಾವೇ ಸುಖಾಂತ್ಯಗೊಳಿಸಿದ್ದಾರೆ.
ಚಲನಚಿತ್ರ ನಿರ್ಮಾಪಕರ ಮಂಡಳಿಯ ಕಾರ್ಯದರ್ಶಿ ಪ್ರಸನ್ನ ಕುಮಾರ್, ನಿರ್ದೇಶಕರ ಸಂಘದ ಮಾಜಿ ಅಧ್ಯಕ್ಷ ವೀರಶಂಕರ್ ಹಾಗೂ ನಿರ್ದೇಶಕ ಸುಬ್ಬಾರೆಡ್ಡಿ ಅವರುಗಳು ಚರ್ಚೆ ನಡೆಸಿದ ಬಳಿಕ ‘ವಾರಣಾಸಿ’ ಸಿನಿಮಾದ ಟೈಟಲ್ ಮೇಲಿನ ಹಕ್ಕನ್ನು ವರ್ಗಾವಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಸುಬ್ಬಾರೆಡ್ಡಿ, ‘2023ರಲ್ಲೇ ‘ವಾರಣಾಸಿ’ ಶೀರ್ಷಿಕೆಯನ್ನು ತಮ್ಮ ಬ್ಯಾನರ್ ಅಡಿಯಲ್ಲಿ ನೋಂದಾಯಿಸಿ ಆ ಕಥೆಯ ಮೇಲಿನ ಕೆಲಸವನ್ನು ಆರಂಭಿಸಿದ್ದೆ. ಆದರೆ ಅದೇ ಶೀರ್ಷಿಕೆ ರಾಜಮೌಳಿ ಅವರ ಸಿನಿಮಾಗೆ ಅವಶ್ಯಕತೆಯಿದೆ ಎಂದು ತಿಳಿದ ತಕ್ಷಣ, ತೆಲುಗು ಚಿತ್ರರಂಗದ ಗೌರವವನ್ನು ದೃಷ್ಟಿಯಲ್ಲಿಟ್ಟುಕೊಂಡು ಯಾವುದೇ ಹಿಂಜರಿಕೆಯಿಲ್ಲದೆ ಅದನ್ನು ಬಿಟ್ಟುಕೊಡಲು ನಿರ್ಧರಿಸಿದೆ ಎಂದರು. ತಮ್ಮ ನೆಚ್ಚಿನ ನಟ ಮಹೇಶ್ ಬಾಬು, ನಿರ್ದೇಶಕ ರಾಜಮೌಳಿ ಮತ್ತು ನಿರ್ಮಾಪಕ ಕೆ.ಎಲ್. ನಾರಾಯಣ ಒಟ್ಟಾಗಿ ಮಾಡುತ್ತಿರುವ ಈ ಬ್ರಹ್ಮಾಂಡ ಚಿತ್ರಕ್ಕೆ ಶೀರ್ಷಿಕೆ ನೀಡುವುದನ್ನು ತಾವೇ ಭಾಗ್ಯವೆಂದು ಭಾವಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಈಗ ಚಿತ್ರಕ್ಕೆ ಸುದೀಪ್ ಅವರೇ ಫಸ್ಟ್ ಆ್ಯಂಡ್ ಲಾಸ್ಟ್ ಚಾಯ್ಸ್ ಆಗಿತ್ತು; ರಾಜಮೌಳಿ
ಈ ಶೀರ್ಷಿಕೆಯನ್ನು ತಾವೆಂದಿಗೂ ವ್ಯಾಪಾರಿಕೋನದಿಂದ ನೋಡಿಲ್ಲವೆಂದೂ, ಒಂದು ರೂಪಾಯಿಯನ್ನೂ ಪಡೆಯುವ ಯೋಚನೆ ತಮಗೆ ಬಂದಿರಲಿಲ್ಲವೆಂದೂ ಸುಬ್ಬಾರೆಡ್ಡಿ ಸ್ಪಷ್ಟಪಡಿಸಿದರು. ‘ಶೀರ್ಷಿಕೆ ಎನ್ನುವುದು ನನಗೆ ಕೇವಲ ಒಂದು ಭಾವನೆ. ಅದನ್ನು ಮಾರಾಟ ಮಾಡಲು ಅಲ್ಲ, ಬದಲಿಗೆ ಉತ್ತಮ ಸಿನಿಮಾಗಾಗಿ ನೀಡಲು ನಾನು ಸಿದ್ಧನಾದೆ’ ಎಂದು ಅವರು ಹೇಳಿದ್ದಾರೆ. ಆ ಮೂಲಕ ತಾವು ಈ ಟೈಟಲ್ ನೀಡಲು ನಿರ್ಮಾಣ ಸಂಸ್ಥೆಯಿಂದ ಹಣವನ್ನೇ ಪಡೆದಿಲ್ಲ ಎಂದು ಹೇಳಿದ್ದಾರೆ.
ನಿರ್ದೇಶಕರ ಸಂಘದ ಮಾಜಿ ಅಧ್ಯಕ್ಷ ವೀರಶಂಕರ್ ಮಾತನಾಡಿ, ಆರಂಭದಲ್ಲಿ ಸುಬ್ಬಾರೆಡ್ಡಿ ಆ ಶೀರ್ಷಿಕೆಯೊಂದಿಗೆ ಭಾವುಕವಾಗಿ ಗುರುತಿಸಿಕೊಂಡಿದ್ದರು, ಹಾಗಾಗಿ ತಕ್ಷಣವೇ ಅವರ ಬಳಿ ಮಾತನಾಡಲು ಸಾಧ್ಯವಾಗಿರಲಿಲ್ಲ ಎಂದರು. ನಂತರ ರಾಜಮೌಳಿ ಹಾಗೂ ಕೆ.ಎಲ್. ನಾರಾಯಣರಂತಹ ದಿಗ್ಗಜರ ಚಿತ್ರಕ್ಕೆ ಶೀರ್ಷಿಕೆ ನೀಡಿದರೆ ಇಡೀ ಚಿತ್ರರಂಗಕ್ಕೆ ಒಳ್ಳೆಯ ಸಂದೇಶ ರವಾನೆಯಾಗುತ್ತದೆ ಎಂದು ವಿವರಿಸಿದಾಗ, ಸುಬ್ಬಾರೆಡ್ಡಿ ತಕ್ಷಣವೇ ಒಪ್ಪಿಕೊಂಡರು ಎಂದು ತಿಳಿಸಿದರು. ಶೀರ್ಷಿಕೆಗಳನ್ನು ಹಣಕ್ಕಾಗಿ ಎದುರು ನೋಡದೆ, ಚಿತ್ರರಂಗದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪರಸ್ಪರ ಸಹಕರಿಸಿಕೊಳ್ಳಬೇಕು ಎಂಬುದಕ್ಕೆ ಈ ನಿರ್ಧಾರವು ಉತ್ತಮ ಉದಾಹರಣೆಯಾಗಿದೆ ಎಂದು ವೀರಶಂಕರ್ ಅಭಿಪ್ರಾಯಪಟ್ಟರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 5:47 pm, Fri, 24 July 26
