ವಿಚಿತ್ರ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿImage Credit source: tv9 kannada
ವಿಜಯಪುರ, ಫೆಬ್ರವರಿ 25: ಒಂದು ಕಾಲದಲ್ಲಿ ಆ ಕುಟುಂಬದಲ್ಲಿ (family) ಸಂತಸ ಮನೆ ಮಾಡಿತ್ತು. ಆದರೆ ಅದ್ಯಾವ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ, ಕಳೆದ 16 ವರ್ಷಗಳಿಂದ ಇಡೀ ಕುಟುಂಬ ನರಕಯಾತನೆ ಅನುಭವಿಸುತ್ತಿದೆ. ಕಣ್ಣೀರಿನಲ್ಲೇ ಕೈ ತೊಳೆಯುವಂತಾಗಿದೆ. ಓರ್ವ ಪುತ್ರ ಅಕಾಲಿಕ ಮರಣ ಹೊಂದಿದರೆ, ಇಬ್ಬರಿಗೆ ವಿಚಿತ್ರ ಸಮಸ್ಯೆಗಳು (mysterious problems) ಎದುರಾಗುತ್ತಿವೆ. ಕಂಡಕಂಡ ದೇವಸ್ಥಾನಗಳನ್ನು ಸುತ್ತಿದರೂ ಸಮಸ್ಯೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ. ಇದನ್ನು ಬಾನಾಮತಿ ಎನ್ನಬೇಕೋ, ಬೇರೆ ವಿಚಿತ್ರ ಸಮಸ್ಯೆ ಎನ್ನಬೇಕೋ ಗೊತ್ತಿಲ್ಲ, ಒಟ್ಟಿನಲ್ಲಿ ಕುಟುಂಬ ನಲುಗಿ ಹೋಗಿದೆ.
ವಿಚಿತ್ರ ಸಮಸ್ಯೆಗೆ ತುತ್ತಾದ ಇಡೀ ಕುಟುಂಬ
ತಮ್ಮಾರಾಯ ಪಾಟೀಲ್ ಹಾಗೂ ಗಂಗೂಬಾಯಿ ದಂಪತಿಗೆ ಬಸವರಾಜ ಹಾಗೂ ಸುನೀಲ ಎಂಬ ಇಬ್ಬರು ಗಂಡು ಹಾಗೂ ಸುಜಾತಾ, ಸುವರ್ಣಾ, ಸುನೀತಾ ಎಂಬ ಮೂವರು ಹೆಣ್ಣು ಮಕ್ಕಳು. ಇವರಲ್ಲಿ ಸುನೀಲ್ ಪಾಟೀಲ್ ಹಾಗೂ ಸುನೀತಾಗೆ ವಿಚಿತ್ರ ಸಮಸ್ಯೆಗೆ ತುತ್ತಾಗಿದ್ದಾರೆ. ಇವರಿಬ್ಬರು ಬಾಲ್ಯದಿಂದಲೇ ಸಮಸ್ಯೆ ಅನುಭವಿಸುತ್ತಿದ್ದು, ನರಕಯಾತನೆ ಪಡುತ್ತಿದ್ದಾರೆ. ಮೂಲತಃ ಚಡಚಣ ತಾಲೂಕಿನ ಉಮರಾಣಿ ಗ್ರಾಮದವರು. ಸುನೀಲ್ ಹಾಗೂ ಸುನೀತಾ ಪ್ರಾಥಮಿಕ ಶಾಲೆಗೆ ಹೋಗುತ್ತಿರೋವಾಗ ಇವರ ಮೈಮೇಲೆ ತನ್ನಿಂದ ತಾನೇ ಗಾಯಗಳಾಗಿ ರಕ್ತ ಸೋರಲು ಆರಂಭವಾಗುತ್ತಿತ್ತು. ಇವರ ಬಟ್ಟೆಬರೆಗಳಿಗೆ ತನ್ನಿಂದ ತಾನೇ ಬೆಂಕಿ ಹೊತ್ತಿಕೊಂಡು ಸುಟ್ಟು ಹೋಗುತ್ತಿತ್ತು.
ಇದನ್ನೂ ಓದಿ: ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಚಿನ್ನಾಭರಣಗಳು ಇಟ್ಟಲ್ಲಿಯೇ ಮಾಯವಾಗಿ ಹೋಗಿವೆ. ಅಮಾವಾಸ್ಯೆ ಹಾಗೂ ಹುಣ್ಣಿಮೆಯ ವೇಳೆ ಈ ರೀತಿ ಆಗುತ್ತಿತ್ತು. ಇದೇ ಚಿಂತೆಯಲ್ಲಿ ಇವರ ಹಿರಿಯ ಪುತ್ರ ಬಸವರಾಜ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದರಿಂದ ಬೇಸತ್ತು, ತಮ್ಮೂರು ಉಮರಾಣಿ ಬಿಟ್ಟು ವಿಜಯಪುರ ನಗರದಲ್ಲಿ ಮನೆ ಮಾಡಿದರೂ ಈ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆಯಂತೆ. ಬಳಿಕ ಸುನೀಲನ ತಾಯಿಯ ತವರೂರು ವಿಜಯಪುರ ತಾಲೂಕಿನ ಕನ್ನೂರು ಗ್ರಾಮದ ಸೋದರ ಮಾವನ ಮನೆಗೆ ಬಂದರೂ ಈ ವಿಚಿತ್ರ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ ಹೊರತು ಕಡಿಮೆ ಆಗಿಲ್ಲ. ಸೋದರಳಿಯ ಹಾಗೂ ಸೋದರ ಸೊಸೆಯ ಸಮಸ್ಯೆಯಿಂದ ಇಡೀ ಕುಟುಂಬ ಕಣ್ಣೀರು ಹಾಕುವಂತಾಗಿದೆ.
ಕಳೆದ 16 ವರ್ಷಗಳಿಂದ ಪಾಟೀಲ್ ಕುಟುಂಬದವರಿಗೆ ವಿಚಿತ್ರ ಕಾಟ ಮುಂದುವರೆದಿದೆ. ಆರಂಭದಲ್ಲಿ ಅಮಾವಾಸ್ಯೆ ಹಾಗೂ ಹುಣ್ಣಿಮೆಯ ವೇಳೆ ಮಾತ್ರ ಸುನೀತಾ ಹಾಗೂ ಸುನೀಲ್ಗೆ ದೇಹದ ಮೇಲೆ ತನ್ನಿಂದ ತಾನೇ ಗಾಯಗಳಾಗುವುದು, ರಕ್ತ ಸುರಿಯುವುದಾಗುತ್ತಿತ್ತು. ಹಣೆ, ಕೈ, ಎದೆ ಭಾಗ, ಹೊಟ್ಟೆ, ಬೆನ್ನು, ತೊಡೆ ಹಾಗೂ ಕಾಲುಗಳ ಮೇಲೆ ಗಾಯಗಳಾಗಿ ರಕ್ತ ಸುರಿಯುತ್ತದೆ.
ಬ್ಲೇಡ್ನಿಂದ ಹರಿದಂತೆ ಗಾಯಗಳಾಗುತ್ತವೆ. ಉರ್ದು ಭಾಷೆಯನ್ನು ಹೋಲುವ ಗುರುತುಗಳು, ಅಂಕಿಗಳು, ಅರ್ಧ ಚಂದ್ರ ನಕ್ಷತ್ರದ ಗುರುತು ಹೋಲುವ ಚಿತ್ರಗಳು ರಕ್ತದಲ್ಲೇ ಮೂಡುತ್ತವೆ. ಕಳೆದ ಮೂರು ದಿನಗಳ ಹಿಂದೆ ಸುನೀಲ್ ಕಿವಿಯಲ್ಲಿ ರಕ್ತ ಸುರಿದು ಕೇಳದಂತಾಗಿವೆ. ಅದಕ್ಕೂ ಮುನ್ನ ಸುನೀಲ್ ಹಾಗೂ ಸುನೀತಾಗೆ ಸೇರಿದ ವಸ್ತುಗಳಿಗೆ ಬೆಂಕಿ ಬಿದ್ದು ಎಲ್ಲವೂ ಸುಟ್ಟು ಕರಕಲಾಗಿವೆ. ತನ್ನಿಂದ ತಾನೇ ಬೆಂಕಿ ಹೊತ್ತಿ ಉರಿದು ಹೋಗಿವೆ. 250 ರಿಂದ 300 ಗ್ರಾಂ ಚಿನ್ನಾಭರಣ ಸಹ ಇಟ್ಟಲ್ಲಿಯೇ ಮಾಯವಾಗಿವೆಯಂತೆ.
ನಮ್ಮ ಸಮಸ್ಯೆ ಯಾರಾದರೂ ಬಗೆಹರಿಸಿ: ಕಣ್ಣೀರಿಟ್ಟ ತಾಯಿ
ಈ ಸಮಸ್ಯೆಯಿಂದಾಗಿ ಸುನೀತಾಗೆ ಇನ್ನು ಮದುವೆ ಆಗಿಲ್ಲ. ಸುನೀಲ್ ಮದುವೆಯಾಗಿದ್ದರೂ ಸಂಸಾರ ಮಾಡಲಾಗುತ್ತಿಲ್ಲ. ತಮ್ಮ ಕುಟುಂಬಕ್ಕೆ ಬಂದ ಈ ವಿಚಿತ್ರ ಸಮಸ್ಯೆಗೆ ಪಾಟೀಲ್ ಕುಟುಂಬ ಕಂಡಕಂಡ ದೇವಸ್ಥಾನಗಳನ್ನು ಸುತ್ತಿದರೂ ಯಾವುದೇ ಪ್ರಯೋಜನವಾಗಿಲ್ಲ. ತಂತ್ರ ಮಂತ್ರಗಳನ್ನು ಮಾಡಿಸಿದರೂ ಯಾವುದೇ ಪರಿಹಾರ ಸಿಕ್ಕಿಲ್ಲ. ನಮ್ಮ ಸಮಸ್ಯೆಗೆ ಪರಿಹಾರವೇ ಇಲ್ವಾ? ಈ ಸಮಸ್ಯೆಯನ್ನು ಯಾರಾದರೂ ಬಗೆಹರಿಸಿ ಎಂದು ಸುನೀಲ್ ತಾಯಿ ಗಂಗೂಬಾಯಿ ಪಾಟೀಲ್ ಕಣ್ಣೀರು ಹಾಕಿದರು.
ಇದನ್ನೂ ಓದಿ: ವಿಜಯಪುರ: 56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
ಕೇಳಲು ವಿಚಿತ್ರವಾದರು ಸಹ ಇಡೀ ಕುಟುಂಬ ಮಾತ್ರ ವಿಚಿತ್ರ ಸಮಸ್ಯೆಗೆ ತುತ್ತಾಗಿ ಬಳಲಿ ಬೆಂಡಾಗಿದೆ. ತಮಗೆ ಒದಗಿರುವ ಸಂಕಷ್ಟ ದೂರಾದರೆ ಸಾಕು ಎಂದು ಇಡೀ ಕುಟುಂಬ ರೋಧಿಸುತ್ತಿದೆ. ಮೇಲ್ನೋಟಕ್ಕೆ ವಾಮಾಚಾರವಾಗಿರುವ ರೀತಿ ಕಂಡುಬಂದಿದೆ. ಜೊತೆಗೆ ಬೇರೆ ಏನಾದರೂ ಸಮಸ್ಯೆ ಇದ್ದರೂ ಇರಬಹುದು ಎನ್ನಲಾಗುತ್ತಿದೆ. ಮುಂದೆ ಏನಾಗುತ್ತದೆ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
