‘ವಿಜಯ್ ಅತ್ಯಂತ ಸಮರ್ಥ ಮುಖ್ಯಮಂತ್ರಿ’: ಮುಕ್ತಕಂಠದಿಂದ ಹೊಗಳಿದ ನಟ ವಿಶಾಲ್ – Kannada News | CM Vijay allows Five shows a day for new Tamil films in TN Actor Vishal reacts

ತಮಿಳುನಾಡು ಮುಖ್ಯಮಂತ್ರಿ ಹಾಗೂ ಖ್ಯಾತ ನಟ ಸಿ. ಜೋಸೆಫ್ ವಿಜಯ್ (CM Vijay) ಅವರು ತಮಿಳು ಚಿತ್ರರಂಗದ ನೆರವಿಗಾಗಿ ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದ್ದಾರೆ. ಚಿತ್ರರಂಗದಲ್ಲಿ ಎದುರಾಗಿರುವ ಪ್ರಸ್ತುತ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಚಿತ್ರೋದ್ಯಮಿಗಳು ಇತ್ತೀಚೆಗಷ್ಟೇ ಸಿಎಂ ಅವರಿಗೆ ಕೆಲವು ಮನವಿಗಳನ್ನು ಸಲ್ಲಿಸಿದ್ದರು. ಇದಕ್ಕೆ ತಕ್ಷಣವೇ ಸ್ಪಂದಿಸಿರುವ ಮುಖ್ಯಮಂತ್ರಿಗಳು, ಇನ್ಮುಂದೆ ರಾಜ್ಯದಲ್ಲಿ ಹೊಸದಾಗಿ ಬಿಡುಗಡೆಯಾಗುವ ಸಿನಿಮಾಗಳಿಗೆ ಮೊದಲ ವಾರದಲ್ಲಿ ದಿನಕ್ಕೆ 5 ಪ್ರದರ್ಶನಗಳನ್ನು ನಡೆಸಲು ಚಿತ್ರಮಂದಿರಗಳಿಗೆ ಅನುಮತಿ ನೀಡಿದ್ದಾರೆ. ದಳಪತಿ ವಿಜಯ್ ಅವರ ಈ ಮಹತ್ವದ ನಿರ್ಧಾರವನ್ನು ಕಾಲಿವುಡ್ ನಟ ವಿಶಾಲ್ (Vishal) ಮುಕ್ತಕಂಠದಿಂದ ಶ್ಲಾಘಿಸಿದ್ದು, ವಿಜಯ್ ಅವರನ್ನು ‘ಅತ್ಯಂತ ಸಮರ್ಥ ನಟ, ರಾಜಕಾರಣಿ’ ಎಂದು ಬಣ್ಣಿಸಿದ್ದಾರೆ.

ಮುಖ್ಯಮಂತ್ರಿಗಳ ನಿರ್ಧಾರದ ಬೆನ್ನಲ್ಲೇ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ನಟ ವಿಶಾಲ್, ‘ನಮ್ಮ ಪ್ರೀತಿಯ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರೇ, ಜನಸಾಮಾನ್ಯರ ನೆಚ್ಚಿನ ನಾಯಕ ಹಾಗೂ ರಾಜಕೀಯಕ್ಕೆ ಬಂದ ಅತ್ಯಂತ ಪ್ರಭಾವಶಾಲಿ ನಟರಾದ ನಿಮಗೆ ಧನ್ಯವಾದಗಳು. ಚಿತ್ರರಂಗದ ಸದ್ಯದ ಕಷ್ಟದ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ಹೊಸ ಚಿತ್ರಗಳು ಬಿಡುಗಡೆಯಾದ ಮೊದಲ 7 ದಿನಗಳವರೆಗೆ ದಿನಕ್ಕೆ 5 ಪ್ರದರ್ಶನಗಳನ್ನು ಮಾಡಲು ಅನುಮತಿ ಜಾರಿಗೊಳಿಸಿದ್ದಕ್ಕಾಗಿ ಕೃತಜ್ಞತೆಗಳು’ ಎಂದು ಬರೆದುಕೊಂಡಿದ್ದಾರೆ.

ನಟ ವಿಶಾಲ್ ಪೋಸ್ಟ್:

ಅಲ್ಲದೆ, ‘ಮುಂದಿನ ದಿನಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲಾ ವಲಯಗಳಲ್ಲೂ ಇಂತಹ ಹಲವು ಸರ್ಕಾರಿ ಆದೇಶಗಳು ಹೊರಬೀಳಲಿ. ಆ ಮೂಲಕ ಪ್ರಗತಿಪರ ಬೆಳವಣಿಗೆಯಾಗಲಿ ಎಂದು ಎದುರು ನೋಡುತ್ತಿದ್ದೇನೆ. ನಮ್ಮ ಇಡೀ ಚಿತ್ರರಂಗದ ಪರವಾಗಿ ನಿಮಗೆ ದೊಡ್ಡ ಶಿಳ್ಳೆ’ ಎಂದು ವಿಶಾಲ್ ಸಂತಸ ವ್ಯಕ್ತಪಡಿಸಿದ್ದಾರೆ.

ಸೋಮವಾರ ಮುಖ್ಯಮಂತ್ರಿ ವಿಜಯ್ ಅವರ ಅಧಿಕೃತ ‘ಎಕ್ಸ್’ ಖಾತೆಯಿಂದ ಈ ಕುರಿತು ಪ್ರಕಟಣೆಯೊಂದನ್ನು ಬಿಡುಗಡೆ ಮಾಡಲಾಗಿದೆ. ‘ಚಲನಚಿತ್ರ ರಂಗದ ಗಣ್ಯರು ಏಪ್ರಿಲ್ 16ರಂದು ತಮಿಳುನಾಡಿನ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸಿ. ಜೋಸೆಫ್ ವಿಜಯ್ ಅವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳನ್ನು ಮಂಡಿಸಿದ್ದರು. ಅವುಗಳಲ್ಲಿ ಪ್ರಮುಖವಾಗಿ, ತಮಿಳುನಾಡಿನಾದ್ಯಂತ ಚಿತ್ರಮಂದಿರಗಳಲ್ಲಿ ಎಲ್ಲಾ ಸಿನಿಮಾಗಳಿಗೆ ದಿನಕ್ಕೆ ಐದು ಪ್ರದರ್ಶನಗಳನ್ನು ನಡೆಸಲು ಅನುಮತಿ ನೀಡಬೇಕೆಂದು ಕೋರಿದ್ದರು’ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಸಿಎಂ ವಿಜಯ್ ಭೇಟಿ ಮಾಡಿ 6 ಬೇಡಿಕೆ ಇಟ್ಟ ನಟ ಕಮಲ್ ಹಾಸನ್; ಏನದು?

‘ಚಿತ್ರರಂಗದ ಈ ಮನವಿಯನ್ನು ಪರಿಗಣಿಸಿದ ತಮಿಳುನಾಡು ಮುಖ್ಯಮಂತ್ರಿಗಳು, ‘ತಮಿಳುನಾಡು ಸಿನಿಮಾ ಥಿಯೇಟರ್ಸ್ (ರೆಗ್ಯುಲೇಶನ್) ನಿಯಮಾವಳಿ’ಗೆ ತಿದ್ದುಪಡಿ ತಂದಿದ್ದಾರೆ. ಇದರ ಪ್ರಕಾರ, ತಮಿಳುನಾಡಿನ ಎಲ್ಲಾ ಚಿತ್ರಮಂದಿರಗಳಲ್ಲಿ ಹೊಸದಾಗಿ ಬಿಡುಗಡೆಯಾಗುವ ತಮಿಳು ಸಿನಿಮಾಗಳಿಗೆ ಬಿಡುಗಡೆಯಾದ ದಿನದಿಂದ ಏಳು ದಿನಗಳವರೆಗೆ ಪ್ರತಿದಿನ ಐದು ಪ್ರದರ್ಶನಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಇದರೊಂದಿಗೆ ಸ್ಥಳೀಯ ಹಬ್ಬ ಹರಿದಿನಗಳು, ಸಾರ್ವಜನಿಕ ರಜಾದಿನಗಳು, ಶನಿವಾರ ಮತ್ತು ಭಾನುವಾರಗಳಲ್ಲೂ ದಿನಕ್ಕೆ 5 ಪ್ರದರ್ಶನಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 3:57 pm, Tue, 26 May 26

Source link

Leave a Reply

Your email address will not be published. Required fields are marked *