ತೆಲುಗು ಚಿತ್ರರಂಗದ ಖ್ಯಾತ ನಟ ವಿಜಯ್ ದೇವರಕೊಂಡ (Vijay Deverakonda) ಈಗ ಕೇವಲ ಸಿನಿಮಾಗಳಿಂದ ಮಾತ್ರವಲ್ಲದೆ, ತಮ್ಮ ಸಮಾಜಮುಖಿ ಕೆಲಸಗಳಿಂದಲೂ ಸುದ್ದಿಯಲ್ಲಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಸಾಮಾಜಿಕ ಪ್ರಜ್ಞೆಯುಳ್ಳ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ವಿಜಯ್ ಅವರ ಇತ್ತೀಚಿನ ನಡೆಗಳು, ಈಗ ರಾಜಕೀಯ (Politics) ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿವೆ.
ಕೆಲ ದಿನಗಳ ಹಿಂದಷ್ಟೇ ಆರ್ಥಿಕವಾಗಿ ಹಿಂದುಳಿದ, ಓದಿನಲ್ಲಿ ಮುಂದಿರುವ ಶಾಲಾ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ಹೊಸ ಸಾಮಾಜಿಕ ಕಾರ್ಯಕ್ರಮವನ್ನು ಘೋಷಿಸಿ ವಿಜಯ್ ದೇವರಕೊಂಡ ಎಲ್ಲರ ಗಮನ ಸೆಳೆದಿದ್ದರು. ಇದರ ಬೆನ್ನಲ್ಲೇ ಅವರ ಮತ್ತೊಂದು ಜನಪರ ಕಾರ್ಯ ಈಗ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಹರೀಶ್ ರಾವ್ ಜೊತೆ ಸಿದ್ದಿಪೇಟೆ ಆಸ್ಪತ್ರೆಗೆ ಭೇಟಿ:
ಇತ್ತೀಚೆಗೆ ವಿಜಯ್ ದೇವರಕೊಂಡ ಅವರು ತೆಲಂಗಾಣದ ಸಿದ್ದಿಪೇಟೆಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಆಸ್ಪತ್ರೆಯು ಮಕ್ಕಳಿಗೆ ಯಶಸ್ವಿಯಾಗಿ 500ಕ್ಕೂ ಹೆಚ್ಚು ಹೃದ್ರೋಗ ಶಸ್ತ್ರಚಿಕಿತ್ಸೆಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಶೇಷವೆಂದರೆ, ವಿಜಯ್ ದೇವರಕೊಂಡ ಅವರು ಬಿಆರ್‌ಎಸ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಹರೀಶ್ ರಾವ್ ಅವರೊಂದಿಗೆ ಈ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆದ ಮಕ್ಕಳೊಂದಿಗೆ ಸುದೀರ್ಘವಾಗಿ ಸಂವಾದ ನಡೆಸಿದರು.
ರಾಜಕೀಯ ಎಂಟ್ರಿಯ ವದಂತಿ?
ವಿಜಯ್ ದೇವರಕೊಂಡ ಅವರ ಈ ಸಾಮಾಜಿಕ ಜವಾಬ್ದಾರಿಯ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಂದ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಕೇವಲ ಸ್ಟಾರ್ ನಟನಾಗಿ ಉಳಿಯದೇ, ತಮ್ಮೊಳಗಿನ ಮಾನವೀಯ ಗುಣವನ್ನು ಅವರು ಜಗತ್ತಿಗೆ ತೋರಿಸುತ್ತಿದ್ದಾರೆ. ಅವರ ಈ ಸರಣಿ ಸಮಾಜ ಸೇವೆ ಮತ್ತು ರಾಜಕೀಯ ನಾಯಕರೊಂದಿಗಿನ ಒಡನಾಟವನ್ನು ಕಂಡು ಸಾಮಾಜಿಕ ಜಾಲತಾಣಗಳ ಒಂದು ವಲಯದಲ್ಲಿ ಅವರು ರಾಜಕೀಯಕ್ಕೆ ಬರಲಿದ್ದಾರೆ ಎಂಬ ಗುಸುಗುಸು ಆರಂಭವಾಗಿದೆ. ಭವಿಷ್ಯದ ರಾಜಕೀಯ ಪ್ರವೇಶಕ್ಕೆ ಇವೆಲ್ಲವೂ ಮುನ್ನುಡಿಯೇ ಎಂಬ ಪ್ರಶ್ನೆಗಳನ್ನು ನೆಟ್ಟಿಗರು ಎತ್ತುತ್ತಿದ್ದಾರೆ.
ಇದನ್ನೂ ಓದಿ: ‘ರೌಡಿ ಜನಾರ್ದನ’ ವಿಜಯ್ ದೇವರಕೊಂಡ ಎದೆ ಮೇಲೆ ಕಾಲಿಟ್ಟ ನಟಿ ಕೀರ್ತಿ ಸುರೇಶ್
‘ಮಾನವೀಯ ಪ್ರಯತ್ನಗಳಿಗೆ ಯಾವುದೇ ರಾಜಕೀಯ ಬಣ್ಣ ಬೇಡ’
ಆದರೆ, ಈ ವದಂತಿಗಳನ್ನು ವಿಜಯ್ ದೇವರಕೊಂಡ ಅವರ ಅಭಿಮಾನಿಗಳು ತೀವ್ರವಾಗಿ ತಳ್ಳಿಹಾಕಿದ್ದಾರೆ. ‘ವಿಜಯ್ ಅವರಿಗೆ ಮೊದಲಿನಿಂದಲೂ ಸಮಾಜ ಸೇವೆ ಮಾಡುವುದು ಮತ್ತು ಜನರಿಗೆ ಸಹಾಯ ಮಾಡುವುದು ಎಂದರೆ ಇಷ್ಟ. ಅವರ ಮಾನವೀಯ ಪ್ರಯತ್ನಗಳಿಗೆ ಯಾವುದೇ ರಾಜಕೀಯ ಬಣ್ಣ ಬಳಿಯಬೇಡಿ’ ಎಂದು ಫ್ಯಾನ್ಸ್ ಮನವಿ ಮಾಡಿದ್ದಾರೆ. ಸದ್ಯಕ್ಕಂತೂ ವಿಜಯ್ ದೇವರಕೊಂಡ ಅವರ ಈ ಜನಸ್ನೇಹಿ ಕಾರ್ಯ ಅವರ ಇಮೇಜ್ ಅನ್ನು ಇನ್ನಷ್ಟು ಹೆಚ್ಚಿಸಿರುವುದಂತೂ ಸುಳ್ಳಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
