ಬೆಂಗಳೂರು, ಮೇ.11 : ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿ ಇತಿಹಾಸ ನಿರ್ಮಿಸಿರುವ ಟಿವಿಕೆ (TVK) ಪಕ್ಷದ ನಾಯಕ, ನಟ ಜೋಸೆಫ್ ವಿಜಯ್ ಅವರಿಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಜಯ್ ಅವರಿಗೆ ಶುಭಾಶಯ ಕೋರಿದ ಸಿದ್ದರಾಮಯ್ಯ ಅವರು, ತಮಿಳುನಾಡಿನ ಅಭಿವೃದ್ಧಿಗಾಗಿ ಅವರ ಆಡಳಿತ ಯಶಸ್ವಿಯಾಗಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ನೆರೆಹೊರೆಯ ರಾಜ್ಯಗಳಾದ ಕರ್ನಾಟಕ ಮತ್ತು ತಮಿಳುನಾಡು ನಡುವೆ ಸೌಹಾರ್ದಯುತ ಸಂಬಂಧವನ್ನು ಮುಂದುವರಿಸುವ ಮತ್ತು ಅಂತರ್-ರಾಜ್ಯ ವಿಷಯಗಳಲ್ಲಿ ಸಹಕಾರದಿಂದ ಕೆಲಸ ಮಾಡುವ ಕುರಿತು ಇಬ್ಬರು ನಾಯಕರು ಆಶಯ ವ್ಯಕ್ತಪಡಿಸಿದರು ಎನ್ನಲಾಗಿದೆ. ಸಿನಿಮಾ ರಂಗದಿಂದ ರಾಜಕೀಯಕ್ಕೆ ಬಂದು ಮೊದಲ ಪ್ರಯತ್ನದಲ್ಲೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ವಿಜಯ್ ಅವರ ಸಾಧನೆಯನ್ನು ಸಿದ್ದರಾಮಯ್ಯ ಅವರು ಶ್ಲಾಘಿಸಿದರು. ದಕ್ಷಿಣ ಭಾರತದ ರಾಜಕೀಯದಲ್ಲಿ ಈ ಹೊಸ ಬದಲಾವಣೆಯು ಉಭಯ ರಾಜ್ಯಗಳ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳಿಗೆ ಹೊಸ ವೇಗ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
