ತಮಿಳು ಚಿತ್ರರಂಗದ ನಟ ಇತ್ತೀಚೆಗೆ ರಾಜಕೀಯ ಪ್ರವೇಶಿಸಿ, ತಮಿಳುನಾಡು ರಾಜಕಾರಣದಲ್ಲೂ ಸಕ್ರಿಯರಾಗಿದ್ದಾರೆ. ಅವರು ಸಿಎಂ ಆಗಿದ್ದಾರೆ. ಪ್ರಪಂಚದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ವಿಜಯ್, ತಮ್ಮ ವೃತ್ತಿಜೀವನ ಮಾತ್ರವಲ್ಲದೆ ವೈಯಕ್ತಿಕ ಜೀವನದ ವಿಷಯಗಳಿಗಾಗಿಯೂ ಸುದ್ದಿಯಲ್ಲಿದ್ದಾರೆ.
ಇತ್ತೀಚೆಗೆ ತಮಿಳುನಾಡು ಚುನಾವಣೆಗೆ ಮುನ್ನ, ವಿಜಯ್ ಅವರ ಪತ್ನಿ ಸಂಗೀತಾ ಚೆಂಗಲ್ಪಟ್ಟು ಕುಟುಂಬ ಕಲ್ಯಾಣ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಕೆಲ ಭಿನ್ನಾಭಿಪ್ರಾಯಗಳಿಂದಾಗಿ ದಂಪತಿ ಈ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದ್ದು, ಈ ಸುದ್ದಿ ಭಾರೀ ಸಂಚಲನ ಮೂಡಿಸಿತ್ತು. ಆದರೆ, ಇತ್ತೀಚಿನ ವಿಚಾರಣೆ ವೇಳೆ ಸಂಗೀತಾ ತಮ್ಮ ವಿಚ್ಛೇದನ ಅರ್ಜಿಯನ್ನು ಹಿಂತೆಗೆದುಕೊಳ್ಳುವುದಾಗಿ ಪ್ರಕಟಿಸಿದರು. ಇದರಿಂದಾಗಿ ನ್ಯಾಯಾಲಯವು ಪ್ರಕರಣವನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸಿದೆ. ವಿಜಯ್ ಮತ್ತು ಸಂಗೀತಾ ಮತ್ತೆ ಒಂದಾಗಿರುವುದು ಅವರ ಅಪಾರ ಅಭಿಮಾನಿ ಬಳಗಕ್ಕೆ ಅತಿಯಾದ ಸಂತಸ ತಂದಿದೆ.
ಅಭಿಮಾನಿಯಿಂದ ಹೆಂಡತಿಯಾದ ಕಥೆ
ಶ್ರೀಲಂಕಾದ ಮೂಲ ಹೊಂದಿದ್ದ ತಮಿಳು ಕುಟುಂಬದ ಸಂಗೀತಾ, ತಂದೆಯ ಉದ್ಯಮದ ಹಿನ್ನೆಲೆಯಲ್ಲಿ ಲಂಡನ್‌ನಲ್ಲಿ ನೆಲೆಸಿದ್ದರು. ವಿಜಯ್ ಅಭಿನಯದ ‘ಪೂವೆ ಉನಕ್ಕಾಗ’ ಸಿನಿಮಾ ವೀಕ್ಷಿಸಿದ ಸಂಗೀತಾ, ಅವರ ನಟನೆಯಿಂದ ಆಕರ್ಷಿತರಾಗಿ ನಟನ ದೊಡ್ಡ ಅಭಿಮಾನಿಯಾದರು. ನೆಚ್ಚಿನ ನಟನನ್ನು ಭೇಟಿಯಾಗಲೇಬೇಕೆಂಬ ಹಠದಿಂದ ತಮ್ಮ ಸಹೋದರಿಯೊಂದಿಗೆ ಲಂಡನ್‌ನಿಂದ ಭಾರತಕ್ಕೆ ಬಂದರು. ಹಲವು ಪ್ರಯತ್ನಗಳ ನಂತರ ವಿಜಯ್ ಅವರ ಭೇಟಿಯಾಯಿತು. ವಿದೇಶದಿಂದ ತನ್ನನ್ನು ನೋಡಲು ಬಂದ ಅಭಿಮಾನಿಯ ಪ್ರೀತಿಗೆ ವಿಜಯ್ ಆಶ್ಚರ್ಯಚಕಿತರಾದರು.
ನಂತರ ವಿಜಯ್ ತಮ್ಮ ಮನೆಗೆ ಸಂಗೀತಾ ಅವರನ್ನು ಭೋಜನಕ್ಕೆ ಆಹ್ವಾನಿಸಿದರು. ಅಲ್ಲಿ ವಿಜಯ್ ಅವರ ಪೋಷಕರಿಗೂ ಸಂಗೀತಾ ಪರಿಚಯವಾಯಿತು. ಚೆನ್ನೈನಲ್ಲೇ ಕೆಲ ದಿನಗಳ ಕಾಲ ಉಳಿದುಕೊಂಡಿದ್ದ ಸಂಗೀತಾ, ಚಿತ್ರೀಕರಣದ ಸ್ಥಳಗಳಿಗೂ ಭೇಟಿ ನೀಡುತ್ತಿದ್ದರು. ಸಂಗೀತಾ ಅವರ ಶಾಂತ ಸ್ವಭಾವ ಮತ್ತು ಉನ್ನತ ಗುಣಗಳನ್ನು ಗಮನಿಸಿದ ವಿಜಯ್ ತಂದೆ, ಪ್ರಸಿದ್ಧ ನಿರ್ದೇಶಕ ಎಸ್.ಎ. ಚಂದ್ರಶೇಖರ್, ನೇರವಾಗಿಯೇ ‘ನನ್ನ ಮಗನನ್ನು ಮದುವೆಯಾಗುತ್ತೀರಾ?’ ಎಂದು ಕೇಳಿದರು. ನೆಚ್ಚಿನ ನಟನ ಕುಟುಂಬದಿಂದಲೇ ಬಂದ ಈ ಆಫರ್‌ಗೆ ಸಂಗೀತಾ ತಕ್ಷಣವೇ ಒಪ್ಪಿಗೆ ನೀಡಿದರು.
ತಂದೆ-ತಾಯಿಯ ನಿರ್ಧಾರಕ್ಕೆ ಗೌರವ ನೀಡಿದ ವಿಜಯ್ ಕೂಡ ಮದುವೆಗೆ ಸಮ್ಮತಿಸಿದರು. ನಂತರ, ವಿಜಯ್ ಕುಟುಂಬಸ್ಥರು ಲಂಡನ್‌ಗೆ ತೆರಳಿ ಸಂಗೀತಾ ಪೋಷಕರನ್ನು ಭೇಟಿಯಾಗಿ ಮದುವೆ ನಿಶ್ಚಯಿಸಿದರು. ಆಗಸ್ಟ್ 25, 1999 ರಂದು ಹಿಂದೂ ಸಂಪ್ರದಾಯದಂತೆ ವಿಜಯ್ ಮತ್ತು ಸಂಗೀತಾ ಅವರ ವಿವಾಹ ಅದ್ಧೂರಿಯಾಗಿ ನೆರವೇರಿತು.
ಇದನ್ನೂ ಓದಿ: ತಮಿಳುನಾಡು ಸಿಎಂ ವಿಜಯ್ ವಿರುದ್ಧದ ವಿಚ್ಛೇದನ ಅರ್ಜಿ ವಾಪಾಸ್ ಪಡೆದ ಪತ್ನಿ ಸಂಗೀತಾ; ಕೇಸ್ ಮುಕ್ತಾಯ
ಈ ಸುಂದರ ದಂಪತಿಗೆ 2000 ರಲ್ಲಿ ಸಂಜಯ್ ಹಾಗೂ 2005ರಲ್ಲಿ ದಿವ್ಯ ಸಶಾ ಜನಿಸಿದರು. ವಿಶೇಷವೆಂದರೆ, ‘SANJAY’ ಎಂಬ ಹೆಸರು ‘SAN’githa ಮತ್ತು Vi’JAY’ ಹೆಸರುಗಳ ಮಿಲನವಾಗಿದೆ. ವಿಜಯ್ ಅವರು ತಮ್ಮ ಪತ್ನಿಯನ್ನು ಪ್ರೀತಿಯಿಂದ ‘ಗೀತ್’ ಎಂದು ಕರೆಯುತ್ತಾರೆ. ಇದೀಗ ಮನಸ್ತಾಪಗಳನ್ನು ಮರೆತು ಒಂದಾಗಿರುವ ಈ ದಂಪತಿ ಎಂದೆಂದಿಗೂ ಸಂತೋಷವಾಗಿರಲಿ ಎಂಬುದೇ ಅಭಿಮಾನಿಗಳ ಹಾರೈಕೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 11:00 am, Sat, 8 August 26
