ದೇಹವನ್ನು ಆರೋಗ್ಯವಾಗಿಡಲು ವಿಟಮಿನ್ ಬಿ12 ಅತ್ಯಂತ ಮುಖ್ಯ. ಆದರೆ ಇತ್ತೀಚಿನ ಒಂದು ಅಧ್ಯಯನವು ವಿಟಮಿನ್ ಬಿ12 (Vitamin B12) ಮಟ್ಟದಲ್ಲಿ ಸರಿಯಾದ ಸಮತೋಲನ ಇಲ್ಲದಿದ್ದರೆ ಕ್ಯಾನ್ಸರ್ ಕಣಗಳ ಬೆಳವಣಿಗೆಯಾಗಬಹುದು, ಇವೆರಡಕ್ಕೂ ಸಂಬಂಧ ಇರಬಹುದು ಎಂಬ ಆತಂಕಕಾರಿ ವಿಷಯವನ್ನು ಬಹಿರಂಗಪಡಿಸಿದೆ. ಈ ವಿಚಾರ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಅಧ್ಯಯನದ ಪ್ರಕಾರ, ವಿಟಮಿನ್ ಬಿ12ಗೆ ಸಂಬಂಧಿಸಿದ ಕೆಲವು ಜೀವ ರಾಸಾಯನಿಕ ಪ್ರಕ್ರಿಯೆಗಳು ಕ್ಯಾನ್ಸರ್ ಕಣಗಳು ಬದುಕಿ ಉಳಿಯಲು ಸಹಾಯ ಮಾಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. ಸಾಮಾನ್ಯವಾಗಿ ದೇಹದಲ್ಲಿ ಹಾನಿಗೊಳಗಾದ ಅಥವಾ ವಯಸ್ಸಾದ ಕೋಶಗಳನ್ನು ದೇಹವೇ ನಾಶಪಡಿಸುವ ಪ್ರಕ್ರಿಯೆಯನ್ನು “ಫೆರೋಪ್ಟೋಸಿಸ್” ಎಂದು ಕರೆಯಲಾಗುತ್ತದೆ. ಆದರೆ ಕ್ಯಾನ್ಸರ್ ಕಣಗಳು ಈ ಸಹಜ ಮರಣ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವಲ್ಲಿ ವಿಟಮಿನ್ ಬಿ12 ಸಂಬಂಧಿತ ಕ್ರಿಯೆಗಳು ಸಹಕಾರಿಯಾಗಬಹುದು ಎಂಬುದು ಅಧ್ಯಯನದ ಅಭಿಪ್ರಾಯ.
ಫೆರೋಪ್ಟೋಸಿಸ್ ಎಂದರೇನು?
ಸಾಮಾನ್ಯವಾಗಿ, ಫೆರೋಪ್ಟೋಸಿಸ್ ಎನ್ನುವುದು ದೇಹದ ರಕ್ಷಣಾತ್ಮಕ ವ್ಯವಸ್ಥೆಯ ಒಂದು ಭಾಗ. ಇದು ಹಾನಿಕಾರಕ ಕೋಶಗಳನ್ನು ತೆಗೆದುಹಾಕಿ ಆರೋಗ್ಯ ಕಾಪಾಡುತ್ತದೆ. ಆದರೆ ಕ್ಯಾನ್ಸರ್ ಕೋಶಗಳು ಈ ಪ್ರಕ್ರಿಯೆಯಿಂದ ತಪ್ಪಿಸಿಕೊಂಡರೆ ಅವು ದೇಹದಲ್ಲಿ ವೇಗವಾಗಿ ವೃದ್ಧಿಯಾಗುವ ಸಾಧ್ಯತೆ ಇರುತ್ತದೆ.
ತಜ್ಞರ ಪ್ರಕಾರ, ಮೊಟ್ಟೆ, ಹಾಲು, ಹಾಲು ಉತ್ಪನ್ನಗಳು, ಮಾಂಸ, ಪಪ್ಪು ಧಾನ್ಯಗಳು ಹಾಗೂ ಹಸಿರು ತರಕಾರಿಗಳಲ್ಲಿ ದೊರೆಯುವ ಬಿ12 ದೇಹಕ್ಕೆ ಅಗತ್ಯವಾದ ಪೋಷಕಾಂಶವಾಗಿದೆ. ಇದು ಶಕ್ತಿ ಉತ್ಪಾದನೆ, ನರಗಳ ಆರೋಗ್ಯಕ್ಕೆ ಬಹಳ ಮುಖ್ಯ. ಆದರೆ ವೈದ್ಯರ ಸಲಹೆ ಇಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಬಿ12 ಸಪ್ಲಿಮೆಂಟ್‌ಗಳನ್ನು ಸೇವಿಸುವುದು ಅಪಾಯಕಾರಿಯಾಗಬಹುದು. ಜೊತೆಗೆ ದೀರ್ಘಕಾಲ ಹೈ- ಡೋಸ್ ಸಪ್ಲಿಮೆಂಟ್‌ಗಳನ್ನು ಬಳಸುವುದರಿಂದ ಕೆಲವು ಸಂದರ್ಭಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ವಿಟಮಿನ್ ಬಿ12 ದೇಹಕ್ಕೆ ಅಗತ್ಯವಾದ ಪೋಷಕಾಂಶವಾಗಿದ್ದು ಸಹಜ ಆಹಾರದಿಂದ ದೊರೆಯುವ B12 ಸುರಕ್ಷಿತ. ಆದರೆ ವೈದ್ಯರ ಸಲಹೆ ಇಲ್ಲದೆ ಸಪ್ಲಿಮೆಂಟ್ ಸೇವನೆ ಬೇಡ. ಅಧ್ಯಯನ ಇನ್ನೂ ಆರಂಭಿಕ ಹಂತದಲ್ಲಿದೆ, ಆದ್ದರಿಂದ ಅನಗತ್ಯ ಭಯ ಪಡುವ ಅಗತ್ಯವಿಲ್ಲ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
