Headlines

ವಿದೇಶದಲ್ಲಿ ಧಾರವಾಡದ ಯುವಕನ ಚಮತ್ಕಾರ: ಇದು ಯೋಗದಿಂದ ಬದುಕೇ ಬದಲಾದ ಕಥೆ – Kannada News | Yoga Transformed Life: Dharwad Youth Becomes Vietnam’s Top Yoga Instructor

ರಾಘವೇಂದ್ರ ಕ್ಷತ್ರೀಯImage Credit source: tv9 kannada

ಧಾರವಾಡ, ಫೆಬ್ರವರಿ 27: ಆತ 25 ವರ್ಷದ ಯುವಕ. ತಾನು ಅನಾರೋಗ್ಯಕ್ಕೆ ತುತ್ತಾಗಿದ್ದ ವೇಳೆ ವೈದ್ಯರ ಸಲಹೆ ಮೇರೆಗೆ ಕಲಿತ ವಿದ್ಯೆಯೊಂದು ಇದೀಗ ಆತನನ್ನು ದೊಡ್ಡಮಟ್ಟಕ್ಕೆ ಬೆಳೆಸಿದೆ. ಇಡೀ ವಿಶ್ವವೇ ಇದೀಗ ಯೋಗದತ್ತ (Yoga) ಒಲವು ತೋರಿಸುತ್ತಿರೋವಾಗ ತಾನು ಅನಾರೋಗ್ಯದಿಂದ ಮುಕ್ತವಾಗುವುದರ ಜೊತೆಗೆ ನೂರಾರು ಜನರಿಗೆ ವಿದೇಶದಲ್ಲಿ ಯೋಗವನ್ನೂ ಕಲಿಸುತ್ತಿದ್ದಾರೆ. ಇಂದು ಯೋಗವೇ ಆತನಿಗೆ ಉದ್ಯೋಗವಾಗಿ ಪರಿವರ್ತನೆಯಾಗಿದೆ.

ಕಾಯಿಲೆಗೆ ಯೋಗವೇ ಮದ್ದು

ಧಾರವಾಡ ನಗರದ ಬೂಸಪ್ಪ ವೃತ್ತದ ಬಳಿಯ ನಿವಾಸಿಯಾಗಿರುವ ರಾಘವೇಂದ್ರ ಕ್ಷತ್ರೀಯ ಯೋಗದಲ್ಲಿ ಸಾಧನೆ ಮಾಡಿರುವ ಯುವಕ. ಎಂಬಿಎ ಪದವಿ ಪಡೆದಿರುವ ಇವರಿಗೆ 2018ರಲ್ಲಿ ಅನಾರೋಗ್ಯ ಕಾಡತೊಡಗಿತು. ಈ ವೇಳೆ ಅನೇಕ ವೈದ್ಯರಿಗೂ ತೋರಿಸಿದರೂ ಕಾಯಿಲೆ ವಾಸಿಯಾಗಲೇ ಇಲ್ಲ. ಈ ಸಂದರ್ಭದಲ್ಲಿ ಓರ್ವ ವ್ಯಕ್ತಿ ಯೋಗ ಮಾಡುವಂತೆ ಸಲಹೆ ನೀಡಿದರು. ಅವತ್ತು ಶುರು ಮಾಡಿದ್ದ ಯೋಗ ಇವತ್ತು ರಾಘವೇಂದ್ರನ ಯೋಗಾಯೋಗವೇ ಬದಲಾಗುವಂತೆ ಮಾಡಿತು.

ಇದನ್ನೂ ಓದಿ: ಬೆನ್ನು ನೋವು ಬರುವುದಕ್ಕೆ ಕಾರಣವೇನು? ಯೋಗದ ಮೂಲಕ ಅದನ್ನು ಪರಿಹರಿಸಿಕೊಳ್ಳುವುದು ಹೇಗೆ?

ಮೊದಲು ಒಂದು ವರ್ಷ ಯೋಗ ಮಾಡಿ, ಅದರಲ್ಲಿ ಪರ್ಫೆಕ್ಟ್ ಆದ ಬಳಿಕ ಮತ್ತೆ ಬೇರೆ ಉದ್ಯೋಗಕ್ಕೆ ಸೇರಿಕೊಂಡರು. ಆದರೆ ಅವರಿಗೆ ವಿಯಟ್ನಾಂಗೆ ಹೋಗುವ ಅವಕಾಶ ಸಿಕ್ಕಿತು. ಈ ವೇಳೆ ಅಲ್ಲಿಗೆ ಹೋಗಿ ಯೋಗವನ್ನು ಕಲಿಸಿಕೊಡುವುದನ್ನು ಶುರು ಮಾಡಿದರು. ಇವತ್ತು ರಾಘವೇಂದ್ರ ಯಾವ ಪರಿ ಅಲ್ಲಿ ಬೆಳೆದಿದ್ದಾರೆ ಎಂದರೆ ಆರೇಳು ನೂರು ಜನರಿಗೆ ಇವರು ಯೋಗ ಗುರುವಾಗಿದ್ದಾರೆ. ಸದ್ಯಕ್ಕೆ 300 ಜನರು ನಿತ್ಯವೂ ಇವರ ಬಳಿ ಯೋಗ ಕಲಿಯುತ್ತಿದ್ದಾರೆ. ಇದೀಗ ಯೋಗವೇ ಇವರ ಪಾಲಿನ ಉದ್ಯೋಗವಾಗಿದೆ. ವಿಯಟ್ನಾಂನಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಯೋಗಕ್ಕೆ ತುಂಬಾನೇ ಗೌರವವಿದೆ. ಹೀಗಾಗಿ ಇದನ್ನೇ ವೃತ್ತಿ ಮಾಡಿಕೊಂಡಿರುವ ರಾಘವೇಂದ್ರ ಕಳೆದ ಹಲವಾರು ವರ್ಷಗಳಿಂದ ಅಲ್ಲಿ ಯೋಗ ಮಾಸ್ಟರ್ ಆಗಿ ವೃತ್ತಿ ಮಾಡುತ್ತಿದ್ದಾರೆ.

Yoga

ಆರಂಭದ ದಿನಗಳಲ್ಲಿ ರಾಘವೇಂದ್ರ, ಯೋಗ ತನ್ನ ಪಾಲಿಗೆ ಇಷ್ಟೊಂದು ದೊಡ್ಡ ಗೌರವ ತಂದು ಕೊಡುತ್ತೆ ಅಂದುಕೊಂಡಿರಲಿಲ್ಲ. ಆದರೆ ಯಾವಾಗ ಅವರು ವಿಯಟ್ನಾಂನಲ್ಲಿ ಯೋಗ ಕ್ಲಾಸ್ ಶುರು ಮಾಡಿದರೋ ಆಗ ಯೋಗ ಕಲಿಯಲು ಬರುವವ ಸಂಖ್ಯೆ ಹೆಚ್ಚುತ್ತಲೇ ಹೋಯಿತು.

ಯೋಗ ಕಲಿಯೋದಕ್ಕೂ ಮುನ್ನ ರಾಘವೇಂದ್ರ ದಢೂತಿ ಯುವಕನಾಗಿದ್ದ. ಸುಮಾರು 85 ಕೆಜಿಯಷ್ಟು ತೂಕವಿದ್ದ ಆತನಿಗೆ ಯೋಗ ಅನ್ನೋದು ದೊಡ್ಡ ಔಷಧವಾಗಿ ಪರಿಣಮಿಸಿತು. ನಿತ್ಯವೂ ಯೋಗ ಮಾಡುವ ಮೂಲಕ ಮೊದಲಿಗೆ ತನ್ನ ದೇಹದ ತೂಕವನ್ನು ಕಡಿಮೆ ಮಾಡಿಕೊಂಡು, ಅದರಿಂದಾಗುವ ಲಾಭವನ್ನು ಮನದಟ್ಟು ಮಾಡಿಕೊಂಡ ಬಳಿಕ ವಿಯಟ್ನಾಂಗೆ ಹಾರಿದ ರಾಘವೇಂದ್ರ, ಅಲ್ಲಿ ಭಾರತೀಯ ಯೋಗವನ್ನು ಕಲಿಸಿಕೊಡುತ್ತಿದ್ದಾರೆ.

ರಾಘವೇಂದ್ರ ಕ್ಷತ್ರೀಯ ಧಾರವಾಡಿಗರ ಹೆಮ್ಮೆ

ಇತ್ತೀಚಿನ ದಿನಗಳಲ್ಲಿ ಯೋಗ ವಿಶ್ವ ಮನ್ನಣೆ ಪಡೆದಿದೆ. ದೇಶದಲ್ಲಿ ಮೋದಿ ಸರಕಾರ ಬಂದ ಬಳಿಕ ವಿಶ್ವಮಾನ್ಯತೆಯನ್ನು ಪಡೆಯುವಲ್ಲಿ ಯೋಗ ಯಶಸ್ವಿಯೂ ಆಗಿದೆ. ಆದರೆ ಅದನ್ನು ಕಲಿಸುವವರ ಪೈಕಿ ಹೆಚ್ಚಿನವರು ಭಾರತೀಯರೇ ಆಗಿರೋದ್ರಿಂದ ರಾಘವೇಂದ್ರನಂಥ ಯೋಗ ಶಿಕ್ಷಕರಿಗೆ ಬೇಡಿಕೆ ಹೆಚ್ಚಾಗಿದೆ. ನಿತ್ಯವೂ ಐದು ಗಂಟೆಗಳ ಕ್ಲಾಸ್ ನೀಡುವ ರಾಘವೇಂದ್ರನಿಗೆ ಇದೀಗ ಅದೇ ಅನ್ನ ನೀಡುವ ವೃತ್ತಿಯಾಗಿದೆ. ರಾಘವೇಂದ್ರ ಕ್ಷತ್ರೀಯ ತಮ್ಮೂರಿನ ಯುವಕ ಅನ್ನೋದು ಧಾರವಾಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.

ಇದನ್ನೂ ಓದಿ: 1 ನಿಮಿಷದಲ್ಲಿ 10 ಯೋಗದ ಆಸನ: ವಿಶ್ವ ದಾಖಲೆ ಬರೆದ ಹಾಸನದ ಬಾಲಕಿ

ಎಲ್ಲ ರೋಗಗಳಿಗೂ ಯೋಗ ಅನ್ನೋದು ಒಂದು ಮದ್ದು. ಇದು ದೈಹಿಕ ಶಿಸ್ತಿಯ ಜೊತೆಗೆ ಮಾನಸಿಕ ಒತ್ತಡಗಳನ್ನು ಕೂಡ ನಿವಾರಿಸಬಲ್ಲದು. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಎಲ್ಲ ದೇಶಗಳಲ್ಲಿ ಇದರ ಮಹತ್ವ ಹೆಚ್ಚಾಗುತ್ತಾ ಹೋಗುತ್ತಿದೆ. ಇಂಥ ದಿನಗಳಲ್ಲಿಯೇ ಧಾರವಾಡದ ಈ ಯುವಕ ಬೇರೆ ದೇಶದಲ್ಲಿ ಯೋಗದ ಬಗ್ಗೆ ಪ್ರಚಾರ ಮಾಡೋದಲ್ಲದೇ ಯೋಗ ಕಲಿಕೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿರುವುದು ಸಂತಸದ ಸಂಗತಿಯೇ ಸರಿ. ಒಟ್ಟಿನಲ್ಲಿ ತನ್ನ ಆರೋಗ್ಯ ಸುಧಾರಿಸಿಕೊಳ್ಳಲು ಕಲಿತ ವಿದ್ಯೆಯೊಂದು ಇಂದು ಆತನಿಗೆ ಅನ್ನ ನೀಡುವ ಉದ್ಯೋಗವಾಗಿದ್ದು ವಿಚಿತ್ರವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *