ವಿದೇಶದಲ್ಲಿ ಸಿಲುಕಿರುವ ಕನ್ನಡಿಗರ ಬಗ್ಗೆ ಡಿಸಿಎಂ ಮಾತು; ಶಾಸಕರೇ ಕಾಂಟ್ಯಾಕ್ಟ್‌ಗೆ ಸಿಗ್ತಿಲ್ಲ ಅಂದ್ರೆ ಏನು ಗತಿ!
ಬೆಂಗಳೂರು, ಮಾರ್ಚ್ 01: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇಸ್ರೇಲ್–ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ದುಬೈ ಹಾಗೂ ಇರಾನ್‌ನಲ್ಲಿ ಸಿಲುಕಿರುವ ಕನ್ನಡಿಗರ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivkumar) ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಸಿಲುಕಿಕೊಂಡಿರುವವರೊಂದಿಗೆ ಸ್ವತಃ ಸಂಪರ್ಕ ಸಾಧಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲವೆಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ನಮ್ಮ ಇಬ್ಬರು ಶಾಸಕರಾದ ಭೋಜೇಗೌಡ ಮತ್ತು ಎ.ಸಿ. ಶ್ರೀನಿವಾಸ ಕೂಡ ದುಬೈನಲ್ಲಿ ಇದ್ದಾರೆ. ನಾನು ಸಂಪರ್ಕಕ್ಕೆ ಪ್ರಯತ್ನಪಡುತ್ತಿದ್ದೇನೆ. ಆದರೆ ಕಾಂಟ್ಯಾಕ್ಟ್‌ಗೆ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ದೆಹಲಿ ರೆಸಿಡೆಂಟ್ ಕಮಿಷನರ್ ಸಂಪರ್ಕದಲ್ಲಿರಲು ಸೂಚಿಸಲಾಗಿದೆ ಎಂದು ತಿಳಿಸಿದ ಅವರು, ಎಲ್ಲ ನಾಗರಿಕರ ರಕ್ಷಣೆ ಕೇಂದ್ರ ಸರ್ಕಾರದ ಜವಾಬ್ದಾರಿ ಎಂದರು.ಅಲ್ಲಿ ಲಕ್ಷಾಂತರ ಭಾರತೀಯರು ಇದ್ದಾರೆ. ಕರ್ನಾಟಕ ಮತ್ತು ಕೇರಳದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ ವಿದೇಶಗಳಲ್ಲಿರುವ ಕನ್ನಡಿಗರಿಗೂ ತಟ್ಟಿದ ಯುದ್ಧದ ಬಿಸಿ; ದುಬೈ, ಬಹ್ರಾನ್ನಲ್ಲಿ ಸಿಲುಕಿಕೊಂಡವರೆಷ್ಟು ಗೊತ್ತಾ?
ನಡೆಯುತ್ತಿರುವ ದಾಳಿಗಳನ್ನು ಖಂಡಿಸಿದ ಡಿಸಿಎಂ, ಮಕ್ಕಳ ಶಾಲೆಗಳ ಮೇಲಿನ ದಾಳಿಗಳು ಖಂಡನೀಯ ಎಂದು ಹೇಳಿದರು. ನಮ್ಮ ದೇಶ ಶಾಂತಿಯನ್ನು ನಂಬುತ್ತದೆ. ಇಂತಹ ದಾಳಿಗಳು ಸರಿಯಲ್ಲ. ಆದರೆ ನಾವು ಆತಂಕಪಡಬೇಕಾಗಿಲ್ಲ. ಕೇಂದ್ರ ಸರ್ಕಾರದ ಮೇಲೆ ಅಗತ್ಯ ಒತ್ತಡ ಹೇರಿ ಕ್ರಮ ಕೈಗೊಳ್ಳುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ರಾಜ್ಯ ಸರ್ಕಾರದಿಂದ ಪ್ರತ್ಯೇಕ ಹೆಲ್ಪ್‌ಲೈನ್ ಆರಂಭಿಸುವ ಸಾಧ್ಯತೆ ಇಲ್ಲ, ಏನೇ ಮಾಹಿತಿ ಬಂದರೂ ವಿದೇಶಾಂಗ ಇಲಾಖೆಯಿಂದಲೇ ಬರಬೇಕು ಎಂದ ಅವರು, ಕನ್ನಡ ಸಂಘಟನೆಗಳು ಸಿಲುಕಿರುವವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
