ಬೆಂಗಳೂರು, (ಜೂನ್ 16): 2018-19ರಲ್ಲಿ ಆರಂಭವಾದ 1001 ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ (Karnataka English medium Schools) 7ನೇ ತರಗತಿ ಪೂರೈಸಿದ ಸುಮಾರು 30 ಸಾವಿರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ. ಸರ್ಕಾರವು 8ನೇ ತರಗತಿಗೆ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆರಂಭಿಸದ ಕಾರಣ, ಎಲ್ಲಿಗೆ ಪ್ರವೇಶ ಪಡೆಯಬೇಕೆಂಬ ಗೊಂದಲದಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರಿದ್ದರು. ಹೀಗಾಗಿ ಈ ಬಗ್ಗೆ ಟವಿ9 ವರದಿ ಮಾಡಿತ್ತು. ಇದರ ಬೆನ್ನಲ್ಲೇ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೆ ಪರ್ಯಾಯ ಕ್ರಮಕ್ಕೆ ಶಾಲಾ ಶಿಕ್ಷಣ ಇಲಾಖೆ ಮುಂದಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಾಲಿ ಶಾಲೆಗಳಲ್ಲಿಯೇ 8ನೇ ತರಗತಿಯಿಂದ 10ರವರೆಗೆ ಆಂಗ್ಲ ಮಾಧ್ಯಮ ಶಾಲೆಗಳನ್ನ ಮೇಲ್ದರ್ಜೆಗೆ ಏರಿಸಲು ಮುಂದಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಕೆ ಮಾಡಿದೆ.
ಇಂಗ್ಲೀಷ್ ಮೀಡಿಯಂ ಶಾಲೆಗಳು ಮೇಲ್ದರ್ಜೆಗೆ
ಎಂಟನೇ ತರಗತಿಯಿಂದ 10ನೇ ತರಗತಿವರೆಗೆ ಆಂಗ್ಲ ಮಾಧ್ಯಮ ಆರಂಭಕ್ಕೆ ಶಿಕ್ಷಣ ಇಲಾಖೆ, ಸರ್ಕಾರಕ್ಕೆ ಪ್ರಸ್ತಾವನೆ ನೀಡಿದೆ. ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು ಇದ್ರೆ ಅಲ್ಲಿ ದಾಖಲಾತಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಯಾವ ಭಾಗದಲ್ಲಿ ಎರಡು ಕಿಲೋ ಮೀಟರ್ ವ್ಯಾಪ್ತಿಗಿಂತ ಒಳಗಡೆ ಆಂಗ್ಲ ಮಾಧ್ಯದ ಶಾಲೆಗಳು ಇಲ್ಲವಾದ್ರೆ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿಯೇ 8ನೇ ತರಗತಿಗೆ ಆಂಗ್ಲ ಮಾಧ್ಯಮ ಮೇಲ್ದರ್ಜೆಗೆ ಮಾಡೋದಕ್ಕೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಓದಿದ 30 ಸಾವಿರ ಮಕ್ಕಳು ಅತಂತ್ರ! ಸರ್ಕಾರದ ಎಡವಟ್ಟಿಗೆ ವಿದ್ಯಾರ್ಥಿಗಳ ಭವಿಷ್ಯದ ಕಥೆ ಏನು?
ಅತಂತ್ರದಲ್ಲಿದ್ದ 30 ಸಾವಿರಕ್ಕೂ ಹೆಚ್ಚು ಮಕ್ಕಳು
2018-19ನೇ ಸಾಲಿನಲ್ಲಿ 1 ರಿಂದ 7 ನೇ ತರಗತಿಯವರೆಗೆ ರಾಜ್ಯಾದ್ಯಂತ 1001 ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನ ಪ್ರಾಥಮಿಕ ಶಾಲೆಗಳಲ್ಲಿ ಆರಂಭ ಮಾಡಲಾಗಿತ್ತು. ಈಗ 2018-19ನೇ ಸಾಲಿನಲ್ಲಿ ಒಂದನೇ ತರಗತಿ ಪಾಸ್ ಆದ 30 ಸಾವಿರ ವಿದ್ಯಾರ್ಥಿಗಳು 7 ನೇ ತರಗತಿಯವರೆಗೂ ಆಂಗ್ಲ ಮಾಧ್ಯಮದಲ್ಲಿ ಓದಿ ಪಾಸ್ ಆಗಿದ್ದಾರೆ ಮುಂದೆ ಪ್ರೌಢ ಶಿಕ್ಷಣ 8,9 ಹಾಗೂ 10ನೇ ತರಗತಿಯನ್ನ ಆಂಗ್ಲ ಮಾಧ್ಯಮದಲ್ಲಿ ಓದಬೇಕು ಅಂದ್ರೆ ಸರ್ಕಾರದಲ್ಲಿ ಆಂಗ್ಲ ಮಾಧ್ಯಮದ ಶಾಲೆಗಳಿಗೆ ದಾಖಲಾತಿ ಇಲ್ಲದಾಗಿ ಪರದಾಟವಾಗಿತ್ತು. ಖಾಸಗಿಯಲ್ಲಿ ದಾಖಲಾತಿಗೆ ಆರ್ಥಿಕ ಸಮಸ್ಯೆಯಿಂದ ಪೋಷಕರು ಪರದಾಟವಾಗಿತ್ತು. ಈ ಬಗ್ಗೆ ಟಿವಿ9 ಸುದ್ದಿ ಪ್ರಸಾರ ಬಳಿಕ ಶಿಕ್ಷಣ ಇಲಾಖೆ ಅಲರ್ಟ್ ಆಗಿದೆ.
1ರಿಂದ 7 ನೇ ತರಗತಿಯವರೆಗೆ ಮಾತ್ರ ಆಂಗ್ಲ ಮಾಧ್ಯಮ
ಸರ್ಕಾರದಲ್ಲಿ ಕೇವಲ ಒಂದನೇ ತರಗತಿಯಿಂದ 7 ನೇ ತರಗತಿಯವರೆಗೆ ಮಾತ್ರ ಆಂಗ್ಲ ಮಾಧ್ಯಮದ ಶಾಲೆಗಳಿದ್ದು, ಪ್ರೌಢ ಶಾಲೆಗಳಾ 8 ರಿಂದ 10 ನೇ ತರಗತಿಗೆ ಪ್ರೌಢ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳು ಇಲ್ಲ. ಹೀಗಾಗಿ ಖಾಸಗಿ ಶಾಲೆಗಳಿಗೆ ದಾಖಲಾತಿ ಮಾಡಿಕೊಳ್ಳಲು ಅರ್ಥಿಕ ಶಕ್ತಿ ಪೋಷಕರ ಬಳಿ ಇಲ್ಲ. ಹೀಗಾಗಿ ಸರ್ಕಾರಿ ಶಾಲೆಯ ಸುಮಾರು 30 ಸಾವಿರ ವಿದ್ಯಾರ್ಥಿಗಳು ಮುಂದಿನ ದಾರಿ ಗೊತ್ತಾಗದೇ ಅತಂತ್ರರಾಗಿದ್ದರು. 8ನೇ ತರಗತಿಗೆ ಯಾವ ಶಾಲೆ ಮತ್ತು ಯಾವ ಮಾಧ್ಯಮದಲ್ಲಿ ಓದಬೇಕು ಎನ್ನುವ ಗೊಂದಲ ಎದುರಾಗಿತ್ತು. ಈಗ ಶಾಲಾ ಶಿಕ್ಷಣ ಇಲಾಖೆ ಎಂಟನೇ ತರಗತಿ ಆಂಗ್ಲ ಮಾಧ್ಯಮ ಆರಂಭಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಒಟ್ಟಿನಲ್ಲಿ 30 ಸಾವಿರ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಶಾಲಾ ಶಿಕ್ಷಣ ಹಾಲಿ ಶಾಲೆಗಳಲ್ಲಿಯೇ ಎಂಟನೇ ತರಗತಿಯಿಂದ 10ರವರೆಗೆ ಆಂಗ್ಲ ಮಾಧ್ಯಮ ಶಾಲೆಗಳನ್ನ ಮೇಲ್ದರ್ಜೆಗೆ ಏರಿಸಲು ಮುಂದಾಗಿದೆ.