ಬೆಂಗಳೂರು/ಧಾರವಾಡ, (ಜುಲೈ 31): ಧಾರವಾಡ ಬಿಜೆಪಿ ಮುಖಂಡ ಯೋಗೇಶ್ ಗೌಡ (Yogesh Gowda) ಕೊಲೆ ಕೇಸಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ (Vinay Kulkarni) ಬಿಗ್ ರಿಲೀಫ್ ಸಿಕ್ಕಿದೆ. ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿರುವ ಹೈಕೋರ್ಟ್ (High Court) ವಿಭಾಗೀಯ ಪೀಠ, ಜೀವಾವಧಿ ಶಿಕ್ಷೆಯನ್ನೂ ಅಮಾನತ್ತಿನಲ್ಲಿಟ್ಟಿದೆ. ಇನ್ನೊಂದೆಡೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಹೋಗುವುದಾಗಿ ಮೃತ ಯೋಗೇಶ್ ಗೌಡ ಸಹೋದರ ಗುರನಾಥ್ ಗೌಡ ಹೇಳಿದ್ದಾರೆ. ಆದ್ರೆ, ಯೋಗೇಶ್ ಗೌಡ ಪತ್ನಿ ಮಲ್ಲಮ್ಮ ಸುಪ್ರೀಂ ಕೋರ್ಟ್ಗೆ ಹೋಗುವುದಿಲ್ಲ ಎಂದಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಮಲ್ಲಮ್ಮ, ನಾನು ಯಾರಿಗೂ ಬೆಂಬಲ ನೀಡಲ್ಲ. ನಾನು ಜಮೀನಿನ ಕೆಲಸ ಮಾಡಿ ಬದುಕುತ್ತಿರುವೆ. ಕೆಲವರು ನನ್ನ ಬಗ್ಗೆ ಹಲವು ಮಾತುಗಳನ್ನು ಆಡಿದ್ದಾರೆ. ದೇವರು ಒಳ್ಳೆದು ಮಾಡಿದವರಿಗೆ ಒಳ್ಳೆದಾಗಿದೆ. ಕೆಟ್ಟದನ್ನು ಮಾಡಿದವರಿಗೆ ಕೆಟ್ಟದ್ದು ಆಗತ್ತೆ. ಹಲವರು ಮಲ್ಲಮ್ಮ ದುಡ್ಡು ತಿಂದಾಳು ಎಂದು ಆರೋಪ ಮಾಡಿದ್ದರು. ಈ ಆದೇಶ ಅವರಿಗೆ ತಕ್ಕ ಪಾಠ, ನಾನು ಯಾವುದೇ ದುಡ್ಡು ತೆಗೆದುಕೊಂಡಿಲ್ಲ, ಹಣ ಪಡೆದಿದ್ರೆ ಹಗಲು ರಾತ್ರಿ ದುಡಿಯುತ್ತಿರಲಿಲ್ಲ. ನಾನು ಸುಪ್ರೀಂ ಕೋರ್ಟ್ ಮೊರೆ ಹೋಗಲ್ಲ, ಪಕ್ಷದಿಂದ ಗುರುನಾಥಗೌಡ ಹಾಗೂ ಬಸವರಾಜ ಕೊರವರ ಹಣ ತೆಗೆದುಕೊಂಡಿದ್ದಾರೆ. ಅದಕ್ಕೆ ಮುಂದೆ ಹೋಗುತ್ತಾರೆ. ಯಾವುದೇ ಕಾರಣಕ್ಕೂ ಸುಪ್ರೀಂ ಕೋರ್ಟ್ಗೆ ನಾನು ಹೋಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
