ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ (Ben Stokes) ಕೆಲವೇ ದಿನಗಳ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಟೆಸ್ಟ್ ಪಂದ್ಯದ ನಡುವೆ ಸ್ಟೋಕ್ಸ್ ಈ ನಿರ್ಧಾರ ಪ್ರಕಟಿಸಿದ್ದರು. ಅಚ್ಚರಿಯ ಸಂಗತಿಯೆಂದರೆ ಸ್ಟೋಕ್ಸ್ ನಿವೃತ್ತಿಯ ವಿಚಾರ ಪ್ರಕಟವಾದಾಗ ಅವರು ಮೈದಾನದಲ್ಲಿ ಬೌಲಿಂಗ್ ಮಾಡುತ್ತಿದ್ದರು. ಮೈದಾನದಲ್ಲಿರುವ ಸ್ಟೋಕ್ಸ್ ನಿವೃತ್ತಿ ಘೋಷಿಸಿದ್ದು ಹೇಗೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಸ್ಟೋಕ್ಸ್ ತಮ್ಮ ನಿವೃತ್ತಿ ನಿರ್ಧಾರವನ್ನು ತಂಡದ ಸಹ ಆಟಗಾರರೊಂದಿಗೆ ಹಂಚಿಕೊಳ್ಳುತ್ತಿರುವ ವಿಡಿಯೋವನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ECB) ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿತ್ತು. ಇದೀಗ ಆ ವಿಡಿಯೋ ಬಗ್ಗೆ ಐಸಿಸಿ (ICC) ಗರಂ ಆಗಿದ್ದು, ಕೂಡಲೇ ಆ ವಿಡಿಯೋವನ್ನು ಡಿಲೀಟ್ ಮಾಡುವಂತೆ ತಾಕೀತು ಮಾಡಿದೆ.
ಜೂನ್ 28 ರಂದು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ನಾಟಿಂಗ್‌ಹ್ಯಾಮ್‌ನಲ್ಲಿ ನಡೆದಿತ್ತು. ಈ ಪಂದ್ಯದ ನಾಲ್ಕನೇ ದಿನದಾಟದ ವೇಳೆ, ಸ್ಟೋಕ್ಸ್ ನಿವೃತ್ತಿಯ ಸುದ್ದಿ ಇದ್ದಕ್ಕಿದ್ದಂತೆ ಹೊರಬಿತ್ತು. ಇದಾದ ಸ್ವಲ್ಪ ಸಮಯದ ನಂತರ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಇಂಗ್ಲೆಂಡ್ ಡ್ರೆಸ್ಸಿಂಗ್ ರೂಮ್‌ನಿಂದ ನಾಲ್ಕನೇ ದಿನದ ಆಟ ಪ್ರಾರಂಭವಾಗುವ ಮೊದಲು ತೆಗೆದ ವೀಡಿಯೊವನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿತ್ತು. ಅದರಲ್ಲಿ ಸ್ಟೋಕ್ಸ್ ತಮ್ಮ ನಿವೃತ್ತಿಯ ನಿರ್ಧಾರದ ಬಗ್ಗೆ ಇಡೀ ತಂಡಕ್ಕೆ ತಿಳಿಸಿದ್ದರು. ಈ ವೀಡಿಯೊ ವೈರಲ್ ಆಗಿ ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು.
One of England’s all-time greatest captains, Ben Stokes, has decided to retire from international cricket at the end of this Test match.
Ben, you have been the most inspirational captain, leader and legend this team could have ever hoped for.
We love you so much and wish you… pic.twitter.com/U5grq0F0kj
— England Cricket (@englandcricket) June 28, 2026
ಈ ಹಿಂದೆಯೇ ಎಚ್ಚರಿಕೆ ನೀಡಿದ್ದ ಐಸಿಸಿ
ಇದೀಗ ಐಸಿಸಿ ಆ ವೀಡಿಯೊದ ಬಗ್ಗೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಕೂಡಲೇ ಆ ವಿಡಿಯೋವನ್ನು ಡಿಲೀಟ್ ಮಾಡುವಂತೆ ಇಸಿಬಿಗೆ ತಿಳಿಸಿದೆ ಎಂದು ವರದಿಯಾಗಿದೆ. ಐಸಿಸಿಯ ಈ ಎಚ್ಚರಿಕೆಗೆ ಕಾರಣವೂ ಇದ್ದು, ಇದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಬಣ್ಣಿಸಿದೆ. ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಡ್ರೆಸ್ಸಿಂಗ್ ಕೋಣೆಯೊಳಗೆ ಯಾವುದೇ ರೀತಿಯ ವೀಡಿಯೊವನ್ನು ರೆಕಾರ್ಡ್ ಮಾಡುವುದು ಮತ್ತು ಅದನ್ನು ಪ್ರಸಾರ ಮಾಡುವುದು PMOA ಯ ಆರ್ಟಿಕಲ್ 2.2.11 ರ ನಿಯಮ ಉಲ್ಲಂಘನೆಯಾಗಿದೆ ಎಂದು ಐಸಿಸಿ ಆರೋಪಿಸಿದೆ. ಅಲ್ಲದೆ ಪಂದ್ಯದ ಸಮಯದಲ್ಲಿ ಆಡಿಯೋ ಹೊಂದಿರುವ ಯಾವುದೇ ವೀಡಿಯೊವನ್ನು ಪ್ರಸಾರ ಮಾಡಬಾರದು ಎಂದು ಐಸಿಸಿ ಈ ಹಿಂದೆಯೇ ಇಸಿಬಿಗೆ ಈ ನಿಯಮದ ಬಗ್ಗೆ ಎಚ್ಚರಿಕೆ ನೀಡಿತ್ತು ಎಂದು ಬಿಬಿಸಿ ವರದಿ ಮಾಡಿದೆ.
Sack him … https://t.co/LYQ5ZlYqDE
— Ben Stokes (@benstokes38) July 9, 2026
ತಮಾಷೆಯಾಗಿ ಪ್ರತಿಕ್ರಿಯಿಸಿದ ಸ್ಟೋಕ್ಸ್
ಏತನ್ಮಧ್ಯೆ, ಈ ಘಟನೆಯು ಇಂಗ್ಲೆಂಡ್ ಕ್ರಿಕೆಟ್‌ನಲ್ಲಿ ಹೊಸ ಕೋಲಾಹಲವನ್ನು ಹುಟ್ಟುಹಾಕಿದೆ. ಇಸಿಬಿ ಅಧಿಕಾರಿಗಳು ಅಥವಾ ತಂಡದ ನಿರ್ವಹಣೆಗೆ ನಿಯಮಗಳ ಬಗ್ಗೆ ತಿಳಿದಿಲ್ಲವೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದೀಗ ಬೆನ್ ಸ್ಟೋಕ್ಸ್ ಕೂಡ ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯನ್ನು ಹೊರಹಾಕಿದ್ದು,‘ಅವರನ್ನು ವಜಾಗೊಳಿಸಿ!’ ಎಂದು ಬರೆದು ಸುದ್ದಿಯನ್ನು ಮರು ಪೋಸ್ಟ್ ಮಾಡಿದ್ದಾರೆ. ಈ ಒಂದೇ ಪೋಸ್ಟ್‌ನೊಂದಿಗೆ, ಸ್ಟೋಕ್ಸ್ ಕೆಲವು ದಿನಗಳ ಹಿಂದೆ ತನ್ನನ್ನು ನಾಯಕತ್ವದಿಂದ ಕೆಳಗಿಳಿಸಬೇಕು ಎನ್ನುತ್ತಿದ್ದವರ ಮೇಲೆ ಟೀಕಾಪ್ರಹಾರ ನಡೆಸುತ್ತಿರುವಂತೆ ತೋರುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 5:53 pm, Thu, 9 July 26