ಬೆಂಗಳೂರು, ಫೆಬ್ರವರಿ 19: ಕರ್ನಾಟಕ ರಾಜ್ಯ ಸಾರಿಗೆ ನೌಕರರು ತಮ್ಮ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಇಂದು ಬೆಂಗಳೂರು ಚಲೋ ಪ್ರತಿಭಟನೆ ನಡೆಸಿದ್ದಾರೆ. 38 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಮತ್ತು 2024ರ ಜನವರಿ 1ರಿಂದ ವೇತನ ಪರಿಷ್ಕರಣೆ ಮಾಡಬೇಕೆಂದು ನೌಕರರು ಬಿಗಿಪಟ್ಟು ಹಿಡಿದಿದ್ದು, ಸರ್ಕಾರದ 26 ತಿಂಗಳ ಹಿಂಬಾಕಿ ಮತ್ತು 2025ರ ಏಪ್ರಿಲ್‌ನಿಂದ ವೇತನ ಪರಿಷ್ಕರಣೆಯ ಪ್ರಸ್ತಾವನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.
ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೆಂಗಳೂರು ಚಲೋ ಪ್ರತಿಭಟನೆ ನಡೆಯುತ್ತಿದ್ದು, ಸಂಜೆ 4 ಗಂಟೆಗೆ ಜಂಟಿ ಕ್ರಿಯಾ ಸಮಿತಿ ಸುದ್ದಿಗೋಷ್ಠಿ ನಡೆಸಿ ತಮ್ಮ ಮುಂದಿನ ನಿರ್ಧಾರವನ್ನು ಪ್ರಕಟಿಸಲಿದೆ. ಶುಕ್ರವಾರ (ನಾಳೆ) ಬೆಳಗ್ಗೆಯಿಂದ ರಾಜ್ಯಾದ್ಯಂತ ಬಸ್ ಸಂಚಾರವನ್ನು ಸ್ಥಗಿತಗೊಳಿಸಿ ಸಂಪೂರ್ಣ ಮುಷ್ಕರಕ್ಕೆ ಕರೆ ನೀಡುವ ಸಾಧ್ಯತೆ ದಟ್ಟವಾಗಿದೆ. ನಾವು ಕಷ್ಟದಲ್ಲಿ ದುಡಿಯುವ ವರ್ಗ. ನಮ್ಮ ದುಡಿಮೆಗೆ ತಕ್ಕ ಪ್ರತಿಫಲವನ್ನು ಕೇಳುತ್ತಿದ್ದೇವೆ. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಆಗುವ ಪ್ರಶ್ನೆಯಿಲ್ಲ ಎಂದು ಜಂಟಿ ಕ್ರಿಯಾ ಸಮಿತಿಯ ನಾಯಕರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರ ವೇತನ ಪರಿಷ್ಕರಣೆ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಿಷ್ಟು
ಈ ಕುರಿತು ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, 26 ತಿಂಗಳ ಹಿಂಬಾಕಿ ನೀಡಲು ನಿರ್ಧರಿಸಲಾಗಿದೆ. ನೌಕರರು ಇದರಿಂದ ಸಂತೋಷಪಡಬೇಕು ಮತ್ತು ಸರ್ಕಾರದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. 38 ತಿಂಗಳು ಕೇಳಿದ್ದರು, 26 ತಿಂಗಳು ಕೊಟ್ಟಿದ್ದೇವೆ. ಸದ್ಯ ಅಷ್ಟು ಕೊಟ್ಟಿದ್ದಾರಲ್ಲ ಎಂದು ಸಂತೋಷಪಡಬೇಕು. ಸರ್ಕಾರದ ಪರಿಸ್ಥಿತಿ ಅರ್ಥಮಾಡಿಕೊಳ್ಳಿ. ದಯವಿಟ್ಟು ಸಾರಿಗೆ ನೌಕರರೆಲ್ಲ ಸಹಕಾರ ಮಾಡಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಆದರೆ, ಸಾರಿಗೆ ನೌಕರರ ಸಂಘವು ಸರ್ಕಾರದ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದು, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮುಂದುವರಿಸಲು ನಿರ್ಧರಿಸಿದೆ. ಇಂದಿನ ಸಂಜೆ ಸಭೆಯ ನಂತರ ಬಸ್ ಸಂಚಾರದ ಭವಿಷ್ಯ ನಿರ್ಧಾರವಾಗಲಿದೆ.
ಇಂದು ಎಂದಿನಂತೆ ಬಸ್ ಸಂಚಾರ
ಇಂದು ನಾಲ್ಕು ಸಾರಿಗೆ ನಿಗಮಗಳಿಂದ ಬೆಂಗಳೂರು ಚಲೋಗೆ ಕರೆ ಹಿನ್ನೆಲೆ ರಾಜ್ಯಾದ್ಯಂತ ಸಾರಿಗೆ ಬಸ್ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಬೆಳಿಗ್ಗೆಯಿಂದ ಇಲ್ಲಿಯವರೆಗೂ ಎಲ್ಲಿಯೂ ಅನಾನುಕೂಲಗಳು ಆಗಿರುವ ಬಗ್ಗೆ ವರದಿ ಆಗಿಲ್ಲ. ಬಸ್ ಸಂಚಾರದಲ್ಲಿ ವ್ಯತ್ಯಯ ಆಗದಂತೆ ಕ್ರಮಕೈಗೊಳ್ಳಲು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಆದೇಶ ಮಾಡಿದ್ದು, ತುರ್ತು ಮತ್ತು ಅನಿವಾರ್ಯ ಸಂದರ್ಭ ಹೊರತು ಯಾವುದೇ ರಜೆ ನೀಡಬೇಡಿ ಎಂದು ಸೂಚಿಸಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 10:24 am, Thu, 19 February 26
