ವಿಶ್ವದಲ್ಲೇ ಅತಿದೊಡ್ಡ ರಸ್ತೆ ಜಾಲ ಹೊಂದಿದ ದೇಶವೆಂಬ ದಾಖಲೆ ಭಾರತಕ್ಕೆ – Kannada News | India infrastructure boom largest road network

ನವದೆಹಲಿ, ಜೂನ್ 14: ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಬಹಳ ವೇಗದಲ್ಲಿ ಸಾಗುತ್ತಿರುವ ಭಾರತ, ಇದೀಗ ರಸ್ತೆ ಜಾಲದ ಗಾತ್ರದಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕಾವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ. ಅಮೆರಿಕದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ (CIA) ಬಿಡುಗಡೆ ಮಾಡಿದೆ ಎನ್ನಲಾದ ಹೊಸ ಅಂಕಿ-ಅಂಶಗಳ ಪ್ರಕಾರ, ಜಗತ್ತಿನಲ್ಲೇ ಅತಿಹೆಚ್ಚು ರಸ್ತೆ ಸಂಪರ್ಕ (Road network) ಹೊಂದಿರುವ ದೇಶವಾಗಿ ಭಾರತ ಹೊರಹೊಮ್ಮಿದೆ. ವಿಕಿಪೀಡಿಯಾದಲ್ಲಿ ಪ್ರಕಟವಾಗಿರುವ ಪಟ್ಟಿಯ ಪ್ರಕಾರ, ಭಾರತದಲ್ಲಿ 67 ಲಕ್ಷಕ್ಕೂ ಅಧಿಕ ಕಿ.ಮೀಯಷ್ಟು ರಸ್ತೆ ಸಂಪರ್ಕ ಇದೆ. ಅಮೆರಿಕ, ಚೀನಾಗಿಂತಲೂ ಹೆಚ್ಚು ರಸ್ತೆಗಳು ಭಾರತದಲ್ಲಿ ಇವೆ.

ಅತಿಹೆಚ್ಚು ರಸ್ತೆ ಸಂಪರ್ಕ ಹೊಂದಿರುವ ದೇಶಗಳ ಟಾಪ್-10 ಪಟ್ಟಿ

  1. ಭಾರತ: 67 ಲಕ್ಷ ಕಿ.ಮೀ
  2. ಅಮೆರಿಕಾ: 66 ಲಕ್ಷ ಕಿ.ಮೀ
  3. ಚೀನಾ: 55 ಲಕ್ಷ ಕಿ.ಮೀ
  4. ಬ್ರಜಿಲ್: 20 ಲಕ್ಷ ಕಿಮೀ
  5. ರಷ್ಯಾ: 15 ಲಕ್ಷ ಕಿಮೀ
  6. ಜಪಾನ್: 12 ಲಕ್ಷ ಕಿಮೀ
  7. ಫ್ರಾನ್ಸ್: 10 ಲಕ್ಷ ಕಿಮೀ
  8. ಕೆನಡಾ: 10 ಲಕ್ಷ ಕಿಮೀ
  9. ಆಸ್ಟ್ರೇಲಿಯಾ: 9.7 ಲಕ್ಷ ಕಿಮೀ
  10. ಮೆಕ್ಸಿಕೋ: 8.36 ಲಕ್ಷ ಕಿಮೀ

ಇದನ್ನೂ ಓದಿ: ಎಚ್​ಎಎಲ್​ಗೆಯೇ ಚಳ್ಳೆಹಣ್ಣು ತಿನಿಸಲು ಯತ್ನಿಸಿದ ಹೈದರಾಬಾದ್ ಕಂಪನಿ; ತೇಜಸ್ ಯುದ್ಧವಿಮಾನದ ಬಿಡಿಭಾಗ ಪೂರೈಕೆಯಲ್ಲಿ ವಂಚನೆ; ದೂರು ದಾಖಲು

ಕೇವಲ ಒಟ್ಟು ರಸ್ತೆ ಉದ್ದವಷ್ಟೇ ಅಲ್ಲದೆ, ಭೌಗೋಳಿಕ ವಿಸ್ತೀರ್ಣಕ್ಕೆ ಹೋಲಿಸಿದರೆ ವಿಶ್ವದಲ್ಲೇ ಅತ್ಯಧಿಕ ರಸ್ತೆ ಸಾಂದ್ರತೆ (Road Density) ಹೊಂದಿರುವ ದೇಶಗಳ ಸಾಲಿನಲ್ಲಿ ಭಾರತವೂ ಇದೆ. ಪ್ರತೀ 100 ಚದರ ಕಿಮೀ ವಿಸ್ತೀರ್ಣದ ಪ್ರದೇಶದಲ್ಲಿ 204 ಕಿಮೀಯಷ್ಟು ರಸ್ತೆ ಹೊಂದಿದೆ ಭಾರತ. ಅಂದರೆ ಪ್ರತೀ ಚದರ ಕಿಮೀಗೆ 2 ಕಿಮೀ ರಸ್ತೆ ಹೊಂದಿದೆ. ರಸ್ತೆ ಸಾಂದ್ರತೆಯಲ್ಲಿಲ ಇಸ್ರೇಲ್, ಬೆಲ್ಜಿಯಂ, ನೆದರ್​ಲ್ಯಾಂಡ್ಸ್, ಜಪಾನ್ ಮೊದಲಾದ ದೇಶಗಳಿವೆ.

ಪ್ರತೀ ವರ್ಷ ಭಾರತದಲ್ಲಿ 7-10 ಸಾವಿರ ಕಿಮೀ ರಸ್ತೆ ನಿರ್ಮಾಣ?

ಭಾರತ ಸರ್ಕಾರವು ಸದ್ಯಕ್ಕೆ ವಾರ್ಷಿಕವಾಗಿ ಸುಮಾರು 7,000 ದಿಂದ 10,000 ಕಿಲೋಮೀಟರ್‌ಗಳಷ್ಟು ಹೆದ್ದಾರಿಗಳನ್ನು ಹೊಸದಾಗಿ ನಿರ್ಮಿಸುತ್ತಿದೆ. ಪ್ರತಿ ವರ್ಷ 10,000 ಕಿಲೋಮೀಟರ್ ರಸ್ತೆ ನಿರ್ಮಿಸುವುದು ಎಂದರೆ ಜಪಾನ್‌ನ ಟೋಕಿಯೋ ನಗರದಿಂದ ಇಂಗ್ಲೆಂಡ್‌ನ ಲಂಡನ್ ನಗರದವರೆಗೆ ಪ್ರತಿ ವರ್ಷ ಹೊಸದಾಗಿ ರಸ್ತೆ ನಿರ್ಮಿಸಿದಂತೆ! ಈ ಅಭೂತಪೂರ್ವ ವೇಗದಿಂದಾಗಿ, ಭಾರತವು ರಸ್ತೆ ಜಾಲದಲ್ಲಿ ತನ್ನ ಮುನ್ನಡೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.

ಅತಿಹೆಚ್ಚು ಡಾಂಬರು, ಕಾಂಕ್ರೀಟ್ ರಸ್ತೆಯಲ್ಲಿ ಚೀನಾ ಮುಂದೆ

ಭಾರತ ವಿಶ್ವದಲ್ಲೇ ಅತ್ಯಧಿಕ ರಸ್ತೆ ಸಂಪರ್ಕ ಹೊಂದಿದೆಯಾದರೂ ಡಾಂಬರು ಮತ್ತು ಸಿಮೆಂಟ್ ಹೊದಿಕೆಯ ರಸ್ತೆಯಲ್ಲಿ (Paved Roads) ಚೀನಾ ಮುಂದಿದೆ. ಭಾರತದಲ್ಲಿರುವ ಒಟ್ಟು ರಸ್ತೆಯಲ್ಲಿ ಕಚ್ಚಾ ರಸ್ತೆ ಶೇ. 33 ಇದೆ. ಅಂದರೆ, ಡಾಂಬರು ಇಲ್ಲದ, ಕಲ್ಲು ಮಣ್ಣುಗಳಿರುವ ರಸ್ತೆ ನೂರಕ್ಕೆ 33 ಇದೆ. ಚೀನಾದಲ್ಲಿ 55 ಲಕ್ಷ ಕಿಮೀ ಪೈಕಿ ಶೇ. 97ರಷ್ಟು ಡಾಂಬರು, ಸಿಮೆಂಟ್ ರಸ್ತೆಯೇ ಇದೆ. ಶೇ. 3 ರಸ್ತೆಗೆ ಮಾತ್ರ ಡಾಂಬರು ಹಾಕಲಾಗಿಲ್ಲ.

ಇದನ್ನೂ ಓದಿ: ಮೇ ತಿಂಗಳಲ್ಲಿ ಬೆಲೆ ಏರಿಕೆಗೆ ಇನ್ನಷ್ಟು ವೇಗ; ರೀಟೇಲ್ ಹಣದುಬ್ಬರ ಶೇ. 3.93 ದಾಖಲು

ಮೂಲಸೌಕರ್ಯ ಹೂಡಿಕೆಯಲ್ಲಿ ದುಪ್ಪಟ್ಟು ಏರಿಕೆ

2020 ರ ನಂತರದ ಅವಧಿಯಲ್ಲಿ ಭಾರತದ ಮೂಲಸೌಕರ್ಯ (Infra Boom) ವಲಯವು ಅತ್ಯಂತ ವೇಗವಾಗಿ ಬೆಳೆದಿತ್ತು. ಆದರೆ ಇಷ್ಟಕ್ಕೇ ನಿಲ್ಲದ ದೇಶದ ಅಭಿವೃದ್ಧಿ ರಥ, ಕಳೆದ 5 ವರ್ಷಗಳ ಹಿಂದಿನ ಹೂಡಿಕೆಗೆ ಹೋಲಿಸಿದರೆ ಪ್ರಸ್ತುತ ಮೂಲಸೌಕರ್ಯ ವಲಯದ ಮೇಲಿನ ಬಂಡವಾಳ ಹೂಡಿಕೆಯನ್ನು ಬರೋಬ್ಬರಿ ದುಪ್ಪಟ್ಟು (Double) ಮಾಡಿದೆ. ಸರ್ಕಾರದ ಈ ಬೃಹತ್ ಆರ್ಥಿಕ ಹೂಡಿಕೆಯೇ ಇಷ್ಟೊಂದು ಬೃಹತ್ ಪ್ರಮಾಣದ ರಸ್ತೆ ಕ್ರಾಂತಿಗೆ ಮುಖ್ಯ ಕಾರಣವಾಗಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

ಗಮನಿಸಿ, ರಸ್ತೆ ನಿರ್ಮಾಣ ಸಂಬಂಧ ಮೇಲೆ ತಿಳಿಸಿರುವ ಅಂಕಿ ಅಂಶಗಳನ್ನು ವಿಕಿಪೀಡಿಯಾದಿಂದ ತೆಗೆದುಕೊಳ್ಳಲಾಗಿದೆ. ಸಿಐಎಯಿಂದ ಬಿಡುಗಡೆಯಾಗಿರುವ ಮಾಹಿತಿ ಇದೆಂದು ವಿಕಿಪೀಡಿಯಾದಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ, ಸಿಐಎಯಿಂದ ಈ ಸಂಬಂಧ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *