ವಿಶ್ವದಾಖಲೆ ಸನಿಹದಲ್ಲಿ 23 ವರ್ಷದ ಆದಿತ್ ಪಲಿಚಾ; ಲಿಸ್ಟೆಡ್ ಕಂಪನಿಯ ಅತಿ ಕಿರಿಯ ಸಿಇಒ ಎನಿಸಲಿದ್ದಾರೆ ಝೆಪ್ಟೋ ಸಂಸ್ಥಾಪಕ – Kannada News

ಝೆಪ್ಟೋ ಸಹ-ಸ್ಥಾಪಕ ಆದಿತ್ ಪಲಿಚಾImage Credit source: Moneycontrol

ನವದೆಹಲಿ, ಜೂನ್ 10: ಕ್ವಿಕ್ ಕಾಮರ್ಸ್ ಕ್ಷೇತ್ರದ ದೈತ್ಯನೆನಿರುವ ಝೆಪ್ಟೋ (Zepto) ಸಂಸ್ಥೆಯ ಸಹ-ಸ್ಥಾಪಕ ಆದಿತ್ ಪಲಿಚಾ (Aadit Palicha) ಅವರು ಷೇರುಮಾರುಕಟ್ಟೆಯಲ್ಲಿ ಲಿಸ್ಟೆಡ್ ಆಗಿರುವ (Publicly Listed) ಕಂಪನಿಯ ಅತಿ ಕಿರಿಯ ಎಂಡಿ (MD) ಮತ್ತು ಸಿಇಒ (CEO) ಎನಿಸಲಿದ್ದಾರೆ. 23 ವರ್ಷದ ಆದಿತ್ ಪಲಿಚಾ ಅವರು ಪ್ರಸಕ್ತ ಝೆಪ್ಟೋದ ಎಂಡಿ ಮತ್ತು ಸಿಇಒ ಆಗಿದ್ದಾರೆ. ಈ ಸಂಸ್ಥೆ ಐಪಿಒಗೆ ಮುಂದಾಗಿದ್ದು, ಅದು ಯಶಸ್ವಿಯಾಗಿ ಮಾರುಕಟ್ಟೆಯಲ್ಲಿ ಲಿಸ್ಟ್ ಆದಲ್ಲಿ ಆದಿತ್ ಪಲಿಚಾ ಅವರು ಲಿಸ್ಟೆಡ್ ಕಂಪನಿಯೊಂದರ ಅತ್ಯಂತ ಕಿರಿಯ ಸಿಇಒ ಮತ್ತು ಎಂಡಿ ಎನ್ನುವ ದಾಖಲೆಗೆ ಬಾಜನರಾಗಲಿದ್ದಾರೆ.

ಕೇವಲ ಐದು ವರ್ಷಗಳ ಹಿಂದೆ ಅಮೆರಿಕದ ಸ್ಟ್ಯಾನ್​ಫೋರ್ಡ್ ವಿಶ್ವವಿದ್ಯಾಲಯದಲ್ಲಿ ದಿನಸಿ ಸಾಮಾನುಗಳನ್ನು ಮನೆಗಳಿಗೆ ತಲುಪಿಸುವ ವ್ಯವಸ್ಥೆ ರೂಪಿಸುವ ಒಂದು ಐಡಿಯಾದ ಪ್ರಯೋಗದಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು, ಕಾಲೇಜು ತೊರೆದು ಕಿರಾನಾಕಾರ್ಟ್ ಎನ್ನುವ ಕಂಪನಿ ಆರಂಭಿಸಿದರು. 2021ರಲ್ಲಿ ಝೆಪ್ಟೋ ಶುರುವಾಯಿತು. 10 ನಿಮಿಷದಲ್ಲಿ ಜನರ ಮನೆಗಳಿಗೆ ದಿನಸಿ ತಲುಪಿಸುವ ಇವರ ಬ್ಯುಸಿನೆಸ್ ಐಡಿಯಾ ಆಗ ಬಹಳ ಜನರಿಗೆ ಅಚ್ಚರಿ ತಂದಿತ್ತು. ಆದರೆ, ಸಾವಿರಾರು ಕೋಟಿ ರೂ ಬ್ಯುಸಿನೆಸ್ ಇರುವ ಕ್ವಿಕ್ ಕಾಮರ್ಸ್ ಕ್ಷೇತ್ರದ ಹುಟ್ಟು ಮತ್ತು ಬೆಳವಣಿಗೆಗೆ ಆದಿತ್ ಪಲಚಾ ಹಾಗೂ ಅವರ ಬಾಲ್ಯಮಿತ್ರ ಮತ್ತು ಸಿಟಿಒ ಆಗಿರುವ ಕೈವಲ್ಯ ವೋಹ್ರಾ ನಾಂದಿ ಹಾಡಿದ್ದರು.

ಇದನ್ನೂ ಓದಿ: ಆನ್​ಲೈನ್​ನಲ್ಲಿ ಶಾಪಿಂಗ್ ಮಾಡುವ ಹೆಚ್ಚಿನವರಿಗೆ ಟೊಪ್ಪಿಹಾಕುತ್ತಿವೆ ಡಾರ್ಕ್ ಪ್ಯಾಟರ್ನ್ಸ್; ಬೆಚ್ಚಿಬೀಳಿಸುತ್ತಿದೆ ಈ ವರದಿ

ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯವನ್ನು ತೊರೆದಿದ್ದ ಆದಿತ್ ಪಲಿಚಾ ಮತ್ತು ಅವರ ಬಾಲ್ಯದ ಸ್ನೇಹಿತ ಕೈವಲ್ಯ ವೋಹ್ರಾ ಅವರು, ಕೇವಲ 5 ವರ್ಷಗಳ ಅಂತರದಲ್ಲಿ ತಮ್ಮ ಸ್ಟಾರ್ಟ್‌ಅಪ್ ಅನ್ನು ದಲಾಲ್ ಸ್ಟ್ರೀಟ್‌ಗೆ (ಷೇರು ಮಾರುಕಟ್ಟೆ) ಕೊಂಡೊಯ್ಯುವ ಹಂತಕ್ಕೆ ತಲುಪಿಸಿದ್ದಾರೆ.

ಆದಿತ್ ಪಲಿಚಾ ಅವರದ್ದು ವಿಶ್ವದಾಖಲೆಯಾ?

ಕೆನಡಾದ ಎಂಬಾರ್ಕ್ ಕಂಪನಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆದಾಗ ಅದರ ಸಿಇಒ ಹಾಗೂ ಸಂಸ್ಥಾಪಕ ಅಲೆಕ್ಸ್ ರೋಡ್ರಿಗೆಸ್ ಅವರ ವಯಸ್ಸು 26 ಮಾತ್ರ. 19ನೇ ವಯಸ್ಸಿನಲ್ಲಿ ಫೇಸ್​ಬುಕ್ ಸ್ಥಾಪಿಸಿದ ಮಾರ್ಕ್ ಜುಕರ್​ಬರ್ಗ್ ಅವರು 28ನೇ ವಯಸ್ಸಿನಲ್ಲಿದ್ದಾಗ ಅವರ ಕಂಪನಿಯು ಪಬ್ಲಿಕ್ ಲಿಸ್ಟೆಡ್ ಕಂಪನಿ ಎನಿಸಿತು. ಆದರೆ, ಝೆಪ್ಟೋ ಸಿಇಒ ಆದಿತ್ ಪಲಿಚಾ ಅವರು ಅವರೆಲ್ಲರನ್ನೂ ಮೀರಿಸುವ ಕಿರಿಯ ಎನಿಸಿದ್ದಾರೆ.

ಝೆಪ್ಟೋ ಐಪಿಒ (IPO) ವಿವರಗಳು

ಝೆಪ್ಟೋ ತನ್ನ ಐಪಿಒಗಾಗಿ ಸೆಬಿಗೆ (SEBI) ಕರಡು ಪತ್ರಗಳನ್ನು ಸಲ್ಲಿಸಿದೆ. ಈ ಐಪಿಒ ಗಾತ್ರವು ಸುಮಾರು 9,000 ಕೋಟಿ ರೂ. ನಿಂದ 10,000 ಕೋಟಿ ರೂ. ಇರಬಹುದೆಂದು ಅಂದಾಜಿಸಲಾಗಿದೆ. ಇದರಲ್ಲಿ 8,010 ಕೋಟಿ ರೂ.ಗಳ ಹೊಸ ಷೇರುಗಳ ವಿತರಣೆ ಸೇರಿದೆ.

ಝೆಪ್ಟೋ ಕೇವಲ 10 ನಿಮಿಷಗಳಲ್ಲಿ ದಿನಸಿ ವಸ್ತುಗಳನ್ನು ತಲುಪಿಸುವ ಮೂಲಕ ಆರಂಭವಾಗಿ, ಇಂದು ಭಾರತದ ಅತಿದೊಡ್ಡ ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿ ಬೆಳೆದಿದೆ. ಪ್ರಸ್ತುತ ಕಂಪನಿಯು 66 ನಗರಗಳಲ್ಲಿ 1,139 ಡಾರ್ಕ್ ಸ್ಟೋರ್‌ಗಳನ್ನು ಹೊಂದಿದೆ.

ಇದನ್ನೂ ಓದಿ: ರೈಲುಗಳಲ್ಲಿ ಇನ್ಮುಂದೆ ಮತ್ತೆ ಅಡುಗೆ ಶುರು; ಆದರೆ, ಎಲ್​ಪಿಜಿ ಬದಲು ಇಂಡಕ್ಷನ್ ಸ್ಟೌವ್ ಬಳಲು ನಿರ್ಧಾರ

FY26 ರಲ್ಲಿ ಕಂಪನಿಯು 22,624 ಕೋಟಿ ರೂಪಾಯಿಗಳ ಕಾರ್ಯಾಚರಣೆಯ ಆದಾಯವನ್ನು ಗಳಿಸಿದೆ. ಆದಾಗ್ಯೂ, ಕಂಪನಿಯು ಇನ್ನೂ ನಷ್ಟದಲ್ಲಿದ್ದು, FY26 ರಲ್ಲಿ 5,905 ಕೋಟಿ ರೂಪಾಯಿಗಳ ನಿವ್ವಳ ನಷ್ಟವನ್ನು ವರದಿ ಮಾಡಿದೆ.

ಐಪಿಒ ಪ್ರಕ್ರಿಯೆಯಲ್ಲಿ ಆದಿತ್ ಪಲಿಚಾ ಅಥವಾ ಕೈವಲ್ಯ ವೋಹ್ರಾ ತಮ್ಮ ಯಾವುದೇ ಷೇರುಗಳನ್ನು ಮಾರಾಟ ಮಾಡುತ್ತಿಲ್ಲ. ಈ ಐಪಿಒ ಸಂಪೂರ್ಣವಾಗಿ ಹೂಡಿಕೆದಾರರ ಒಡೆತನದ ಷೇರುಗಳ ಮಾರಾಟವನ್ನು ಒಳಗೊಂಡಿದೆ.

ಈ ಸಾಧನೆಯು ಭಾರತೀಯ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯಲ್ಲಿ ಒಂದು ಮೈಲಿಗಲ್ಲಾಗಿದೆ ಮತ್ತು ಅತಿ ಕಿರಿಯ ವಯಸ್ಸಿನಲ್ಲಿ ಇಂತಹ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿರುವ ಮೊದಲ ನಿದರ್ಶನಗಳಲ್ಲಿ ಒಂದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *