ಮುಂಬೈ, ಜೂನ್ 30: ಅದಾನಿ ಗ್ರೂಪ್ನ ಬಹಳ ಮುಖ್ಯ ಕಂಪನಿ ಎನಿಸಿರುವ ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ (APSEZ) ಕೇರಳದ ವಿಳಿಂಜಮ್ನಲ್ಲಿರುವ ಬಂದರಿನಲ್ಲಿನ (Vizhinjam Port) ಶೇ. 49ರಷ್ಟು ತನ್ನ ಪಾಲನ್ನು ಮಾರಲಿದೆ. ವರದಿಗಳ ಪ್ರಕಾರ, ವಿಶ್ವದ ನಂಬರ್ ಒನ್ ಶಿಪ್ಪಿಂಗ್ ಕಂಪನಿಯಾದ ಮೆಡಿಟರೇನಿಯನ್ ಶಿಪ್ಪಿಂಗ್ಗೆ (MSC) 1.4 ಬಿಲಿಯನ್ ಡಾಲರ್ಗೆ ಮಾರಾಟ ಮಾಡಲಾಗುತ್ತದೆ. 1.4 ಬಿಲಿಯನ್ ಡಾಲರ್ ಎಂದರೆ ಸುಮಾರು 13,000 ಕೋಟಿ ರೂಗೂ ಅಧಿಕ ಮೊತ್ತ. ವಿಳಿಂಜಮ್ನಲ್ಲಿರುವ ಬಂದರು ಭಾರತದ ಮೊದಲ ಟ್ರಾನ್ಸ್‌ಶಿಪ್‌ಮೆಂಟ್ ಪೋರ್ಟ್ ಆಗಿದೆ.
ಅದಾನಿ ಪೋರ್ಟ್ಸ್ ಮತ್ತು ಎಂಎಸ್ಸಿ ಒಪ್ಪಂದದಲ್ಲೇನಿದೆ?
ಸ್ವಿಟ್ಜರ್ಲ್ಯಾಂಡ್ ಮೂಲದ ಮೆಡಿಟರೇನಿಯನ್ ಶಿಪ್ಪಿಂಗ್ ಕಂಪನಿಯ (MSC) ಅಂಗಸಂಸ್ಥೆಯಾದ ‘ಟರ್ಮಿನಲ್ ಇನ್ವೆಸ್ಟ್‌ಮೆಂಟ್ ಲಿಮಿಟೆಡ್’, ಅದಾನಿ ವಿಳಿಂಜಂ ಪೋರ್ಟ್ ಪ್ರೈವೇಟ್ ಲಿಮಿಟೆಡ್‌ನಲ್ಲಿ (AVPPL) ಶೇ. 49 ಪಾಲು ಪಡೆಯಲು ಮೊದಲಿಗೆ 539 ಮಿಲಿಯನ್ ಡಾಲರ್ ಪಾವತಿಸಲಿದೆ. 2028ರ ಡಿಸೆಂಬರ್ ವೇಳೆಗೆ ಹೆಚ್ಚುವರಿಯಾಗಿ 858 ಮಿಲಿಯನ್ ಡಾಲರ್ ಪಾವತಿಸುತ್ತದೆ. ಈ ಹೆಚ್ಚುವರಿ ಹಣವು ವಿಳಿಂಜಮ್ ಬಂದರು ಸಾಮರ್ಥ್ಯ ವಿಸ್ತರಣೆಗೆ ಮಾಡಲಾಗಿರುವ 1.75 ಬಿಲಿಯನ್ ಡಾಲರ್ ಯೋಜನೆಯ ಭಾಗವಾಗಿರುತ್ತದೆ.
ಇದನ್ನೂ ಓದಿ: ಯೂಸರ್ನೇಮ್ ಇಟ್ಟು ಪೋನ್ ನಂಬರ್ ರಹಸ್ಯವಾಗಿಡಿ; ವಾಟ್ಸಾಪ್ನಲ್ಲಿ ಹೊಸ ಫೀಚರ್
ಬಂದರು ವಿಸ್ತರಣೆ: ಪ್ರಸ್ತುತ 1.6 ಮಿಲಿಯನ್ ಸ್ಟ್ಯಾಂಡರ್ಡ್ ಕಂಟೈನರ್‌ಗಳ ಸಾಮರ್ಥ್ಯ ಹೊಂದಿರುವ ಈ ಬಂದರನ್ನು, ವಿಸ್ತರಣೆಯ ನಂತರ 4.1 ಮಿಲಿಯನ್ ಸಾಮರ್ಥ್ಯಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಭವಿಷ್ಯದಲ್ಲಿ ಇದನ್ನು 5.7 ಮಿಲಿಯನ್‌ಗೆ ಹೆಚ್ಚಿಸುವ ಯೋಜನೆಯೂ ಇದೆ.
ವಿಳಿಂಜಮ್ನಲ್ಲಿರುವ ಈ ಟ್ರಾನ್ಸ್‌ಶಿಪ್‌ಮೆಂಟ್ ಪೋರ್ಟ್ನಲ್ಲಿ ಅದಾನಿ ಗ್ರೂಪ್ ನೂರಕ್ಕೆ ನೂರು ಪಾಲು ಹೊಂದಿದೆ. ಈಗ ಎಂಎಸ್ಸಿಗೆ ಶೇ. 49 ಪಾಲು ಹೋದರೂ ಶೇ. 51ರಷ್ಟು ಪಾಲು ಅದಾನಿ ಗ್ರೂಪ್ ಬಳಿಯೇ ಇರುತ್ತದೆ.
ಭಾರತಕ್ಕೆ ಈ ಒಪ್ಪಂದದ ಪ್ರಯೋಜನಗಳು
- ಸರಕು ಸಾಗಣೆ ವೃದ್ಧಿ: ಜಾಗತಿಕ ಶಿಪ್ಪಿಂಗ್ ಕಂಪನಿಯೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವುದರಿಂದ, ಬಂದರಿಗೆ ಬರುವ ಸರಕುಗಳ ಪ್ರಮಾಣ (Cargo volume) ಹೆಚ್ಚಾಗಲಿದೆ ಮತ್ತು ಬಂದರಿನ ದಕ್ಷತೆ ಸುಧಾರಿಸಲಿದೆ.
- ಅಂತರರಾಷ್ಟ್ರೀಯ ಮಾರುಕಟ್ಟೆ: ಈ ಒಪ್ಪಂದವು ವಿಳಿಂಜಂ ಬಂದರನ್ನು ಜಾಗತಿಕ ಮಟ್ಟದ ಟ್ರಾನ್ಸ್‌ಶಿಪ್‌ಮೆಂಟ್ ಹಬ್ ಆಗಿ ಬಲಪಡಿಸಲಿದೆ. ಬಾಂಗ್ಲಾದೇಶ ಸೇರಿದಂತೆ ವಿವಿಧ ದೇಶಗಳ ಸರಕುಗಳನ್ನು ನಿರ್ವಹಿಸಲು ಈ ಬಂದರು ಪ್ರಮುಖ ಕೇಂದ್ರವಾಗಲಿದೆ.
- ವೇಗದ ಸಾಧನೆ: ವಿಳಿಂಜಂ ಬಂದರು ಕಾರ್ಯಾರಂಭ ಮಾಡಿದ ಕೇವಲ 18 ತಿಂಗಳಲ್ಲಿ 2 ಮಿಲಿಯನ್ TEUs (ಕಂಟೈನರ್‌ಗಳು) ನಿರ್ವಹಿಸುವ ಮೂಲಕ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬಂದರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಐಟಿಆರ್ ಸಲ್ಲಿಕೆಯಿಂದ ಟಿಡಿಎಸ್ ಪಾವತಿವರೆಗೆ, ಜುಲೈನಲ್ಲಿ ಡೆಡ್ಲೈನ್ಗಳಿವೆ, ಗಮನಿಸಿ
ಅದಾನಿ ಪೋರ್ಟ್ಸ್‌ನ ಸಿಇಒ ಅಶ್ವನಿ ಗುಪ್ತಾ ಅವರು, ಈ ಪಾಲುದಾರಿಕೆಯು ಪೂರೈಕೆ ಸರಪಳಿಯ ದಕ್ಷತೆಯನ್ನು ಹೆಚ್ಚಿಸುವುದಲ್ಲದೆ, ಭಾರತದ ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಹೊಸ ಬಲ ನೀಡಲಿದೆ ಎಂದು ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
