R. PraggnanandhaaImage Credit source: Rediff
ನಾರ್ವೆ ಚೆಸ್ 2026 ಟೂರ್ನಮೆಂಟ್‌ನಲ್ಲಿ ಭಾರತದ ಯುವ ಚೆಸ್ ತಾರೆ, 20 ವರ್ಷದ ಆರ್. ಪ್ರಜ್ಞಾನಂದ (R Praggnanandhaa) ಇತಿಹಾಸ ಸೃಷ್ಟಿಸಿದ್ದಾರೆ. ವಿಶ್ವದ ನಂಬರ್ 1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ (Magnus Carlsen) ಅವರನ್ನೇ ಅವರ ತವರಿನಲ್ಲಿ ಎರಡು ಬಾರಿ ಸೋಲಿಸುವ ಮೂಲಕ, ಭಾರತದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ಐತಿಹಾಸಿಕ ದಾಖಲೆಯನ್ನು ಪ್ರಜ್ಞಾನಂದ ಸರಿಗಟ್ಟಿದ್ದಾರೆ.
ಈ ಮೂಲಕ ಒಂದೇ ಕ್ಲಾಸಿಕಲ್ ಟೂರ್ನಮೆಂಟ್‌ನಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಎರಡು ಬಾರಿ ಮಣಿಸಿದ ವಿಶ್ವದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪ್ರಜ್ಞಾನಂದ ಪಾತ್ರರಾಗಿದ್ದಾರೆ.
- ಮೇ 27 ರಂದು ಪ್ರಜ್ಞಾನಂದ ಬಿಳಿ ದಾಳಗಳೊಂದಿಗೆ ಆಡಿ ಕಾರ್ಲ್‌ಸನ್‌ಗೆ ಮೊದಲ ಆಘಾತ ನೀಡಿದ್ದರು.
- ಜೂನ್ 2, 2026 ರಂದು ನಡೆದ ಪಂದ್ಯದಲ್ಲಿ ಕಪ್ಪು ದಾಳಗಳೊಂದಿಗೆ ಅದ್ಭುತ ಪ್ರದರ್ಶನ ನೀಡಿ ಕಾರ್ಲ್‌ಸನ್ ಅವರನ್ನು ಎರಡನೇ ಬಾರಿಗೆ ಮಣಿಸಿದರು.
- ಈ ಮೂಲಕ ವಿಶ್ವದ ನಂಬರ್ 1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್‌ಗೆ ಒಂದೇ ಕ್ಲಾಸಿಕಲ್ ಟೂರ್ನಮೆಂಟ್‌ನಲ್ಲಿ ಎರಡು ಸೋಲುಣಿಸಿದ ಸಾಧನೆ ಮಾಡಿದ್ದಾರೆ.
ವಿಶಿ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ:
ಇದಕ್ಕೂ ಮುನ್ನ 2007ರಲ್ಲಿ ನಡೆದಿದ್ದ ಲಿನಾರೆಸ್ ಇಂಟರ್ನ್ಯಾಷನಲ್ ಚೆಸ್ ಟೂರ್ನಮೆಂಟ್‌ನಲ್ಲಿ ವಿಶ್ವನಾಥನ್ ಆನಂದ್ ಅವರು ಅಂದಿನ ಯುವ ಆಟಗಾರ ಕಾರ್ಲ್‌ಸನ್ ಅವರನ್ನು ಒಂದೇ ಟೂರ್ನಿಯಲ್ಲಿ ಎರಡು ಬಾರಿ ಸೋಲಿಸಿದ್ದರು.
ಆ ಬಳಿಕ ಕಾರ್ಲ್‌ಸನ್ ಅವರನ್ನು ಒಂದೇ ಕ್ಲಾಸಿಕಲ್ ಟೂರ್ನಿಯಲ್ಲಿ ಎರಡು ಬಾರಿ ಸೋಲಿಸಲು ಯಾರಿಗೂ ಸಾಧ್ಯವಾಗಿರಲಿಲ್ಲ. ಇದೀಗ ಬರೋಬ್ಬರಿ 19 ವರ್ಷಗಳ ನಂತರ ಪ್ರಜ್ಞಾನಂದ ಈ ಸಾಧನೆ ಮಾಡಿದ್ದಾರೆ.
ಈ ಗೆಲುವಿನೊಂದಿಗೆ, ಕ್ಲಾಸಿಕಲ್ ಚೆಸ್‌ನಲ್ಲಿ ಕಾರ್ಲ್‌ಸನ್ ಅವರನ್ನು ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸೋಲಿಸಿದ ವಿಶ್ವದ ಅತ್ಯಂತ ಪ್ರಮುಖ ಗ್ರ್ಯಾಂಡ್‌ಮಾಸ್ಟರ್‌ಗಳ ಗಣ್ಯರ ಪಟ್ಟಿಗೆ ಪ್ರಜ್ಞಾನಂದ ಸೇರಿದ್ದಾರೆ.
ಹಾಗೆಯೇ ಜಯದೊಂದಿಗೆ ನಾರ್ವೆ ಚೆಸ್ 2026 ರ ಪ್ರಶಸ್ತಿ ರೇಸ್ ಮತ್ತಷ್ಟು ರೋಚಕ ಹಂತ ತಲುಪಿದೆ. ಪ್ರಜ್ಞಾನಂದ ಅವರ ಅಂಕಗಳ ಪಟ್ಟಿ ಮೇಲೇರಿದ್ದರೆ, ಕಾರ್ಲ್‌ಸನ್ ಅವರಿಗೆ ತವರಿನಲ್ಲೇ ಭಾರಿ ಹಿನ್ನಡೆಯಾಗಿದೆ.
ಪ್ರಜ್ಞಾನಂದ ಮುಂದಿನ ಸವಾಲು:
ನಾರ್ವೆ ಚೆಸ್ 2026 ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು ಪ್ರಜ್ಞಾನಂದ ಪಾಲಿಗೆ ಇನ್ನುಳಿದ ಕೊನೆಯ 2 ಸುತ್ತುಗಳು (Round 9 & Round 10) ಅತ್ಯಂತ ನಿರ್ಣಾಯಕವಾಗಿವೆ. ಸದ್ಯದ ಅಂಕಗಳ ಪಟ್ಟಿಯಲ್ಲಿ ಅವರು 12 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿರುವ ಪ್ರಜ್ಞಾನಂದ ಅಮೆರಿಕದ ವೆಸ್ಲಿ ಸೋ (14 ಅಂಕ) ಹಾಗೂ ಫ್ರಾನ್ಸ್‌ನ ಅಲಿರೆಜಾ ಫಿರೂಜ್ಜಾ (13 ಅಂಕ) ಅವರನ್ನು ಹಿಂದಿಕ್ಕಬೇಕು.
ಇದನ್ನೂ ಓದಿ: 8 ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಎದುರಾಳಿ!
ಇದಕ್ಕಾಗಿ ಪ್ರಜ್ಞಾನಂದ ಕೊನೆಯ ಎರಡು ಸುತ್ತುಗಳಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ಮತ್ತು ಡಿ. ಗುಕೇಶ್ ವಿರುದ್ಧ ಗೆಲ್ಲಬೇಕಾಗಿದೆ. ಈ ಗೆಲುವುಗಳ ಮೂಲಕ ಪೂರ್ಣ 6 ಅಂಕಗಳನ್ನು (ಒಟ್ಟು 18 ಅಂಕಗಳು) ಗಳಿಸಿದರೂ ಸಹ, ಪ್ರಶಸ್ತಿ ಅವರ ಕೈಸೇರಲು ವೆಸ್ಲಿ ಸೋ ಮತ್ತು ಅಲಿರೆಜಾ ಫಿರೂಜ್ಜಾ ಅವರ ಪಂದ್ಯಗಳ ಫಲಿತಾಂಶಗಳನ್ನು ಎದುರು ನೋಡಬೇಕಿದೆ.
