ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ: ಸತತ ಆರು ಬಾರಿ ಅಂಬಾರಿ ಹೊತ್ತಿದ್ದ ಅಭಿಮನ್ಯುಗೆ ಕೊಕ್ – Kannada News | Mysuru Dasara 2026: Abhimanyu Out, 12 Elephants Finalized for Jamboo Savari

ಮೈಸೂರು, ಆಗಸ್ಟ್​ 18: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ (mysuru dasara 2026) ಈಗಾಗಲೇ ಮುಹೂರ್ತ ನಿಗದಿ ಆಗಿದ್ದು, ದಿನಗಣನೆ ಶುರುವಾಗಿದೆ. ಮೈಸೂರು ದಸರಾ ಅಕ್ಟೋಬರ್​ 11ಕ್ಕೆ ಉದ್ಘಾಟನೆಗೊಳ್ಳಲಿದ್ದು, 21ರಂದು ಜಂಬೂಸವಾರಿ ನಡೆಯಲಿದೆ. ಆದರೆ ಈ ಬಾರಿ ಅಂಬಾರಿ ಹೊತ್ತು ಸಾಗುತ್ತ ಆನೆ ವಿಚಾರದಲ್ಲಿ ಮಹತ್ವದ ಬದಲಾವಣೆಯಾಗಿದೆ. 60 ವರ್ಷ ಆದ ಹಿನ್ನಲೆ ಈ ಬಾರಿ ಅಭಿಮನ್ಯು ದಸರಾದಿಂದ ಹೊರಗುಳಿಯಲಿದ್ದಾನೆ.

ಅಂಬಾರಿ ಹೊತ್ತ ಕ್ಯಾಪ್ಟನ್ ಅಭಿಮನ್ಯುಗೆ ವಿಶ್ರಾಂತಿ

ಕಳೆದ ಸತತ ಆರು ವರ್ಷಗಳಿಂದ (2020 ರಿಂದ 2025ರವರೆಗೆ) ವಿಜಯದಶಮಿಯ ಜಂಬೂಸವಾರಿಯಲ್ಲಿ ತಾಯಿ ಚಾಮುಂಡೇಶ್ವರಿಯ 750 ಕೆಜಿ ಚಿನ್ನದ ಅಂಬಾರಿಯನ್ನು ಗಾಂಭೀರ್ಯದಿಂದ ಹೊತ್ತು ಮುನ್ನಡೆಸಿದ್ದ ಗಜಪಡೆಯ ಕ್ಯಾಪ್ಟನ್ ‘ಅಭಿಮನ್ಯು’ ಈ ಬಾರಿ ವಿಶ್ರಾಂತಿ ಪಡೆಯಲಿದ್ದಾನೆ.

ಇದನ್ನೂ ಓದಿ: ಮೈಸೂರು ದಸರಾ ಮಹೋತ್ಸವಕ್ಕೆ ಮುಹೂರ್ತ ನಿಗದಿ: ಅ 11ಕ್ಕೆ ಉದ್ಘಾಟನೆ, 21ಕ್ಕೆ ಜಂಬೂಸವಾರಿ

ಅರಣ್ಯ ಇಲಾಖೆಯ ನಿಯಮಾವಳಿಗಳ ಪ್ರಕಾರ ಅಭಿಮನ್ಯುಗೆ 60 ವರ್ಷ ತುಂಬಿದ ಹಿನ್ನೆಲೆ ಅಂಬಾರಿ ಹೊತ್ತು ಸಾಗುತ್ತ ಹೊಣೆಗಾರಿಕೆಯಿಂದ ವಿಶ್ರಾಂತಿ ನೀಡಲಾಗಿದ್ದು, ಇದೀಗ ಅಂಬಾರಿ ಹೊರಲು ಹೊಸ ಆನೆಯ ಶೋಧಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.

12 ಗಜಪಡೆಯ ಪಟ್ಟಿ ಪ್ರಕಟಿಸಿದ ಸಚಿವ ರಾಮಲಿಂಗಾರೆಡ್ಡಿ

ಇನ್ನು ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಗಜಪಡೆಯ ಅಂತಿಮ ಪಟ್ಟಿಯನ್ನು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಈ ಬಾರಿಯ ದಸರಾದಲ್ಲಿ ಒಟ್ಟು 12 ಆನೆಗಳು ಪಾಲ್ಗೊಳ್ಳುತ್ತಿದ್ದು, 2 ಆನೆಗಳನ್ನು ಕಾಯ್ದಿರಿಸಲಾಗಿದೆ. ಈ ಬಾರಿಯ ದಸರಾಗೆ ವಿವಿಧ ಶಿಬಿರಗಳಿಂದ 12 ಆನೆಗಳನ್ನು ಅಂತಿಮಗೊಳಿಸಲಾಗಿದೆ.

ಇದನ್ನೂ ಓದಿ: ಈ ಬಾರಿ ಮೈಸೂರು ದಸರಾ ಉದ್ಘಾಟಕರಾಗುತ್ತಾರಾ ಮಾಜಿ ಕ್ರಿಕೆಟರ್​​? ಇಬ್ಬರಲ್ಲಿ ಯಾರು?

ದುಬಾರೆ ಆನೆ ಶಿಬಿರದಿಂದ ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಕಾವೇರಿ. ಬಳ್ಳೆ ಆನೆ ಶಿಬಿರದಿಂದ ಮಹೇಂದ್ರ, ಲಕ್ಷ್ಮೀ. ಭೀಮನಕಟ್ಟೆಯಿಂದ ಏಕಲವ್ಯ. ದೊಡ್ಡ ಅರವೆ ಶಿಬಿರದಿಂದ ರೂಪ. ರಾಂಪುರ ಶಿಬಿರದಿಂದ ಚೈತ್ರ. ಮತ್ತಿಗೋಡು ಶಿಬಿರದಿಂದ ಶ್ರೀಕಂಠ ಆನೆಗಳನ್ನು ಫೈನಲ್ ಮಾಡಲಾಗಿದೆ.  ಮತ್ತಿಗೋಡು ಶಿಬಿರದ ಭೀಮಾ ಹಾಗೂ ದುಬಾರೆ ಆನೆ ಶಿಬಿರದ ಹರ್ಷ ಆನೆಗಳನ್ನು ಅರಣ್ಯ ಇಲಾಖೆ ಕಾಯ್ದಿರಿಸಿದೆ. ಇನ್ನು ಇದೆ ಮೊದಲ ಬಾರಿಗೆ ದಸರಾದಲ್ಲಿ ಹರ್ಷ, ಚೈತ್ರ, ರೂಪ, ಶ್ರೀರಾಮ ಎಂಬ ನಾಲ್ಕು ಆನೆಗಳು ಭಾಗಿಯಾಗುತ್ತಿವೆ.

ಆಗಸ್ಟ್ 26ರಂದು ಗಜಪಯಣಕ್ಕೆ ಚಾಲನೆ

ಮೊದಲನೇ ಹಂತದಲ್ಲಿ 9 ಆನೆಗಳು ಮತ್ತು ಎರಡನೇ ಹಂತದಲ್ಲಿ ಮೂರು ಆನೆಗಳನ್ನ ಸಾಂಸ್ಕೃತಿಕ ನಗರಿಗೆ ಕರೆತರಲಾಗುತ್ತಿದೆ. ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಬ್ಬಾಗಿಲಾದ ವೀರನಹೊಸಹಳ್ಳಿಯಲ್ಲಿ ಆಗಸ್ಟ್ 26ರಂದು ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ರಾಜಪಥದತ್ತ ಅಧಿಕೃತ ಗಜಪಯಣಕ್ಕೆ ಚಾಲನೆ ನೀಡಲಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:08 pm, Tue, 18 August 26

Source link

Leave a Reply

Your email address will not be published. Required fields are marked *