ಭಾರತದಲ್ಲಿ ಬಾಳೆಹಣ್ಣನ್ನು (banana) ವ್ಯಾಪಕವಾಗಿ ಸೇವಿಸಲಾಗುತ್ತದೆ. ವರ್ಷಪೂರ್ತಿ ಲಭ್ಯವಿರುವ ಈ ಹಣ್ಣು ತುಂಬಾನೇ ಅಗ್ಗವೂ ಹೌದು. ಹಾಗಾಗಿ ಹೆಚ್ಚಿನವರು ಹಣ್ಣುಗಳಲ್ಲಿ ಬಾಳೆಹಣ್ಣನ್ನೇ ಖರೀದಿಸಲು ಇಷ್ಟಪಡುತ್ತಾರೆ. ಆದರೆ ಬಹುತೇಕ ಎಲ್ಲರೂ ಬಾಳೆಹಣ್ಣನ್ನು ತಿಂದ ಬಳಿಕ ಅದರ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆದುಬಿಡುತ್ತಾರೆ. ಹೀಗೆ ಎಸೆಯುವ ಬದಲು ಇದನ್ನು ಸಹ ಮರುಬಳಕೆ ಮಾಡಬಹುದು. ಬಾಳೆಹಣ್ಣಿನ ಸಿಪ್ಪೆ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು, ಇವುಗಳನ್ನು ತ್ವಚೆಯ ಆರೈಕೆಯಿಂದ ಹಿಡಿದು ಗಿಡಗಳಿಗೆ ಗೊಬ್ಬರ, ಕ್ಲೀನಿಂಗ್ ಕಾರ್ಯಗಳ ವರೆಗೆ ಹಲವು ರೀತಿಯನ್ನು ಮರುಬಳಕೆ ಮಾಬಹುದು. ಬಾಳೆಹಣ್ಣಿನ ಸಿಪ್ಪೆಯನ್ನು ಹೇಗೆಲ್ಲಾ ಮರುಬಳಕೆ ಮಾಡಬಹುದು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯುವ ಬದಲು ಹೀಗೆ ಮರುಬಳಕೆ ಮಾಡಿ:
ಸಸ್ಯಗಳಿಗೆ ಗೊಬ್ಬರ:
ಬಾಳೆಹಣ್ಣಿನ ಸಿಪ್ಪೆಗಳಲ್ಲಿ ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳಿವೆ, ಆದ್ದರಿಂದ ಅವುಗಳನ್ನು ಸಸ್ಯಗಳಿಗೆ ಗೊಬ್ಬರವಾಗಿ ಬಳಸಬಹುದು. ಬಾಳೆಹಣ್ಣಿನ ಸಿಪ್ಪೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅದನ್ನು ಸಸ್ಯಗಳ ಬುಡಕ್ಕೆ ಹಾಕಬಹುದು. ಇಲ್ಲದಿದ್ದರೆ ನೀವು ಸಿಪ್ಪೆಗಳನ್ನು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ನೆನೆಸಿ ನಂತರ ಆ ನೀರನ್ನು ಸಸ್ಯದ ಬುಡಗಳಿಗೆ ಹಾಕಬಹುದು. ಇದು ಸಸ್ಯಗಳಿಗೆ ಪೊಟ್ಯಾಸಿಯಮ್ ಮತ್ತು ರಂಜಕದಂತಹ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ
ಹಲ್ಲಿನ ಹಳದಿ ಕಲೆಗಳನ್ನು ನಿವಾರಿಸಲು ಸಹಕಾರಿ:
ಬಾಳೆಹಣ್ಣಿನ ಸಿಪ್ಪೆಯ ಬಿಳಿ ಮೇಲ್ಮೈಯನ್ನು ನಿಮ್ಮ ಹಲ್ಲುಗಳ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಿ. ಇದರಲ್ಲಿರುವ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳು ನಿಮ್ಮ ಹಲ್ಲುಗಳಿಗೆ ನೈಸರ್ಗಿಕ ಹೊಳಪನ್ನು ನೀಡುತ್ತವೆ.
ಶೂಗಳು ಮತ್ತು ಚರ್ಮದ ಬ್ಯಾಗ್ ಕ್ಲೀನ್ ಮಾಡಲು ಬಳಸಿ:
ಬಾಳೆಹಣ್ಣಿನ ಸಿಪ್ಪೆಯ ಒಳಭಾಗವನ್ನು ಅಂದರೆ ಬಿಳಿ ಭಾಗವನ್ನು ನಿಮ್ಮ ಶೂಗಳು ಅಥವಾ ಚರ್ಮದ ಬ್ಯಾಗ್ ಮೇಲೆ ನಿಧಾನವಾಗಿ ಉಜ್ಜಿ. ನಂತರ, ಅದನ್ನು ಸ್ವಚ್ಛವಾದ, ಒಣ ಬಟ್ಟೆಯಿಂದ ಒರೆಸಿ. ಇದು ನೈಸರ್ಗಿಕ ಪಾಲಿಶ್ ಆಗಿ ಕಾರ್ಯನಿರ್ವಹಿಸುತ್ತದೆ, ಚರ್ಮದ ಉತ್ಪನ್ನವನ್ನು ಹೊಸದಾಗಿ ಕಾಣುವಂತೆ ಮಾಡುತ್ತದೆ.
ಇದನ್ನೂ ಓದಿ: ಅಡುಗೆ ಮನೆಯಲ್ಲಿರುವ ಈ ಒಂದು ವಸ್ತುವಿನ ಸಹಾಯದಿಂದ ಕಸದ ಬುಟ್ಟಿ ಬಳಿ ನೊಣಗಳು ಸುಳಿಯದಂತೆ ಮಾಡಬಹುದು
ಬೆಳ್ಳಿ ವಸ್ತುಗಳನ್ನು ಸ್ವಚ್ಛಗೊಳಿಸಲು ಬಳಸಿ:
ಬಾಳೆಹಣ್ಣಿನ ಸಿಪ್ಪೆಯನ್ನು ಪೇಸ್ಟ್ ಮಾಡಿ ಅದರಲ್ಲಿ ಬೆಳ್ಳಿ ವಸ್ತುಗಳನ್ನು ಸ್ಕ್ರಬ್ ಮಾಡಿ, ಸ್ವಚ್ಛವಾದ ಬಟ್ಟೆಯಿಂದ ಒರೆಸಿ. ಇದು ಬೆಳ್ಳಿ ವಸ್ತುಗಳನ್ನು ಹೊಳೆಯುವಂತೆ ಮಾಡುತ್ತದೆ. ತಾಮ್ರ ಮತ್ತು ಹಿತ್ತಾಳೆಯ ಪಾತ್ರೆಗಳನ್ನು ಕೂಡ ಇದರಿಂದ ಕ್ಲೀನ್ ಮಾಡಬಹುದು. ಆದರೆ ನೀವು ಈ ಪೇಸ್ಟ್‌ಗೆ ಸ್ವಲ್ಪ ಮರಳು ಮತ್ತು ಬೂದಿಯನ್ನು ಸೇರಿಸಬೇಕು ಅಷ್ಟೆ.
ಚರ್ಮದ ಆರೈಕೆಗೆ ಬಳಸಿ:
ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ವಿಟಮಿನ್ ಸಿ, ವಿಟಮಿನ್ ಇ, ಕೊಬ್ಬಿನಾಮ್ಲಗಳು ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಚರ್ಮದ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಹೀಗಿರುವ ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯುವ ಬದಲು ಸಿಪ್ಪೆಯ ಒಳಭಾಗವನ್ನು ನಿಧಾನಕ್ಕೆ ಮುಖದ ಮೇಲೆ ಉಜ್ಜಿಕೊಳ್ಳಬಹುದು. ಇಲ್ಲವೇ ಸಿಪ್ಪೆಯನ್ನು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ಜೇನುತುಪ್ಪದೊಂದಿಗೆ ಬೆರೆಸಿ, ಮುಖಕ್ಕೆ ಹಚ್ಚಿ. ಇದು ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮೊಡವೆಗಳನ್ನು ಕಡಿಮೆ ಮಾಡುವಲ್ಲಿಯೂ ಪರಿಣಾಮಕಾರಿಯಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
