ನವದೆಹಲಿ, ಆಗಸ್ಟ್ 15: ದೇಶದಲ್ಲಿ ಸಶಸ್ತ್ರ ನಕ್ಸಲಿಸಂ ಅನ್ನು ಬಲಹೀನಗೊಳಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಆದರೆ, “ವೈಚಾರಿಕ ನಕ್ಸಲಿಸಂ” ಅಥವಾ “ದಿಮಾಗಿ ನಕ್ಸಲಿಸಂ” (Dimaagi Naxals) ಇನ್ನೂ ಹಿಂಸಾಚಾರ ಮತ್ತು ಅರಾಜಕತೆಯನ್ನು ಉತ್ತೇಜಿಸಲು ಅವಕಾಶಗಳನ್ನು ಹುಡುಕುತ್ತಿದೆ ಎಂದು ಪ್ರಧಾನಿ ಮೋದಿ ಎಚ್ಚರಿಸಿದ್ದಾರೆ. ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ (Independence Day) ಸಮಾರಂಭದಲ್ಲಿ ಮಾತನಾಡಿದ ಮೋದಿ, ಭಾರತವನ್ನು ನಕ್ಸಲ್ ಹಿಂಸಾಚಾರದಿಂದ ಮುಕ್ತಗೊಳಿಸುವ ತಮ್ಮ ಸರ್ಕಾರದ ವಾಗ್ದಾನವನ್ನು ಈಡೇರಿಸಲಾಗಿದೆ ಎಂದು ಹೇಳಿದರು.
2014ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಸಮಯವನ್ನು ಸ್ಮರಿಸಿದ ಪ್ರಧಾನಿ ಮೋದಿ, “ನಕ್ಸಲಿಸಂ ಈ ಭೂಮಿಯನ್ನು ರಕ್ತಸಿಕ್ತಗೊಳಿಸಿತ್ತು. ಆಗ ದೇಶವನ್ನು ನಕ್ಸಲಿಸಂನಿಂದ ಮುಕ್ತಗೊಳಿಸಲು ನಮ್ಮ ಸರ್ಕಾರ ಸಂಕಲ್ಪ ಮಾಡಿತ್ತು. ಒಮ್ಮೆ ನಕ್ಸಲೈಟ್ ಹಿಂಸಾಚಾರಕ್ಕೆ ಹೆಸರಾಗಿದ್ದ ಪ್ರದೇಶಗಳು ಈಗ ಅಭಿವೃದ್ಧಿ ಮತ್ತು ಹೆಚ್ಚಿನ ವಿಶ್ವಾಸಕ್ಕೆ ಸಾಕ್ಷಿಯಾಗುತ್ತಿವೆ. ಒಂದು ಕಾಲದಲ್ಲಿ ಎಲ್ಲಿ ನಕ್ಸಲೈಟ್ ಗುಂಡುಗಳು ಹಾರುತ್ತಿದ್ದವೋ, ಎಲ್ಲಿ ಒಮ್ಮೆ ಭೂಮಿ ರಕ್ತಸಿಕ್ತವಾಗುತ್ತಿತ್ತೋ, ಇಂದು ಅದೇ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅಭಿವೃದ್ಧಿ ಮತ್ತು ಶ್ರಮದ ತ್ರಿವರ್ಣ ಧ್ವಜ ಹಾರಾಡುತ್ತಿದೆ” ಎಂದು ಮೋದಿ ಹೇಳಿದರು.
ಈ ನಡುವೆ, ವೈಚಾರಿಕ ನಕ್ಸಲಿಸಂ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, “ಹಲವು ವರ್ಷಗಳಿಂದ ಮಾವೋವಾದಿ ಮನಸ್ಥಿತಿಯ ಜನರು ದೇಶದ ಅಧಿಕಾರದ ಕಾರಿಡಾರ್‌ಗಳನ್ನು ಆಕ್ರಮಿಸಿಕೊಂಡು ಕುಳಿತಿದ್ದರು. ಸರ್ಕಾರಿ ಸಮಿತಿಗಳಲ್ಲಿ ಸಲಹೆಗಾರರಾಗಿಯೂ ಈ ಮಾವೋವಾದಿ ಮನಸ್ಥಿತಿಯು ನೀತಿಗಳ ಮೇಲೆ ಪ್ರಭಾವ ಬೀರಿತ್ತು. ಈಗಲೂ ಅವರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಕಾಡುಗಳಲ್ಲಿದ್ದ ಸಶಸ್ತ್ರ ನಕ್ಸಲರನ್ನು ನಿರ್ಮೂಲನೆ ಮಾಡುವಲ್ಲಿ ಮತ್ತು ಆ ಬಿಕ್ಕಟ್ಟಿನಿಂದ ದೇಶವನ್ನು ಮುಕ್ತಗೊಳಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಸಶಸ್ತ್ರ ನಕ್ಸಲರು ತೊಲಗಿದ್ದಾರೆ. ಆದರೆ ವೈಚಾರಿಕ ನಕ್ಸಲರು (ಬುದ್ಧಿಜೀವಿಗಳು) ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಯುತ್ತಿರುವ ಅವರನ್ನು ಬಹಿಷ್ಕರಿಸಬೇಕು” ಎಂದು ಮೋದಿ ಕರೆ ನೀಡಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
