ವೈದ್ಯಕೀಯ ಕೋರ್ಸ್‌ಗಳ ಸೀಟು ಹಂಚಿಕೆ ಪ್ರಕ್ರಿಯೆ ವಿಳಂಬ: ಎಂಜಿನಿಯರಿಂಗ್ ಪ್ರವೇಶದ ಅಂತಿಮ ಗಡುವು ವಿಸ್ತರಣೆಗೆ KEA ಮನವಿ – Kannada News | KEA Urges AICTE to Extend Engineering Admission Deadline Amid Lag in Medical Seat Counselling

ಎಂಜಿನಿಯರಿಂಗ್ ಪ್ರವೇಶದ ಅಂತಿಮ ಗಡುವು ವಿಸ್ತರಣೆಗೆ KEA ಮನವಿ

ಬೆಂಗಳೂರು, ಜುಲೈ 29: ವೈದ್ಯಕೀಯ ಕೋರ್ಸ್‌ಗಳ ಸೀಟು ಹಂಚಿಕೆ ಪ್ರಕ್ರಿಯೆ ವಿಳಂಬವಾಗುತ್ತಿರುವ ಹಿನ್ನೆಲೆ, ಎಂಜಿನಿಯರಿಂಗ್ ಪ್ರವೇಶದ ಅಂತಿಮ ಗಡುವನ್ನು ವಿಸ್ತರಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE)ಗೆ ಮನವಿ ಮಾಡಿದೆ. ಇದೇ ಬೇಡಿಕೆಯನ್ನು COMEDK ಕೂಡ AICTEಗೆ ಸಲ್ಲಿಸಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ವೈದ್ಯಕೀಯ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ತಡವಾಗಿ ಪ್ರಕಟಿಸಿರುವುದು ಹಾಗೂ ರಾಜ್ಯ ಸರ್ಕಾರದಿಂದ ವೈದ್ಯಕೀಯ ಸೀಟುಗಳ ಮ್ಯಾಟ್ರಿಕ್ಸ್ ತಡವಾಗಿ ಲಭ್ಯವಾಗಿರುವುದರಿಂದ ವೈದ್ಯಕೀಯ ಕೌನ್ಸೆಲಿಂಗ್ ವಿಳಂಬವಾದ ಕಾರಣ ಈ ಮನವಿ ಮಾಡಲಾಗಿದೆ.

ಹಿಂದಿರುಗಿಸಲಾಗುವ ಸೀಟ್​​ಗಳ ಬಗ್ಗೆ ಮಾಹಿತಿ ಕಷ್ಟ

AICTE ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ, ಎಂಜಿನಿಯರಿಂಗ್ ಪ್ರವೇಶ ಪ್ರಕ್ರಿಯೆಯನ್ನು ಆಗಸ್ಟ್ 14ರೊಳಗೆ ಪೂರ್ಣಗೊಳಿಸಬೇಕು. ಆದರೆ, ಪ್ರಥಮ ವರ್ಷದ ತರಗತಿಗಳು ಆಗಸ್ಟ್ 1ರಿಂದಲೇ ಆರಂಭವಾಗಬೇಕಾಗಿದೆ. ಇದೀಗ ನೀಟ್ ಮರುಪರೀಕ್ಷೆಯ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ, ಮೊದಲ ಸುತ್ತಿನ ವೈದ್ಯಕೀಯ ಸೀಟು ಹಂಚಿಕೆ ಪೂರ್ಣಗೊಳ್ಳುವವರೆಗೆ ಎಂಜಿನಿಯರಿಂಗ್ ಸೀಟುಗಳನ್ನು ಕಾಯ್ದಿರಿಸಿರುವ ವಿದ್ಯಾರ್ಥಿಗಳು ಎಷ್ಟು ಸೀಟುಗಳನ್ನು ಹಿಂದಿರುಗಿಸುತ್ತಾರೆ ಎಂಬುದು KEAಗೆ ತಿಳಿಯುವುದಿಲ್ಲ. ಕೆಲವರು ಮೊದಲು ಎಂಜಿನಿಯರಿಂಗ್ ಸೀಟು ಪಡೆದು ಬಳಿಕ ವೈದ್ಯಕೀಯ ಪ್ರವೇಶ ದೊರೆತರೆ ಆ ಸೀಟುಗಳನ್ನು ಹಿಂತಿರುಗಿಸುತ್ತಾರೆ. ಮೊದಲ ಸುತ್ತಿನ ವೈದ್ಯಕೀಯ ಕೌನ್ಸೆಲಿಂಗ್ ನಂತರ ಹಿಂದಿರುಗುವ ಆ ಸೀಟುಗಳನ್ನು ಮತ್ತೆ ಎಂಜಿನಿಯರಿಂಗ್ ಸೀಟುಗಳ ಪಟ್ಟಿಗೆ ಸೇರಿಸಬೇಕಾಗುತ್ತದೆ ಎಂದು KEA ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಹಾರ, ಯುಪಿಗಿಂತ ಕರ್ನಾಟಕದಲ್ಲೇ ಹೆಚ್ಚು ಶಾಲೆ ತೊರೆಯುತ್ತಿರುವ ಹೆಣ್ಣುಮಕ್ಕಳು!

ಎಲ್ಲ ಸುತ್ತಿನ ಕೌನ್ಸೆಲಿಂಗ್ ಅಸಾಧ್ಯ

ಉತ್ತಮ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಬಯಸುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಯಾವುದೇ ಅನಾನುಕೂಲವಾಗದಂತೆ ನೋಡಿಕೊಳ್ಳಲು ಎಂಜಿನಿಯರಿಂಗ್ ಪ್ರವೇಶದ ಅಂತಿಮ ದಿನಾಂಕವನ್ನು ವಿಸ್ತರಿಸುವಂತೆ KEA ಮನವಿ ಮಾಡಿದೆ. KEA ಅಧಿಕಾರಿಗಳ ಪ್ರಕಾರ, ರಾಜ್ಯ ಸರ್ಕಾರದಿಂದ ಸೀಟು ಮ್ಯಾಟ್ರಿಕ್ಸ್ ತಡವಾಗಿ ಬಂದ ಕಾರಣ ಕೌನ್ಸೆಲಿಂಗ್ ಪ್ರಕ್ರಿಯೆಯೇ ವಿಳಂಬವಾಗಿದೆ. ಹೀಗಾಗಿ AICTE ನಿಗದಿಪಡಿಸಿರುವ ವೇಳಾಪಟ್ಟಿಯಂತೆ ಎಲ್ಲ ಸುತ್ತಿನ ಕೌನ್ಸೆಲಿಂಗ್ ಪೂರ್ಣಗೊಳಿಸುವುದು ಅಸಾಧ್ಯವಾಗಿದೆ.

ಇದೇ ವೇಳೆ, ಎಂಜಿನಿಯರಿಂಗ್ ಕಾಲೇಜುಗಳ ಪ್ರಾಂಶುಪಾಲರು ಕೂಡ AICTE ನಿಗದಿಪಡಿಸಿರುವ ಗಡುವಿನ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಈ ವೇಳಾಪಟ್ಟಿ ಸುಪ್ರೀಂ ಕೋರ್ಟ್ ಆದೇಶದಂತೆ ಇರಬಹುದು. ಆದರೆ ಹಲವು ರಾಜ್ಯಗಳು ಇನ್ನೂ ಇತ್ತೀಚೆಗಷ್ಟೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿವೆ. ಅಂತಹ ಸಂದರ್ಭದಲ್ಲಿ ತರಗತಿ 12ರ ಫಲಿತಾಂಶ ಪ್ರಕಟಿಸಲು ಯಾವುದೇ ಏಕರೂಪದ ಗಡುವನ್ನು ನಿಯಂತ್ರಣ ಸಂಸ್ಥೆಗಳು ನಿಗದಿಪಡಿಸದಿದ್ದರೆ ಈ ಪ್ರವೇಶ ವೇಳಾಪಟ್ಟಿಯ ಪ್ರಯೋಜನವೇನು? ಎಂದು ಬೆಂಗಳೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರೊಬ್ಬರು ಅಭಿಪ್ರಾಯಪಟ್ಟಿರೋದಾಗಿ ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *