ವೈದ್ಯರ ಕುಟುಂಬಕ್ಕೆ ಮನೆಕೆಲಸದವರಿಂದಲೇ ದೋಖಾ: ಪೀಕಿದ್ದು ಬರೋಬ್ಬರಿ 4.5 ಕೋಟಿ ಹಣ! – Kannada News | Breach of Trust: Maids and Accomplices Rob Prominent Doctor’s Family of 4.5 Crore in Punjab’s Pathankot

ವೈದ್ಯರ ಕುಟುಂಬಕ್ಕೆ ಮನೆಕೆಲಸದವರಿಂದಲೇ ದೋಖಾ

ಪಠಾಣ್‌ಕೋಟ್ , ಜುಲೈ 29: ಪಂಜಾಬ್‌ನ ಪಠಾಣ್‌ಕೋಟ್​​ನಲ್ಲಿ ಖ್ಯಾತ ಅಸ್ಥಿ ತಜ್ಞ (ಆರ್ಥೋಪೆಡಿಕ್) ವೈದ್ಯರ ಮನೆಯಲ್ಲಿ ಸುಮಾರು 4.5 ಕೋಟಿ ಮೌಲ್ಯದ ಕಳ್ಳತನ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ವೈದ್ಯರ ಮನೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಇಬ್ಬರು ಸಹೋದರಿಯರು, ಅವರ ಪತಿಯಂದಿರು ಹಾಗೂ ಇತರ ಸಹಚರರು ಕುಟುಂಬದ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಈ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದೆ.

ಹಣ, ಚಿನ್ನಾಭರಣ ಕಳವು

ಮಾಹಿತಿಯ ಪ್ರಕಾರ, ಈ ಇಬ್ಬರು ಮಹಿಳೆಯರು ದೀರ್ಘಕಾಲದಿಂದ ವೈದ್ಯರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಇದರಿಂದ ಕುಟುಂಬದವರು ಅವರ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದರು. ಇದೇ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡ ಆರೋಪಿಗಳು ವೈದ್ಯರ ಪತ್ನಿಯನ್ನು ವಂಚಿಸಿ, ಅವರ ಬ್ಯಾಂಕ್ ಖಾತೆಗಳು ಮತ್ತು ಎಟಿಎಂ ಮೂಲಕ ಲಕ್ಷಾಂತರ ರೂಪಾಯಿ ಹಣವನ್ನು ಪೀಕಿದ್ದಾರೆ. ಇದಷ್ಟೇ ಅಲ್ಲದೆ, ಮನೆಯಲ್ಲಿ ಇಟ್ಟಿದ್ದ ದೊಡ್ಡ ಮೊತ್ತದ ನಗದು ಹಾಗೂ ಸುಮಾರು 600 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಈ ಘಟನೆಯಿಂದ ವೈದ್ಯರ ಕುಟುಂಬಕ್ಕೆ ಸುಮಾರು 4.5 ಕೋಟಿ ರೂಪಾಯಿ ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ.

ಇದನ್ನೂ ಓದಿ:  ಫೇಸ್​​ಬುಕ್​​ ಗೆಳೆಯನ ವಂಚನೆ ಜಾಲಕ್ಕೆ ಸಿಲುಕಿ 1.7 ಕೋಟಿ ರೂಪಾಯಿ ಕಳೆದುಕೊಂಡ ವಿಚ್ಛೇದಿತ ಮಹಿಳೆ

ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ

ವಂಚನೆ ನಡೆದಿರುವುದು ತಿಳಿದ ತಕ್ಷಣ ಕುಟುಂಬದವರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬ್ಯಾಂಕ್ ವಹಿವಾಟಿನ ವಿವರಗಳು, ಮನೆಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳು ಹಾಗೂ ಇತರೆ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ಆರಂಭಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ ಆರೋಪಿಗಳನ್ನು ಬಂಧಿಸಲು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಅವರು ತಲೆಮರೆಸಿಕೊಂಡಿರುವ ಸಾಧ್ಯತೆಯಿರುವ ಸ್ಥಳಗಳಲ್ಲಿ ನಿರಂತರ ದಾಳಿ ನಡೆಸಲಾಗುತ್ತಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿ, ಈ ವಂಚನೆ ಹಾಗೂ ಕಳ್ಳತನದ ಸಂಪೂರ್ಣ ಜಾಲವನ್ನು ಬಯಲಿಗೆಳೆಯುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:39 pm, Wed, 29 July 26

Source link

Leave a Reply

Your email address will not be published. Required fields are marked *