ಮ್ಮು, ಜುಲೈ 18: ಜಮ್ಮುವಿನಲ್ಲಿರುವ ಅತ್ಯಂತ ಶ್ರೀಮಂತ ಮತ್ತು ಕೋಟ್ಯಂತರ ಭಕ್ತರು ಭೇಟಿ ನೀಡುವ ವೈಷ್ಣೋದೇವಿ ಮಂದಿರದಲ್ಲಿ ರಾಮ ಮಂದಿರದಂತೆಯೇ ದೇಣಿಗೆ ಹಗರಣ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ. ಶ್ರೀ ಮಾತಾ ವೈಷ್ಣೋದೇವಿ ದೇವಾಲಯ ಮಂಡಳಿ’ (SMVDSB) ಈಗ ಭಾರಿ ವಿವಾದದ ಕೇಂದ್ರಬಿಂದುವಾಗಿದೆ. ಭಕ್ತರು ವರ್ಷಗಳಿಂದ ದೇವಿಗೆ ಅರ್ಪಿಸಿದ ಸುಮಾರು 500 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿಯು ನಾಪತ್ತೆಯಾಗಿದೆ ಅಥವಾ ಕಳಪೆ ಲೋಹಕ್ಕೆ ಬದಲಾಯಿಸಲ್ಪಟ್ಟಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಮಹಾ ವಂಚನೆ ಪ್ರಕರಣ ಈಗ ನ್ಯಾಯಾಲಯದ ಮೆಟ್ಟಿಲೇರಿದ್ದು, ದೇವಾಲಯದ ಆಡಳಿತ ಮಂಡಳಿಯಲ್ಲಿ ತಲ್ಲಣ ಸೃಷ್ಟಿಸಿದೆ.
20 ಟನ್ ಬೆಳ್ಳಿಯ ತಪಾಸಣೆ ವೇಳೆ ಬಯಲಾಯ್ತು ಮಹಾ ಮೋಸ
ಕಳೆದ 5-6 ವರ್ಷಗಳಲ್ಲಿ ಭಕ್ತರು ದೇವಿಗೆ ಅರ್ಪಿಸಿದ್ದ ಸುಮಾರು 20 ಟನ್ ಬೆಳ್ಳಿಯ ಆಭರಣಗಳು, ನಾಣ್ಯಗಳು ಮತ್ತು ಛತ್ರಿಗಳನ್ನು (ಛಾತ್ರ್) ಕರಗಿಸಿ, ಶುದ್ಧೀಕರಿಸಲು ಜಮ್ಮು ಮತ್ತು ಕಾಶ್ಮೀರದ ಹೊರಗಿನ ಸರ್ಕಾರಿ ಟಂಕಸಾಲೆಗೆ ಕಳುಹಿಸಲಾಗಿತ್ತು. ಆದರೆ ಅಲ್ಲಿ ಲೋಹದ ಶುದ್ಧತೆಯನ್ನು ಪರೀಕ್ಷಿಸಿದಾಗ ವಿಜ್ಞಾನಿಗಳು ಮತ್ತು ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.
ಕೇವಲ ಶೇ.5 ಮಾತ್ರ ನಿಜವಾದ ಬೆಳ್ಳಿ: ಕರಗಿಸಿದ ಒಟ್ಟು ಲೋಹದಲ್ಲಿ ಕೇವಲ ಶೇಕಡಾ 5 ರಿಂದ 6 ರಷ್ಟು ಮಾತ್ರ ನಿಜವಾದ ಬೆಳ್ಳಿ ಇರುವುದು ಪತ್ತೆಯಾಗಿದೆ. ಇನ್ನುಳಿದ ಭಾಗದಲ್ಲಿ ಕಬ್ಬಿಣ, ಕ್ಯಾಡ್ಮಿಯಮ್ ಮತ್ತು ಇತರೆ ಅಗ್ಗದ ಲೋಹಗಳನ್ನು ಮಿಶ್ರಣ ಮಾಡಲಾಗಿತ್ತು.
70 ಕೆಜಿಯಲ್ಲಿ ಕೇವಲ 3 ಕೆಜಿ ಅಸಲಿ: ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ದೇವಾಲಯದ ದಾಖಲೆಗಳಲ್ಲಿದ್ದ 70 ಕೆಜಿ ತೂಕದ ಬೆಳ್ಳಿಯ ವಸ್ತುವೊಂದನ್ನು ಕರಗಿಸಿದಾಗ ಅದರಲ್ಲಿ ಸಿಕ್ಕಿದ್ದು ಕೇವಲ 3 ಕೆಜಿ ನಿಜವಾದ ಬೆಳ್ಳಿ ಮಾತ್ರ.
550 ಕೋಟಿ ರೂ. ನಷ್ಟ: ಒಂದು ವೇಳೆ ಭಕ್ತರು ನೀಡಿದ ಆ 20 ಟನ್ ಲೋಹವು ಶುದ್ಧ ಬೆಳ್ಳಿಯಾಗಿದ್ದಿದ್ದರೆ ಇಂದಿನ ಮಾರುಕಟ್ಟೆ ದರದಲ್ಲಿ ಅದರ ಮೌಲ್ಯ 550 ಕೋಟಿ ರೂ.ಗೂ ಅಧಿಕವಾಗಿರುತ್ತಿತ್ತು. ಆದರೆ ಈಗ ಸಿಕ್ಕಿರುವುದು ಕೇವಲ ಅದರ ಒಂದು ಸಣ್ಣ ಭಾಗ ಮಾತ್ರ.
ಮತ್ತಷ್ಟು ಓದಿ: ದೇಣಿಗೆ ಕಳ್ಳತನಕ್ಕೆ ಪ್ರಾಯಶ್ಚಿತ್ತ; ರಾಮ ಮಂದಿರದಲ್ಲಿ 10 ದಿನದ ಶುದ್ಧೀಕರಣ ಆರಂಭ
ಭಕ್ತರಿಗೆ ವಂಚನೆಯೋ ಅಥವಾ ಒಳಗಿನವರ ಕೈವಾಡವೋ? ತನಿಖೆಗೆ ಆದೇಶ
ಮೇ 9, 2026 ರಂದು ವಕೀಲ ದೀಪಕ್ ಶರ್ಮಾ ಅವರು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಪರಾಧ ಶಾಖೆಗೆ ದೂರು ಸಲ್ಲಿಸಿದ ನಂತರ ಈ ಹಗರಣ ಅಧಿಕೃತವಾಗಿ ಬಯಲಿಗೆ ಬಂತು. ಈ ವಂಚನೆಯ ಹಿಂದೆ ಎರಡು ಮುಖ್ಯ ಶಂಕೆಗಳಿವೆ:
ಭಕ್ತರು ದೇವಾಲಯಕ್ಕೆ ಬರುವ ಮುನ್ನ ಕತ್ರಾ ಬೇಸ್ ಕ್ಯಾಂಪ್‌ನ ಸ್ಥಳೀಯ ವ್ಯಾಪಾರಿಗಳು ಮತ್ತು ಚಿನ್ನದ ಆಭರಣಗಾರರು ಭಕ್ತರಿಗೆ ಮೋಸ ಮಾಡಿ ನಕಲಿ ಅಥವಾ ಕಲಬೆರಕೆ ಬೆಳ್ಳಿ ವಸ್ತುಗಳನ್ನು ಮಾರಾಟ ಮಾಡಿದ್ದಾರೆಯೇ? ಅಥವಾ, ಭಕ್ತರು ಅಸಲಿ ಬೆಳ್ಳಿಯನ್ನೇ ನೀಡಿದ್ದರೂ, ದೇವಾಲಯದ ಭದ್ರತಾ ಕೊಠಡಿಯಲ್ಲಿ ಅದನ್ನು ಸ್ವೀಕರಿಸಿದ ನಂತರ ಒಳಗಿನ ಸಿಬ್ಬಂದಿಯೇ ಅದನ್ನು ಕದ್ದು, ನಕಲಿ ಲೋಹಕ್ಕೆ ಬದಲಾಯಿಸಿದ್ದಾರೆಯೇ ಎಂಬುದು ಪ್ರಶ್ನೆಯಾಗಿದೆ.
ಈ ಗಂಭೀರ ದೂರಿಗೆ ಸಂಬಂಧಿಸಿದಂತೆ ಜಮ್ಮು ನ್ಯಾಯಾಲಯವು ತನಿಖಾ ಅಧಿಕಾರಿಗೆ ಎಲ್ಲಾ ಅಸಲಿ ದಾಖಲೆಗಳೊಂದಿಗೆ ಖುದ್ದಾಗಿ ಹಾಜರಾಗುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದು, ಮುಂದಿನ ಪ್ರಮುಖ ವಿಚಾರಣೆಯನ್ನು ಜುಲೈ 29, 2026 ಕ್ಕೆ ನಿಗದಿಪಡಿಸಿದೆ.
ಕ್ಯಾನ್ಸರ್ ಕಾರಕ ಲೋಹ: ನಕಲಿ ಬೆಳ್ಳಿಯಲ್ಲಿ ಪತ್ತೆಯಾಗಿರುವ ಪ್ರಮುಖ ಮಿಶ್ರಣ ಲೋಹವಾದ ‘ಕ್ಯಾಡ್ಮಿಯಮ್’ ಅತ್ಯಂತ ವಿಷಕಾರಿಯಾಗಿದೆ. ಇದನ್ನು ಜಾಗತಿಕವಾಗಿ ಕ್ಯಾನ್ಸರ್ ಕಾರಕ ಲೋಹ ಎಂದು ವರ್ಗೀಕರಿಸಲಾಗಿದೆ. ದೇವಾಲಯದ ಕೊಠಡಿಗಳಲ್ಲಿ ಇವುಗಳನ್ನು ನಿರ್ವಹಿಸುವ ಕಾರ್ಮಿಕರು ಮತ್ತು ಟಂಕಸಾಲೆಯಲ್ಲಿ ಇವುಗಳನ್ನು ಕರಗಿಸುವ ಸಿಬ್ಬಂದಿಯ ಆರೋಗ್ಯದ ಮೇಲೆ ಇದು ತೀವ್ರ ದುಷ್ಪರಿಣಾಮ ಬೀರುವ ಆತಂಕ ಎದುರಾಗಿದೆ.
ವಿವಾದ ತಾರಕಕ್ಕೇರುತ್ತಿದ್ದಂತೆ ಎಚ್ಚೆತ್ತ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ (LG) ಮನೋಜ್ ಸಿನ್ಹಾ ಅವರು ದೇವಾಲಯ ಮಂಡಳಿಯ ತುರ್ತು ಸಮೀಕ್ಷಾ ಸಭೆ ನಡೆಸಿದ್ದಾರೆ. ಇನ್ಮುಂದೆ ದೇವಾಲಯಕ್ಕೆ ಬರುವ ಪ್ರತಿಯೊಂದು ಕೊಡುಗೆಯನ್ನು ಆರ್‌ಬಿಐ (RBI) ಮಾರ್ಗಸೂಚಿಗಳು ಮತ್ತು ತಂತ್ರಜ್ಞಾನದ ಆಧಾರದ ಮೇಲೆ ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಹಾಗೂ ದೇಣಿಗೆ ನಿರ್ವಹಣೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ