ನವದೆಹಲಿ, ಜುಲೈ 10: ಭಾರತ ಮೂಲದ 12 ವರ್ಷದ ಬಾಲಕಿಯೊಬ್ಬಳು ಎಐ ಸ್ಟಾರ್ಟಪ್ ಕಟ್ಟಿ ಜಗತ್ತಿನ ಗಮನ ಸೆಳೆದಿದ್ದಾಳೆ. ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ವಾಸಿಸುತ್ತಿರುವ ಮಾನ ಜಂಪಾಲಾ (Mana Jampala) ಎಐ ಬಳಸಿ ‘ವೋಕ್ಸಾ’ (Voxa) ಎನ್ನುವ ವರ್ಚುವಲ್ ರಿಸಿಪ್ಷನಿಸ್ಟ್ ಅನ್ನು ಸೃಷ್ಟಿಸಿದ್ದಾರೆ. ಈ ಮೂಲಕ ಹೊಸ ಆವಿಷ್ಕಾರಗಳಿಗೆ ವಯಸ್ಸು ಅಡ್ಡಿ ಇಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ.
ಎಐ ರಿಸಿಪ್ಷನಿಸ್ಟ್ ಐಡಿಯಾ ಬಂದಿದ್ದು ಹೇಗೆ?
ಮಾನ ಜಂಪಾಲಾ ತನಗೆ 11 ವರ್ಷವಾಗಿದ್ದಾಗ ತನ್ನ ತಂದೆಯ ಕಚೇರಿಗೆ ಭೇಟಿ ನೀಡುತ್ತಿದ್ದಳು. ಅಲ್ಲಿನ ಸಣ್ಣ ಸಿಬ್ಬಂದಿ ವರ್ಗವು ಕೆಲಸದ ಒತ್ತಡದಿಂದಾಗಿ ಗ್ರಾಹಕರ ಅನೇಕ ಫೋನ್ ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗದೆ ಮಿಸ್ ಮಾಡುತ್ತಿರುವುದನ್ನು ಈಕೆ ಗಮನಿಸಿದಳು. ಕರೆಗಳನ್ನು ಮಿಸ್ ಮಾಡಿಕೊಳ್ಳುವುದರಿಂದ ವ್ಯವಹಾರದಲ್ಲಿ ದೊಡ್ಡ ಮಟ್ಟದ ನಷ್ಟವಾಗುವ ಸಾಧ್ಯತೆ ಇರುತ್ತದೆ ಎಂಬುದನ್ನು ಅರಿತ ಮಾನ, ಇದಕ್ಕೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದಳು. ಇದರ ಫಲವಾಗಿ ಹುಟ್ಟಿಕೊಂಡಿದ್ದೇ ‘ವೋಕ್ಸಾ’.
ಏನಿದು ‘ವೋಕ್ಸಾ’ (Voxa)?
ಇದು ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರ ಸಂಸ್ಥೆಗಳಿಗಾಗಿ ದಿನದ 24 ಗಂಟೆಯೂ ಕೆಲಸ ಮಾಡುವ ಒಂದು ಎಐ ಧ್ವನಿ ಸಹಾಯಕ (AI Voice Assistant). ಗ್ರಾಹಕರು ಮಾಡುವ ಕರೆಗಳನ್ನು ಇದು ನಿರ್ವಹಿಸುತ್ತದೆ. ಅಪಾಯಿಂಟ್‌ಮೆಂಟ್‌ಗಳನ್ನು ಕಾಯ್ದಿರಿಸುವುದು ಮತ್ತು ರೆಸ್ಟೋರೆಂಟ್‌ಗಳ ಆರ್ಡರ್‌ಗಳನ್ನು ದಾಖಲಿಸುತ್ತದೆ. ಪ್ರತಿಯೊಂದು ಕರೆಯ ನಂತರ ಆ ಸಂಭಾಷಣೆಯ ಪ್ರಮುಖ ಅಂಶಗಳ ಸಾರಾಂಶವನ್ನು (Summary) ಸಿದ್ಧಪಡಿಸಿ ಮಾಲೀಕರಿಗೆ ಕಳುಹಿಸುವ ಕೆಲಸ ಮಾಡುತ್ತದೆ.
ಇದನ್ನೂ ಓದಿ: ಏಷ್ಯಾಗೆ ಭರ್ಜರಿ ವಿದೇಶೀ ಹೂಡಿಕೆಗಳು; ಭಾರತಕ್ಕೆ ಎಫ್ಡಿಐ ಒಳಹರಿವು ಶೇ. 44ರಷ್ಟು ಜಿಗಿತ: ಯುಎನ್ಸಿಟಿಎಡಿ ವರದಿ
9ನೇ ವಯಸ್ಸಿಗೆ ಪೈಥಾನ್ ಕಲಿತ ಬಾಲಕಿ
ಮಾನಳಿಗೆ ಕೇವಲ 9 ವರ್ಷವಿರುವಾಗಲೇ ಎಐ ಮತ್ತು ಕೋಡಿಂಗ್ ಮೇಲೆ ಆಸಕ್ತಿ ಮೂಡಿತ್ತು. ಸ್ಕ್ರಾಚ್ ಕೋಡಿಂಗ್ ಕ್ಯಾಂಪ್‌ಗಳಲ್ಲಿ ಭಾಗವಹಿಸಿ, ನಂತರ ಪೈಥಾನ್ (Python) ಭಾಷೆಯನ್ನು ಕಲಿತಳು. ಭಾರತದಲ್ಲಿ ಕಾಲೇಜು ಮಟ್ಟದ ವಿಜ್ಞಾನ ಸ್ಪರ್ಧೆಯೊಂದರಲ್ಲಿ ಭಾಗವಹಿಸಿ ವಿಶೇಷ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಳು.
ತನ್ನ ಸ್ಟಾರ್ಟ್‌ಅಪ್‌ನ ಕೋಡಿಂಗ್ ಹಂತದಲ್ಲಿ ಆರಂಭದಲ್ಲಿ ಓಪನ್ ಎಐನ ‘ಚಾಟ್‌ಜಿಪಿಟಿ’ (ChatGPT) ಹಾಗೂ ನಂತರ ಆಂಥ್ರೋಪಿಕನ್ ‘ಕ್ಲೋಡ್’ (Claude) ತಂತ್ರಜ್ಞಾನಗಳನ್ನು ಬಳಸಿಕೊಂಡು, ಹಂತ-ಹಂತವಾಗಿ ಕೋಡ್ ಬರೆದು ಪರೀಕ್ಷಿಸಿ ಈಗ ತನ್ನದೇ ಆದ ಸ್ವತಂತ್ರ ಬ್ಯಾಕೆಂಡ್ ಸಿಸ್ಟಂ ಅನ್ನು ರೂಪಿಸಿದ್ದಾಳೆ.
ಮಾನಳ ಈ ಪರಿಶ್ರಮವನ್ನು ಗುರುತಿಸಿ, ವಿದ್ಯಾರ್ಥಿ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ಜಾಗತಿಕ ನಿಧಿಯಾದ ‘1517 ಮೆಡಿಸಿ ಪ್ರಾಜೆಕ್ಟ್’ (1517 Medici Project) ಈಕೆಗೆ ದೊಡ್ಡ ಮೊತ್ತದ ಅನುದಾನವನ್ನು (Grant) ನೀಡಿದೆ.
ಮಾನ ಜಂಪಾಲಗೆ ಎದುರಿರುವ ಸವಾಲುಗಳು ಮತ್ತು ಮುಂದಿನ ಗುರಿ
“ನನ್ನ ವಯಸ್ಸನ್ನು ನೋಡಿ ಆರಂಭದಲ್ಲಿ ಅನೇಕ ಗ್ರಾಹಕರು ಮತ್ತು ಹೂಡಿಕೆದಾರರು ಆಶ್ಚರ್ಯ ಪಡುತ್ತಿದ್ದರು ಹಾಗೂ ಅನುಮಾನದಿಂದ ನೋಡುತ್ತಿದ್ದರು. ಆದರೆ, ನಾನು ಆನ್‌ಲೈನ್ ಮೂಲಕ ಪ್ರಚಾರ ಮಾಡಲು ಆರಂಭಿಸಿದಾಗ ಜನರು ನನ್ನ ವಯಸ್ಸಿಗಿಂತ ಹೆಚ್ಚಾಗಿ ನನ್ನ ಪ್ರೊಡಕ್ಟ್‌ನ ಗುಣಮಟ್ಟವನ್ನು ನೋಡಿ ಇಷ್ಟಪಡಲಾರಂಭಿಸಿದರು” ಎಂದು ಮಾನ ಜಂಪಾಲಾ ತನಗಾದ ಅನುಭವವನ್ನು ಹಂಚಿಕೊಂಡಿದ್ದಾಳೆ.
ಸದ್ಯದಲ್ಲೇ ಪ್ರಸಿದ್ಧ ಸ್ಟಾರ್ಟ್‌ಅಪ್ ಆಕ್ಸಿಲರೇಟರ್ ಆದ ‘ವೈ ಕಾಂಬಿನೇಟರ್’ (Y Combinator) ನೆರವನ್ನು ಪಡೆಯುವ ಇರಾದೆ ಹೊಂದಿರುವ ಮಾನ, ಮುಂಬರುವ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರನ್ನು ಸೆಳೆಯುವ ವಿಶ್ವಾಸದಲ್ಲಿದ್ದಾಳೆ. ಈ ಪುಟ್ಟ ಬಾಲಕಿಯ ಸಾಧನೆ ಇಂದಿನ ಯುವ ಪೀಳಿಗೆಗೆ ನಿಜಕ್ಕೂ ಮಾದರಿಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
