‘ವ್ಯವಸ್ಥೆ ಶುದ್ಧೀಕರಿಸದಿದ್ದರೆ ಅರ್ಹತೆಯಿರುವ ಯುವಜನತೆ ನರಳುತ್ತಾರೆ’: KPSC ಅಧ್ಯಕ್ಷಗೆ ಶಾಕ್ ಕೊಟ್ಟ ಕೋರ್ಟ್ – Kannada News | KPSC Chairman Case: High Court Issues Notice on CBI Probe Against Shivashankarappa Sahukar

ಬೆಂಗಳೂರು, ಜುಲೈ 20: ಸುಳ್ಳು ಜಾತಿ ಹಾಗೂ ಆದಾಯ ಪ್ರಮಾಣಪತ್ರ ಸಲ್ಲಿಸಿ ಪುತ್ರಿಯರಿಗೆ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ ಆರೋಪ ಎದುರಿಸುತ್ತಿರುವ ಕರ್ನಾಟಕ ಲೋಕಸೇವಾ ಆಯೋಗದ (KPSC) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಕಷ್ಟ ಮತ್ತಷ್ಟು ಬಿಗಿಗೊಂಡಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ (High Court), ಇಂದು ರಾಜ್ಯ ಸರ್ಕಾರ ಹಾಗೂ ಸಿಬಿಐಗೆ ನೋಟಿಸ್ ಜಾರಿ ಮಾಡಿದೆ.

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ವಿದ್ಯಾರ್ಥಿಗಳ ಸಂಘಟನೆಯಿಂದ ಸಲ್ಲಿಸಲಾಗಿದ್ದ, ಜಂಟಿ ರಿಟ್ ಅರ್ಜಿ ಸಂಬಂಧಿಸಿದಂತೆ ಇಂದು ವಿಚಾರಣೆ ಮಾಡಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಪ್ರಕರಣದ ಕುರಿತು ಅತ್ಯಂತ ಗಂಭೀರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

ತನಿಖೆಯು ಕೇವಲ ಕಣ್ಣೊರೆಸುವ ತಂತ್ರವಾಗಿದೆ: ವಕೀಲ ವೆಂಕಟೇಶ ದಳವಾಯಿ

ಈ ಕುರಿತು ವಾದ ಮಂಡಿಸಿದ ಅರ್ಜಿದಾರರ ಪರ ವಕೀಲ ವೆಂಕಟೇಶ ದಳವಾಯಿ, “ಸದ್ಯ ನಡೆಯುತ್ತಿರುವ ತನಿಖೆಯು ಕೇವಲ ಕಣ್ಣೊರೆಸುವ ತಂತ್ರವಾಗಿದೆ. ಹೀಗಾಗಿ ಹೈಕೋರ್ಟ್ ನೇರ ಉಸ್ತುವಾರಿಯಲ್ಲಿ ಸ್ವತಂತ್ರ ಸಂಸ್ಥೆಯಿಂದ ತನಿಖೆಯಾಗಬೇಕು” ಎಂದು ಹಕ್ಕೊತ್ತಾಯ ಮಂಡಿಸಿದರು.

ಇದನ್ನೂ ಓದಿ: ಮಗಳ ಸರ್ಕಾರಿ ನೌಕರಿಗಾಗಿ ಸಾಹುಕಾರ್ ಅಕ್ರಮ ಎಸಗಿರೋದು ಅಕ್ಷಮ್ಯ ಅಪರಾಧ; ಕೆಪಿಎಸ್‌ಸಿ ಹಗರಣದ ತನಿಖೆ ಸಿಬಿಐಗೆ ಒಪ್ಪಿಸಲು ಯತ್ನಾಳ್ ಆಗ್ರಹ

ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಕೆಪಿಎಸ್‌ಸಿ ಅಧ್ಯಕ್ಷರ ವಿರುದ್ಧ ಕೇಳಿಬಂದಿರುವ ಆರೋಪಗಳು ಅತ್ಯಂತ ಆಘಾತಕಾರಿ ಎಂದು ತೀವ್ರ ಕಳವಳ ವ್ಯಕ್ತಪಡಿಸಿತು. ಇಂತಹ ಗಂಭೀರ ಪ್ರಕರಣದಲ್ಲಿ ಈಗ ರಾಜ್ಯ ಸರ್ಕಾರದ ಅಧೀನದ ಎಸ್‌ಐಟಿ ರಚಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಈ ಕುರಿತು ಕೇಂದ್ರ ತನಿಖಾ ಸಂಸ್ಥೆಯಾದ ಸಿಬಿಐಗೆ ನೋಟಿಸ್ ಜಾರಿಗೊಳಿಸಿದೆ.

ವ್ಯವಸ್ಥೆ ಶುದ್ಧೀಕರಿಸದಿದ್ದರೆ ಅರ್ಹತೆಯಿರುವ ಯುವಜನತೆ ನರಳುತ್ತಾರೆ: ನ್ಯಾ.ಎಂ.ನಾಗಪ್ರಸನ್ನ

ಇನ್ನು ಈ ವೇಳೆ ಇಡೀ ವ್ಯವಸ್ಥೆಯ ಕುರಿತು ಮಾರ್ಮಿಕವಾಗಿ ನುಡಿದ ನ್ಯಾಯಮೂರ್ತಿಗಳು, “ಈ ಹಗರಣದ ಹಿಂದೆ ಸ್ವತಂತ್ರ ತನಿಖಾ ಸಂಸ್ಥೆಯಿಂದ ಆಳವಾದ ತನಿಖೆ ನಡೆಯುವ ಅಗತ್ಯವಿದೆ. ಇಂತಹ ಸಂಸ್ಥೆಗಳ ವ್ಯವಸ್ಥೆಯನ್ನು ನಾವೀಗ ಶುದ್ಧೀಕರಿಸದಿದ್ದರೆ, ಕಷ್ಟಪಟ್ಟು ಓದುವ ಅರ್ಹತೆಯಿರುವ ಬಡ ಯುವಜನತೆ ಮತ್ತು ಉದ್ಯೋಗಾಕಾಂಕ್ಷಿಗಳು ನಿರಂತರವಾಗಿ ನರಳಬೇಕಾಗುತ್ತದೆ” ಎಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಪ್ರಕರಣ ಹಿನ್ನಲೆ

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಲ್ಲಿನ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆ ಪಡೆಯಲು ಪುತ್ರಿ ಸುಮಾ ಎಸ್. ಸಾಹುಕಾರ್ ಅವರಿಗೆ ಸುಳ್ಳು ಆದಾಯ ಪ್ರಮಾಣ ಪತ್ರ ಪಡೆಯಲು ನೇರವಾಗಿರುವ ಆರೋಪದ ಹಿನ್ನೆಲೆಯಲ್ಲಿ ಶಿವಶಂಕರಪ್ಪ ಸಾಹುಕಾರ್ ರಾಜೀನಾಮೆಗೆ ಜೂನ್ 19 ರಂದು ನಡೆದಿದ್ದ ಕೆಪಿಎಸ್ ಸಿ ಸಭೆಯಲ್ಲಿ ಸದಸ್ಯರು ನಿರ್ಣಯ ತೆಗೆದುಕೊಂಡಿದ್ದರು. ಆಯೋಗದ ನಿರ್ಣಯ ಪ್ರಶ್ನಿಸಿ ಸಾಹುಕಾರ್ ಸಲ್ಲಿಸಿದ್ದ ರಿಟ್ ಅರ್ಜಿಗೆ ಜುಲೈ 10 ರಂದು ಹೈಕೋರ್ಟ್ ತಡೆ ನೀಡಿತ್ತು. ಇದರ ಬೆನ್ನಲ್ಲೇ ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆಂದು ಕೆಪಿಎಸ್ ಸಿ ಕಾರ್ಯದರ್ಶಿ ಜ್ಯೋತಿ ಸಲ್ಲಿಸಿದ್ದ ಪೊಲೀಸ್ ದೂರಿನ ಹಿನ್ನೆಲೆಯಲ್ಲಿ ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 10:20 pm, Mon, 20 July 26

Source link

Leave a Reply

Your email address will not be published. Required fields are marked *