Headlines

ಶಬರಿಮಲೆ ‘ವಾಕ್ದೋಷ’ ಪರಿಹಾರಕ್ಕೆ ವಿಶೇಷ ಪೂಜೆ: ಕೊಲ್ಲೂರು ಮೂಕಾಂಬಿಕಾ ಸೇರಿ 25 ಕ್ಷೇತ್ರಗಳಲ್ಲಿ ಧಾರ್ಮಿಕ ವಿಧಿವಿಧಾನ – Kannada News | Sabarimala ‘Vaakdosha’ Remedy: Special Rituals Held at 25 Temples Including Kollur Mookambika

ಶಬರಿಮಲೆ ‘ವಾಕ್ದೋಷ’ ಪರಿಹಾರImage Credit source: Pinterest

ಶಬರಿಮಲೆ ಶ್ರೀ ಧರ್ಮಶಾಸ್ತ ದೇವಸ್ಥಾನದಲ್ಲಿ ಪತ್ತೆಯಾಗಿದ್ದ ‘ವಾಕ್ದೋಷ’ ಪರಿಹಾರಕ್ಕಾಗಿ ತಿರುವಾಂಕೂರು ದೇವಸ್ವಂ ಮಂಡಳಿ (TDB) ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆರಂಭಿಸಿದೆ. ಮಂಡಲ-ಮಕರವಿಳಕ್ಕು(ಮಕರ ಜ್ಯೋತಿ) ತೀರ್ಥಯಾತ್ರೆ ಆರಂಭಕ್ಕೂ ಮುನ್ನ ಕೇರಳ ಮತ್ತು ಕರ್ನಾಟಕದ ಒಟ್ಟು 25 ಪ್ರಮುಖ ದೇವಾಲಯಗಳಲ್ಲಿ ವಿವಿಧ ಪರಿಹಾರ ಪೂಜೆಗಳು, ಪ್ರಾಯಶ್ಚಿತ್ತ ವಿಧಿವಿಧಾನಗಳು ಹಾಗೂ ಕಾಣಿಕೆ ಸಮರ್ಪಣೆಗಳನ್ನು ನೆರವೇರಿಸಲಾಗುತ್ತಿದೆ.

ಏನಿದು ಶಬರಿಮಲೆ ‘ವಾಕ್ದೋಷ’?

2018ರಲ್ಲಿ ಶಬರಿಮಲೆಯಲ್ಲಿ ನಡೆದ ಅಷ್ಟಮಂಗಲ ದೇವಪ್ರಶ್ನೆಯಲ್ಲಿ ‘ವಾಕ್ದೋಷ’ ಇರುವುದಾಗಿ ಸೂಚಿಸಲಾಗಿತ್ತು. ಭಕ್ತರೊಂದಿಗೆ ದೇವಸ್ಥಾನದ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಅಸಭ್ಯವಾಗಿ, ಕಟುವಾಗಿ ಅಥವಾ ನಿಂದನಾತ್ಮಕವಾಗಿ ವರ್ತಿಸಿರುವುದು ಈ ದೋಷಕ್ಕೆ ಕಾರಣವೆಂದು ದೇವಪ್ರಶ್ನೆಯಲ್ಲಿ ತಿಳಿಸಲಾಗಿತ್ತು. ಈ ದೋಷದ ನಿವಾರಣೆಗಾಗಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಕಾಣಿಕೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು. ಅದರಂತೆ ಇದೀಗ TDB ವತಿಯಿಂದ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಕೊಲ್ಲೂರು ಮೂಕಾಂಬಿಕೆಯಲ್ಲಿ ವಿಶೇಷ ಪೂಜೆ:

ಕರ್ನಾಟಕದ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿಯೂ ವಿಶೇಷ ಪರಿಹಾರ ವಿಧಿವಿಧಾನಗಳನ್ನು ನಡೆಸಲಾಗುತ್ತಿದೆ. ಇದರ ಭಾಗವಾಗಿ ಬೆಳ್ಳಿ ನಾಲಿಗೆ, ಬೆಳ್ಳಿಯ ಗಂಟೆ ಮತ್ತು ಬೆಳ್ಳಿಯ ಲೇಖನಿಯನ್ನು ಸಾಂಕೇತಿಕ ಕಾಣಿಕೆಯಾಗಿ ಸಮರ್ಪಿಸಲಾಗಿದೆ. ಆಗಸ್ಟ್ 3ರಂದು ಶಬರಿಮಲೆ ಸನ್ನಿಧಾನದಲ್ಲಿ ನಿರಪುತರಿ ಹಬ್ಬದ ಸಂದರ್ಭದಲ್ಲಿ ಪೂಜಿಸಲ್ಪಟ್ಟ ವಿಶೇಷ ಗಂಟೆಯನ್ನು ಕೊಲ್ಲೂರಿಗೆ ತರಲಾಗಿದೆ. ನವರಾತ್ರಿ ಉತ್ಸವದ ಬಳಿಕ ಇಲ್ಲಿ ಮಹಾಪೂಜೆ ನೆರವೇರಿಸಲು ನಿರ್ಧರಿಸಲಾಗಿದೆ.

ಕಾಸರಗೋಡು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವಿಧಿವಿಧಾನ:

ಕಾಸರಗೋಡಿನ ಬೆಳ ಕುಮಾರಮಂಗಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಪೂಜೆ ಹಾಗೂ 1,001ರೂ. ಮಹಾಕಾಣಿಕೆ ಸಮರ್ಪಣೆ ಪೂರ್ಣಗೊಂಡಿದೆ. ಕೊಲ್ಲೂರಿನಲ್ಲಿ ಮಹಾಪೂಜೆ ನಡೆಯುವ ದಿನವೇ ಇಲ್ಲಿಯೂ ‘ರಂಗಪೂಜೆ’ ನೆರವೇರಿಸಲಾಗುತ್ತದೆ. ಇದಲ್ಲದೆ ಕಣ್ಣೂರಿನ ಎಡಕ್ಕಾಡ್ ಮಹಾವಿಷ್ಣು ದೇವಸ್ಥಾನ, ತೃಶ್ಶೂರಿನ ವಡಕ್ಕುಂನಾಥನ್ ದೇವಸ್ಥಾನ, ಇರಿಂಜಾಲಕುಡದ ಕೂಡಲ್ಮಾಣಿಕ್ಯಂ ದೇವಸ್ಥಾನ ಮತ್ತು ಗುರುವಾಯೂರಿನ ಶ್ರೀಕೃಷ್ಣ ದೇವಸ್ಥಾನ ಸೇರಿದಂತೆ ಹಲವು ಪ್ರಸಿದ್ಧ ಕ್ಷೇತ್ರಗಳಲ್ಲಿ ನಿರಮಾಲೆ, ನೆಯ್ಯಿವಿಳಕ್ಕು, ಹಾಲುಪಾಯಸ ಹಾಗೂ ವಿವಿಧ ಕಾಣಿಕೆ ಸಮರ್ಪಣೆಗಳು ನಡೆಯುತ್ತಿವೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

‘ಸುವರ್ಣ ಯುಗ’ದ ನಿರೀಕ್ಷೆ:

ಈ ಕುರಿತು TDB ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ. ಜಯಕುಮಾರ್ ಮಾತನಾಡಿದ್ದು, ಎಲ್ಲಾ ಪರಿಹಾರ ಪೂಜೆಗಳು ಪೂರ್ಣಗೊಂಡ ಬಳಿಕ ದೇವಸ್ವಂ ಮಂಡಳಿ ಮತ್ತು ಶಬರಿಮಲೆ ಕ್ಷೇತ್ರದ ಇತಿಹಾಸದಲ್ಲಿ ಹೊಸ ‘ಸುವರ್ಣ ಯುಗ’ ಆರಂಭವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 16ರಿಂದ ಶಬರಿಮಲೆ ಮಾಸಿಕ ಪೂಜೆ:

ಇದೇ ವೇಳೆ, ಮಲಯಾಳಂ ಚಿಂಗಂ ತಿಂಗಳ ಮಾಸಿಕ ಪೂಜೆಗಾಗಿ ಶಬರಿಮಲೆ ದೇವಸ್ಥಾನದ ಬಾಗಿಲು ಆಗಸ್ಟ್ 16ರಂದು ಸಂಜೆ ತೆರೆಯಲಿದೆ. ಆಗಸ್ಟ್ 21ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರಲಿದೆ. ನಂತರ ಓಣಂ ಹಬ್ಬದ ವಿಶೇಷ ಪೂಜೆಗಳಿಗಾಗಿ ಆಗಸ್ಟ್ 24ರಿಂದ 28ರವರೆಗೆ ದೇವಸ್ಥಾನ ಮತ್ತೆ ತೆರೆಯಲಿದೆ. ಶಬರಿಮಲೆ ದರ್ಶನಕ್ಕೆ ಆಗಮಿಸುವ ಭಕ್ತರು ಅಧಿಕೃತ ವೆಬ್‌ಸೈಟ್ ಮೂಲಕ ವರ್ಚುವಲ್ ಕ್ಯೂ (Virtual Queue) ಕಾಯ್ದಿರಿಸಬಹುದಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 8:39 am, Sat, 8 August 26

Source link

Leave a Reply

Your email address will not be published. Required fields are marked *