ಬಹುಭಾಷಾ ನಟಿ ಶರ್ಮಿಳಾ ಮಾಂಡ್ರೆ (Sharmila Mandre) ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ತಮಿಳಿನ ಖ್ಯಾತ ಚಿತ್ರ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ಮುಂದಿನ ವಾರ ಶರ್ಮಿಳಾ ಅವರ ನಿಶ್ಚಿತಾರ್ಥ ನೆರವೇರಲಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಆದರೆ, ಈ ಸಂತಸದ ಸುದ್ದಿ ಹೊರಬೀಳುತ್ತಿದ್ದಂತೆ ಇತ್ತ ಪ್ರಖ್ಯಾತ ನಿರ್ದೇಶಕ, ನಟ ಪವನ್ ಕುಮಾರ್ ಅವರಿಗೆ ‘ಹಾರ್ಟ್ ಬ್ರೇಕ್’ ಆಗಿದೆ.
ಹೌದು, ಶರ್ಮಿಳಾ ಮಾಂಡ್ರೆ ಅವರ ಮದುವೆ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಪವನ್ ಕುಮಾರ್ ತಮ್ಮದೇ ಶೈಲಿಯಲ್ಲಿ ತಮಾಷೆಯ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.
ಏನಿದು ‘ಗಾಳಿಪಟ 2’ ಕನೆಕ್ಷನ್?
ನಿರ್ದೇಶಕ ಯೋಗರಾಜ್ ಭಟ್ ಅವರ ‘ಗಾಳಿಪಟ 2’ ಸಿನಿಮಾದಲ್ಲಿ ಪವನ್ ಕುಮಾರ್ ಮತ್ತು ಶರ್ಮಿಳಾ ಮಾಂಡ್ರೆ ಜೊತೆಯಾಗಿ ನಟಿಸಿದ್ದರು. ಚಿತ್ರದಲ್ಲಿ ಶರ್ಮಿಳಾ ಅವರನ್ನು ಪವನ್ ಜೀವಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಆದರೆ, ಶರ್ಮಿಳಾ ಬೇರೆಯವರನ್ನು ಮದುವೆಯಾಗಿ ಪವನ್ ಅವರ ಹೃದಯ ಒಡೆಯುತ್ತಾರೆ. ಇದೀಗ ನಿಜ ಜೀವನದಲ್ಲೂ ಶರ್ಮಿಳಾ ತಮಿಳು ನಿರ್ಮಾಪಕನ ಕೈ ಹಿಡಿಯುತ್ತಿರುವುದಕ್ಕೆ, ಪವನ್ ಕುಮಾರ್ ಸಿನಿಮಾ ಶೈಲಿಯಲ್ಲೇ ರೀಲ್ಸ್ ಮಾಡಿ ಕಾಲೆಳೆದಿದ್ದಾರೆ.
ವೈರಲ್ ವಿಡಿಯೋದಲ್ಲೇನಿದೆ?
ವಿಡಿಯೋದ ಆರಂಭದಲ್ಲಿ ಶರ್ಮಿಳಾ ಮಾಂಡ್ರೆ ಸೋಫಾ ಮೇಲೆ ಕೂತು ಪುಸ್ತಕ ಓದುತ್ತಿರುತ್ತಾರೆ. ಹಿನ್ನೆಲೆಯಲ್ಲಿ ‘ಗಾಳಿಪಟ 2’ ಚಿತ್ರದ ಹಾಡು ಪ್ಲೇ ಆಗುತ್ತಿರುತ್ತದೆ. ಕ್ಯಾಮೆರಾ ತಿರುಗುತ್ತಿದ್ದಂತೆ ಅಲ್ಲಿ ಪವನ್ ಕುಮಾರ್ ಹತಾಶರಾಗಿ ನಿಂತಿರುತ್ತಾರೆ ಮತ್ತು ಅವರ ಎದೆಯ ಮೇಲೆ ಒಡೆದ ಹೃದಯದ ಎಮೋಜಿ ಮೂಡುತ್ತದೆ. ನಂತರ ಶರ್ಮಿಳಾ ಹಾಗೂ ಸುಧನ್ ಸುಂದರಂ ಅವರ ನಿಶ್ಚಿತಾರ್ಥದ ಸುದ್ದಿ ಕಾಣಿಸಿಕೊಳ್ಳುತ್ತದೆ. ಕೊನೆಯಲ್ಲಿ ಪವನ್, ‘ನಿಮ್ಮ ನಿರ್ಧಾರಕ್ಕೆ ನನ್ನ ಸಂತೋಷವಿದೆ ಶಮ್ಮಿ ಮ್ಯಾಮ್’ ಎನ್ನುತ್ತಾ ಅಳುತ್ತಿರುವ ಫನ್ನಿ ಮೀಮ್ ಒಂದನ್ನು ಸೇರಿಸಿ ವಿಡಿಯೋ ಮುಗಿಸಿದ್ದಾರೆ.
ಇದನ್ನೂ ಓದಿ: ಮದುವೆಯಾಗುತ್ತಿದ್ದಾರಾ ಶರ್ಮಿಳಾ ಮಾಂಡ್ರೆ, ವರ ಯಾರು ಗೊತ್ತೆ?
ರೀಲ್ ಲೈಫ್ ಕಥೆ ರಿಯಲ್ ಲೈಫ್‌ನಲ್ಲೂ ಮರುಕಳಿಸಿದೆ ಎಂದು ಪವನ್ ಕುಮಾರ್ ಮಾಡಿರುವ ಈ ಕ್ರಿಯೇಟಿವ್ ಪೋಸ್ಟ್‌ಗೆ ನೆಟ್ಟಿಗರು ಹಾಗೂ ಚಿತ್ರರಂಗದ ಗಣ್ಯರು ಬಿದ್ದು ಬಿದ್ದು ನಗುತ್ತಿದ್ದಾರೆ. ‘ನಿಮ್ಮ ಪ್ರೀತಿ ಸಿನಿಮಾದಲ್ಲೂ ಸಿಗಲಿಲ್ಲ, ನಿಜ ಜೀವನದಲ್ಲೂ ಸಿಗಲಿಲ್ಲವೇ?’ ಎಂದು ನೆಟ್ಟಿಗರು ಪವನ್ ಕಾಲೆಳೆಯುತ್ತಿದ್ದಾರೆ. ಈ ವಿಡಿಯೋಗೆ ‘ಓಹ್ ಮೈ ಗಾಡ್’ ಅಂತ ಶರ್ಮಿಳಾ ಕಮೆಂಟ್ ಹಾಕಿದ್ದಾರೆ. ಇದಕ್ಕೆ ಉತ್ತರಿಸಿರೋ ಪವನ್, ‘ಶರ್ಮಿಳಾ ಮಾಂಡ್ರೆ ಎಂಥಾ ಗೆಳತಿ ಅಂದ್ರೆ, ಯುಗಯುಗಗಳೇ ಕಳೆದ್ರೂ ನನಗೆ ಸಿಗಲ್ಲ. ಆದರೆ, ನಾವು ಯಾವಾಗ ಮಾತನಾಡಿದರೂ ನಮ್ಮ ನಡುವೆ ಅಷ್ಟೇ ಸೂಪರ್ ಕನೆಕ್ಷನ್ ಇರುತ್ತೆ. ಇನ್ನು ನಮ್ಮಿಬ್ಬರ ಮಧ್ಯೆ ಇರೋ ಆ ಚುಚ್ಚುವ, ನೋವುಂಟುಮಾಡುವ,ಕೊಂಕು ಮತ್ತು ರೇಗಿಸುವ ಡಾರ್ಕ್ ಹ್ಯೂಮರ್ ಅಂದ್ರೆ ನಮಗೆ ಸಖತ್ ಇಷ್ಟ. ಕಂಗ್ರಾಜುಲೇಷನ್ಸ್ ಕಣೋ.. ನಾನೇ ಮುಂದೆ ನಿಂತು ಖುಷಿಯಿಂದ ಕನ್ಯಾದಾನ ಮಾಡ್ತೀನಿ’ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
