Headlines

ಶಸ್ತ್ರಾಸ್ತ್ರ ಕೊರತೆ ವರದಿಗೆ ಟ್ರಂಪ್ ಕೆಂಡಾಮಂಡಲ: ವಾಷಿಂಗ್ಟನ್ ಪೋಸ್ಟ್ ವರದಿಯನ್ನು ದೇಶದ್ರೋಹ ಎಂದ ಯುಎಸ್ ಅಧ್ಯಕ್ಷ – Kannada News | Trump Blasts Washington Post as ‘Treasonous’ Amidst Iran Nuclear Tensions

ವಾಷಿಂಗ್ಟನ್, ಆಗಸ್ಟ್​ 07: ಇರಾನ್ ಜೊತೆಗಿನ ಮಿಲಿಟರಿ ಸಂಘರ್ಷವು ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ. ಇರಾನ್(Iran) ಹೆಚ್ಚು ಕಾಲ ಈ ಯುದ್ಧವನ್ನು ಮುಂದುವರೆಸಲು ಸಾಧ್ಯವಿಲ್ಲ ಎಂದಿರುವ ಟ್ರಂಪ್, ಯಾವುದೇ ಕಾರಣಕ್ಕೂ ಟೆಹ್ರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ ಶ್ವೇತಭವನದ ಓವಲ್ ಕಚೇರಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಹಾರ್ಮುಜ್ ಜಲಸಂಧಿಯ ಭದ್ರತೆ ಹಾಗೂ ಯುಎಸ್ ಮಿಲಿಟರಿ ಶಸ್ತ್ರಾಸ್ತ್ರ ಕೊರತೆಯ ಕುರಿತು ಹರಿದಾಡುತ್ತಿರುವ ವರದಿಗಳ ಬಗ್ಗೆ ಸ್ಪಷ್ಟನೆ ನೀಡಿದರು. ಟ್ರಂಪ್ ಪ್ರಕಾರ, ಇರಾನ್‌ನಲ್ಲಿ ಆಂತರಿಕ ಹಾಗೂ ರಾಜಕೀಯ ಬಿಕ್ಕಟ್ಟು ಹೆಚ್ಚುತ್ತಿರುವುದರಿಂದ ಯುದ್ಧ ಶೀಘ್ರವೇ ಕೊನೆಗೊಳ್ಳಲಿದೆ. ಇರಾನ್‌ಗೆ ಪರಮಾಣು ಅಸ್ತ್ರ ಸಿಕ್ಕರೆ ಇಡೀ ಜಗತ್ತೇ ಸ್ಫೋಟಗೊಳ್ಳುತ್ತದೆ ಎಂದು ಅವರು ಎಚ್ಚರಿಸಿದರು.

ಜಾಗತಿಕ ಇಂಧನ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ ನೌಕಾಪಡೆ ಸಂಪೂರ್ಣ ನಿಯಂತ್ರಣ ಸಾಧಿಸಿದೆ. ಇರಾನ್‌ನಿಂದ ಯಾವುದೇ ಬೆದರಿಕೆ ಬರದಂತೆ ಜಲಮಾರ್ಗವನ್ನು ಸುರಕ್ಷಿತವಾಗಿರಿಸಲಾಗಿದೆ ಎಂದು ಅವರು ತಿಳಿಸಿದರು.

‘ವಾಷಿಂಗ್ಟನ್ ಪೋಸ್ಟ್’ಗೆ ಟ್ರಂಪ್ ಆಕ್ರೋಶ: ಅಮೆರಿಕ ಸೇನೆಯ ಬಳಿ ಯುದ್ಧ ಸಾಮಗ್ರಿಗಳ ಕೊರತೆಯಿದೆ ಮತ್ತು ಟ್ರಂಪ್ ಈ ಬಗ್ಗೆ ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರಿಂದ ವಿವರಣೆ ಕೇಳಿದ್ದಾರೆ ಎಂಬ ‘ದಿ ವಾಷಿಂಗ್ಟನ್ ಪೋಸ್ಟ್’ ವರದಿಯನ್ನು ಟ್ರಂಪ್ ತೀವ್ರವಾಗಿ ಖಂಡಿಸಿದ್ದಾರೆ.

ಈ ವರದಿಯು ಸಂಪೂರ್ಣ ಸುಳ್ಳು ಮತ್ತು ನಕಲಿ ಸುದ್ದಿ ಎಂದು ಟ್ರುತ್ ಸೋಶಿಯಲ್‌ನಲ್ಲಿ ಬರೆದುಕೊಂಡಿರುವ ಟ್ರಂಪ್, ಇದನ್ನು ದೇಶದ್ರೋಹದ ವರದಿ ಎಂದು ಬಣ್ಣಿಸಿದ್ದಾರೆ. ತಮ್ಮ ಮಿಲಿಟರಿ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರ ಕಾರ್ಯವೈಖರಿಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಕಳೆದ ಫೆಬ್ರವರಿಯಿಂದ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ನಿರಂತರ ವಾಯುದಾಳಿ ಹಾಗೂ ಪ್ರತಿ-ದಾಳಿಗಳಿಂದ ಮಧ್ಯಪ್ರಾಚ್ಯದಲ್ಲಿ ತೀವ್ರ ಉದ್ವಿಗ್ನತೆ ಸೃಷ್ಟಿಯಾಗಿದೆ.

ಮತ್ತಷ್ಟು ಓದಿ: ಇರಾನ್ ಯುದ್ಧದ ನಡುವೆ ದುಬೈನ ಜೆಬೆಲ್ ಅಲಿ ಕೈಗಾರಿಕಾ ಪ್ರದೇಶದಲ್ಲಿ 7 ಸ್ಫೋಟ

ಇರಾನ್ ಮೇಲಿನ ದಿಗ್ಬಂಧನ ಮತ್ತು ಹಾರ್ಮುಜ್ ಜಲಸಂಧಿಯ ಮೇಲಿನ ಸೈನಿಕ ನಿಯಂತ್ರಣದಿಂದ ಜಾಗತಿಕ ತೈಲ ಪೂರೈಕೆಯಲ್ಲಿ ಏರಿಳಿತ ಉಂಟಾಗಿದ್ದು, ಮಾತುಕತೆಯ ಮೂಲಕ ಶಾಂತಿ ಸ್ಥಾಪಿಸಲು ಅಂತಾರಾಷ್ಟ್ರೀಯ ಒತ್ತಡವೂ ಹೆಚ್ಚುತ್ತಿದೆ. ಟ್ರಂಪ್ ಆಡಳಿತದಲ್ಲಿ ಅಮೆರಿಕದ ಯುದ್ಧ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಹೆಗ್ಸೆತ್, ಸೇನೆಯ ಸಾಮರ್ಥ್ಯ ಮತ್ತು ಯುದ್ಧ ತಂತ್ರಗಳನ್ನು ಮರುರಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಇರಾನ್ ಸ್ಥಿತಿ: ಇತ್ತೀಚಿನ ವಾಯುದಾಳಿಗಳು ಮತ್ತು ನಾಯಕರ ನಷ್ಟದಿಂದಾಗಿ ಇರಾನ್ ಮಿಲಿಟರಿ ಮತ್ತು ನಾಗರಿಕ ಆಡಳಿತವು ಭಾರಿ ಸಂಕಷ್ಟದಲ್ಲಿದ್ದು, ಮಾತುಕತೆ ಅಥವಾ ಶರಣಾಗತಿಯ ಹಂತಕ್ಕೆ ತಲುಪಿದೆ ಎಂದು ವಾಷಿಂಗ್ಟನ್ ಆಡಳಿತ ವಿಶ್ಲೇಷಿಸುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *