ಮೈಸೂರು, (ಏಪ್ರಿಲ್ 25): ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 ಫಲಿತಾಂಶ (SSLC Results 2026) ಪ್ರಕಟವಾಗಿದ್ದು, ಈ ಬಾರಿ ದಾಖಲೆಯ ಶೇ.94.1ರಷ್ಟು ಫಲಿತಾಂಶ ದಾಖಲಾಗಿದೆ. ಇದು ಕರ್ನಾಟಕ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ದಾಖಲೆಯ ಫಲಿತಾಂಶ ಬಂದಿದೆ. ಈ ಬಗ್ಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಖುಷಿಯಿಂದಲೇ ಹೇಳಿಕೊಂಡಿದ್ದಾರೆ. ಆದ್ರೆ, ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿನ ಅನಿರೀಕ್ಷಿತ ಏರಿಕೆಯ ಕುರಿತು ಮಾಜಿ ಶಿಕ್ಷಣ ಸಚಿವ, ಪರಿಷತ್ ಸದಸ್ಯ ಎಚ್. ವಿಶ್ವನಾಥ್ (BJP MLC H Vishwanath) ತೀವ್ರ ಅಚ್ಚರಿ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್, ರಾಜ್ಯದಾದ್ಯಂತ ಅದರಲ್ಲೂ ವಿಶೇಷವಾಗಿ ಯಾದಗಿರಿ, ಬಳ್ಳಾರಿ ಮತ್ತು ಬೀದರ್‌ನಂತಹ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಶಿಕ್ಷಕರ ಕೊರತೆ ಇದ್ದರೂ ಸಹ, ಇಷ್ಟು ದೊಡ್ಡ ಮಟ್ಟದ ಫಲಿತಾಂಶ ಬಂದಿರುವುದು ಹೇಗೆ ಸಾಧ್ಯ? ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರೆತೆ ಇದೆ, ಈ ನಡುವೆ ಗ್ರೇಸ್ ಮಾರ್ಕ್ ನೀಡಿ ವಿದ್ಯಾರ್ಥಿಗಳನ್ನು ಪಾಸ್ ಮಾಡಿದರೆ ಮುಂದೆ ಅವರ ಭವಿಷ್ಯ ಏನು? ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
