ದಾವಣಗೆರೆ, (ಮೇ 15): ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಮರ್ಥ್ ಶಾಮನೂರು (Samarth Shamanur) ಮೊದಲ ಬಾರಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ನಿನ್ನೆ (ಮೇ 14) ವಿಧಾನಸೌಧಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಸಮರ್ಥ್ ಮರುದಿನವೇ ಅಂದರೆ ಇಂದು (ಮೇ 15) ಅಧಿಕಾರಿಗಳ ಸಭೆ ನಡೆಸಿ ಗಮನಸೆಳೆದಿದ್ದಾರೆ. ದಾವಣಗೆರೆ (Davanagere) ನಗರದ ಅರುಣಾ ಸರ್ಕಲ್ ಬಳಿ ಇರುವ ಪಶುಸಂಗೋಪನೆ ಇಲಾಖೆ ಸಭಾಂಗಣದಲ್ಲಿ ಸಭೆ ನಡೆದಿದ್ದು, ಅಧಿಕಾರಿಗಳು ನೀಡಿದ ಮಾಹಿತಿಯನ್ನು ಲ್ಯಾಪ್ಟಾಪ್ನಲ್ಲಿ ದಾಖಲು ಮಾಡಿಕೊಂಡರು. ಇನ್ನು ಸಭೆಯಲ್ಲೇ ಪ್ರಮುಖವಾಗಿ ಕುಡಿಯುವ ನೀರಿಗೆ ಹೊತ್ತು ಕೊಟ್ಟಿರುವುದು ವಿಶೇಷವಾಗಿದೆ.
ಹೌದು..ಯಾವ ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎನ್ನುವ ಬಗ್ಗೆ ಚರ್ಚಿಸಿದ್ದು, ತಕ್ಷಣಕ್ಕೆ ನಾಲ್ಕು ಕಡೆ ಬೋರ್ ವೆಲ್ ಕೊರೆಯಿಸಲು ನಿರ್ಧರಿಸಲಾಗಿದೆ. ಇನ್ನು ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕ ಸಮರ್ಥ್, ಅಧಿಕಾರಿಗಳು, ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳು ನೀಡುವ ಮಾಹಿತಿ ಪಡೆದು ಸೂಕ್ತ ನಿರ್ಧಾರ ತೆಗೆದುಕೊಳ್ಳುವೆ ಎಂದರು.
