ಬೆಂಗಳೂರು, ಫೆಬ್ರವರಿ 27: ಮಾಗಡಿ ಶಾಸಕ ಎಚ್ಸಿ ಬಾಲಕೃಷ್ಣ ಜನ್ಮದಿನಾಚರಣೆಯ ನೆಪದಲ್ಲಿ ಗುರುವಾರ ರಾತ್ರಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಡಿಕೆ ಶಿವಕುಮಾರ್ ಬೆಂಬಲಿಗರು ಡಿನ್ನರ್ ಮೀಟಿಂಗ್ ಆಯೋಜಿಸಿದ್ದರ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಇದು ಯಾವುದೇ ಶಕ್ತಿ ಪ್ರದರ್ಶನವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕೆಲವರು ವಿಶ್ರಾಂತಿಗೆ, ಕೆಲವರು ವಿದೇಶ ಪ್ರಯಾಣಕ್ಕೆ, ಇನ್ನು ಕೆಲವರು ದೆಹಲಿಗೆ ತೆರಳುತ್ತಾರೆ. ಇವೆಲ್ಲ ಅವರವರ ವೈಯಕ್ತಿಕ ವಿಚಾರಗಳು, ಪಕ್ಷಕ್ಕೂ ಇವುಗಳಿಗೂ ಸಂಬಂಧವಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.
ಸಿಪಿ ಯೋಗೇಶ್ವರ್ ಮತ್ತು ಬಾಲಕೃಷ್ಣ ಅವರು ಡಿಸಿಎಂ ಡಿಕೆಶಿ ಸಿಎಂ ಆಗಬೇಕು ಎಂದು ಹೇಳಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ‘ಹೊಸ ಶಾಸಕರಿಗೆ ಮಂತ್ರಿಯಾಗುವ ಆಸೆ ಇರುವುದು ಸಹಜ. ನಾನು, ಪರಮೇಶ್ವರ, ಹೆಚ್.ಕೆ. ಪಾಟೀಲ್, ಮಹದೇವಪ್ಪ, ಸಿದ್ದರಾಮಯ್ಯ ಮುಂತಾದ ಹಿರಿಯ ನಾಯಕರು ಚಿಕ್ಕ ವಯಸ್ಸಿನಲ್ಲೇ ಮಂತ್ರಿಗಳಾಗಿದ್ದವರು. ಹೀಗಾಗಿ, ಹೊಸಬರಲ್ಲಿ ಮಂತ್ರಿ ಸ್ಥಾನದ ಆಕಾಂಕ್ಷೆಗಳಿರುತ್ತವೆ. ನಮ್ಮನ್ನೂ ಮಂತ್ರಿ ಮಾಡಿ ಎಂದು ಕೆಲವರು ಕೇಳುತ್ತಾರೆ. ಇದು ಸಹಜ’ ಎಂದರು.
