ಶಾಸಕ ಸುರೇಶ್​​ ಕುಮಾರ್​​ ಕಚೇರಿಗೆ ಮುತ್ತಿಗೆ ಯತ್ನ: ಕಾಂಗ್ರೆಸಿಗರ ನಡೆ ಪ್ರಶ್ನಿಸಿ ಬಿಜೆಪಿ ಪೋಸ್ಟ್​​ – Kannada News | Rajajinagar Tense as Congress Workers Attempt to Gherao MLA Suresh Kumar’s Office

ಶಾಸಕ ಸುರೇಶ್​​ ಕುಮಾರ್​​ ಕಚೇರಿಗೆ ಮುತ್ತಿಗೆ ಯತ್ನImage Credit source: Tv9 Kannada

ಬೆಂಗಳೂರು, ಜುಲೈ 06: ರಾಜಾಜಿನಗರ ಶಾಸಕ ಎಸ್.ಸುರೇಶ್ ಕುಮಾರ್ ವಿರುದ್ಧ ಲೋಕಾಯುಕ್ತ ದೂರು ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಶಾಸಕರ ಕಚೇರಿಗೆ ಮುತ್ತಿಗೆ ಯತ್ನ ನಡೆದಿದೆ. ಬೆ‌ಂಗಳೂರಿನ ರಾಜಾಜಿನಗರದ RTO ಕಚೇರಿ ಕಟ್ಟಡದಲ್ಲಿರುವ ಶಾಸಕರ ಜನಸಂಪರ್ಕ ಕಚೇರಿ ಒಳ ನುಗ್ಗಲು ‘ಕೈ’ ಕಾರ್ಯಕರ್ತರು ಯತ್ನಿಸಿದ್ದು, ಕಾಂಗ್ರೆಸ್ ಮುತ್ತಿಗೆ ಯತ್ನದ ವೇಳೆ ಬಿಜೆಪಿ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಎರಡೂ ಪಕ್ಷಗಳ ಕಾರ್ಯಕರ್ತರಿಂದ ಪರಸ್ಪರ ಬಾವುಟ ಪ್ರದರ್ಶನ ನಡೆದಿದ್ದು, ಕಾರ್ಯಕರ್ತರ ಪ್ರತಿಭಟನೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಿರುಗಿತ್ತು. ಅಂತಿಮವಾಗಿ ಪೊಲೀಸರ ಮಧ್ಯಪ್ರವೇಶದ ಬಳಿಕ ಪರಿಸ್ಥಿತಿ ತಿಳಿಗೊಂಡಿದೆ.

ಮುತ್ತಿಗೆ ಯತ್ನ ವೇಳೆ ಕಚೇರಿಯಲ್ಲೇ ಇದ್ದ ಶಾಸಕ

ಇನ್ನು ಕಾಂಗ್ರೆಸ್​​ ಕಾರ್ಯಕರ್ತರಿಂದ ಮುತ್ತಿಗೆ ಯತ್ನದ ವೇಳೆ ಶಾಸಕ ಸುರೇಶ್​​ ಕುಮಾರ್​ ಅವರು ಕಚೇರಿಯಲ್ಲಿಯೇ ಸಭೆ ನಡೆಸುತ್ತಿದ್ದರು. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರಿದ್ದ ಸ್ಥಳಕ್ಕೆ ನುಗ್ಗಲು ಬಿಜೆಪಿಗರು ಪ್ರಯತ್ನಿಸಿದ್ದು, ಪರಿಸ್ಥಿತಿ ಕೈ ಮೀರುವ ಹಂತ ತಲುಪಿತ್ತು ಎನ್ನಲಾಗಿದೆ.

ಇದನ್ನೂ ಓದಿ: ನನ್ನ ವಿರುದ್ಧದ ಲೋಕಾಯುಕ್ತ ದೂರು ಶುದ್ಧ ಹಾಸ್ಯಾಸ್ಪದ, ರಾಜಕೀಯ ಪಿತೂರಿ; ಬಿಜೆಪಿ ಶಾಸಕ ಸುರೇಶ್ ಕುಮಾರ್

ನಗರ ಪೊಲೀಸ್ ಆಯುಕ್ತರಿಗೆ ಸುರೇಶ್ ಕುಮಾರ್ ಪತ್ರ

ತಮ್ಮ ಕಚೇರಿ ಬಳಿ ‘ಕೈ’ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ. ಈ ಕುರಿತು ವಿಚಾರಣೆ ನಡೆಸಿ ಘಟನೆ ಮರುಕಳಿಸದಂತೆ ಕ್ರಮಕ್ಕೆ ಮನವಿ ಮಾಡಿರುವ ಅವರು, ಬೆಂಗಳೂರಿನಲ್ಲಿ ಫ್ರೀಡಂಪಾರ್ಕ್‌ ಬಿಟ್ಟು ಬೇರೆಡೆ ಪ್ರತಿಭಟನೆಗೆ ಅವಕಾಶವಿಲ್ಲ. ಹೀಗಿರುವಾಗ ತಮ್ಮ ಕಚೇರಿ ಬಳಿ ಪ್ರತಿಭಟನೆಗೆ ಅವಕಾಶ ಕೊಟ್ಟಿದ್ದು ಯಾಕೆ? ಇದನ್ನು ಪ್ರಶ್ನಿಸಿದ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ. ಕ್ಷೇತ್ರದಲ್ಲಿ ನಡೆಸುತ್ತಿದ್ದ ಜನರೊಂದಿಗೆ ಜನಸೇವಕ ಕಾರ್ಯಕ್ರಮಕ್ಕೆ ಅಡ್ಡಿ ಮಾಡಿ ಸಾರ್ವಜನಿಕರು ಬರದಂತೆ ತಡೆದಿದ್ದಾರೆ ಎಂದವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಎಕ್ಸ್​​ ಪೋಸ್ಟ್​​ ಮಾಡಿ ಬಿಜೆಪಿ ಕಿಡಿ

ಬಿಜೆಪಿ ಮಾಡಿರುವ ಎಕ್ಸ್​​ ಪೋಸ್ಟ್​​

ಶಾಸಕ ಸುರೇಶ್​​ ಕುಮಾರ್​​ ಅವರ ಕಚೇರಿಗೆ ಮುತ್ತಿಗೆ ಯತ್ನ ನಡೆಸಿರುವ ಕಾಂಗ್ರೆಸಿಗರ ನಡೆಯನ್ನು ಎಕ್ಸ್​​ ಪೋಸ್ಟ್​​ ಮಾಡಿ ರಾಜ್ಯ ಬಿಜೆಪಿ ಖಂಡಿಸಿದೆ. ಸುರೇಶ್‌ ಕುಮಾರ್‌ ಅವರ ಕಚೇರಿಗೆ ನುಗ್ಗಿ, ಅವರ ಮೇಲೆ ಕಾಂಗ್ರೆಸ್‌ ಗೂಂಡಾಗಳು ಹಲ್ಲೆಗೆ ಯತ್ನಿಸಿರುವುದು ಖಂಡನೀಯ. ಸಿಎಂ ಡಿ.ಕೆ.ಶಿವಕುಮಾರ್ ಅವರೇ, ನಿಮ್ಮ ಸರ್ಕಾರದಲ್ಲಿ ಶಾಸಕರಿಗೇ ರಕ್ಷಣೆಯಿಲ್ಲವೇ? ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆಯವರೇ ಫೇಸ್‌ಬುಕ್‌ ಕಾಮೆಂಟ್‌ಗಳಿಗೆಲ್ಲಾ ತಲೆಕೆಡಿಸಿಕೊಂಡು, ಕಾಮೆಂಟ್‌ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲು ಆದೇಶ ನೀಡುವ ನಿಮಗೆ ನಿಮ್ಮ ಕಾರ್ಯಕರ್ತರ ಈ ಗೂಂಡಾಗಿರಿ ಕಣ್ಣಿಗೆ ಕಾಣುವುದಿಲ್ಲವೇ? ಎಂದು ಪ್ರಶ್ನಿಸಿದೆ.

ಸುರೇಶ್​​ ಕುಮಾರ್​​ ಮೇಲಿನ ಆರೋಪವೇನು?

ಅಧಿಕಾರ ದುರುಪಯೋಗ ಪಡಿಸಿಕೊಂಡು, ನಿಯಮ ಗಾಳಿಗೆ ತೂರಿ ಬೇನಾಮಿ ಗುತ್ತಿಗೆದಾರರಿಗೆ ಲಾಭ ಮಾಡಿಕೊಟ್ಟು ಸರ್ಕಾರಿ ಖಜಾನೆಗೆ ನಷ್ಟ ಉಂಟುಮಾಡಿದ್ದಾರೆ ಎಂದು ಆರೋಪಿಸಿ ಶಾಸಕ ಸುರೇಶ್​​ ಕುಮಾರ್​​ ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತ ಹಾಗೂ ವಕೀಲ ಸೂರ್ಯ ಮುಕುಂದರಾಜ್ ಎಂಬುವವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಆದರೆ ಈ ಆರೋಪಗಳನ್ನು ಹಾಸ್ಯಾಸ್ಪದ ಎಂದಿರುವ ಸುರೇಶ್​​ ಕುಮಾರ್​​, ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿರುವ ಭ್ರಷ್ಟಾಚಾರದ ದೂರು ಸಂಪೂರ್ಣ ಸುಳ್ಳು ಮತ್ತು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:20 pm, Mon, 6 July 26

Source link

Leave a Reply

Your email address will not be published. Required fields are marked *