ಬೆಂಗಳೂರು, ಜುಲೈ 09: ಶಿಕ್ಷಕಿ ಬೈದರು ಎಂಬ ಕಾರಣಕ್ಕೆ ಮನನೊಂದ 8ನೇ ತರಗತಿ ವಿದ್ಯಾರ್ಥಿನಿಯೋರ್ವಳು ದುಡುಕಿನ ನಿರ್ಧಾರ ಕೈಗೊಂಡು ಜೀವನವನ್ನೇ ಅಂತ್ಯಗೊಳಿಸಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮರಸೂರು ಮಡಿವಾಳದಲ್ಲಿ ನಡೆದಿದೆ. ಮರಸೂರು ಶಾಲೆಯ ವಿಧ್ಯಾರ್ಥಿನಿ ಮಧುಶ್ರೀ ಮೃತ ದುರ್ದೈವಿಯಾಗಿದ್ದು, ಮನೆಯಲ್ಲಿಯೇ ನೇಣು ಹಾಕಿಕೊಂಡು ಪ್ರಾಣ ಬಿಟ್ಟಿದ್ದಾಳೆ. ಬೆಳಿಗ್ಗೆ ಪೋಷಕರು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವಿದ್ಯಾರ್ಥಿನಿ ಮಧುಶ್ರೀ ಬರೆದ ಡೆತ್ನೋಟ್ ಲಭ್ಯ
ಇನ್ನು ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿನಿ ಬರೆದ ಡೆತ್ನೋಟ್ ಕೂಡ ಲಭ್ಯವಾಗಿದೆ. ಇದರಲ್ಲಿ ಹಲವು ವಿಚಾರಗಳನ್ನು ಆಕೆ ಉಲ್ಲೇಖಿಸಿರುವುದು ಕಂಡುಬಂದಿದೆ. ಶಾಲೆಯಲ್ಲಿ ನಡೆದ ಘಟನೆ ತನಗೆ ಬಹಳ ನೋವು ತಂದಿದೆ. ತನ್ನ ಮೇಲೆ ಇಲ್ಲಸಲ್ಲದ ಅಪರಾಧವನ್ನ ಹೊರಿಸಿದ್ದಾರೆ. ಈ ಅವಮಾನವನ್ನು ಸಹಿಸಿಕೊಂಡು ಬದುಕಲು ತನ್ನಿಂದ ಆಗುತ್ತಿಲ್ಲ. ಮನಸ್ಸಿಗೆ ತೀವ್ರ ನೋವಾಗಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಎಂದಾಕೆ ತಿಳಿಸಿದ್ದಾಳೆ.
ಇದನ್ನೂ ಓದಿ: ಚನ್ನಪಟ್ಟಣ ತಹಶೀಲ್ದಾರ್ ಮೇಲೆ ಹಲ್ಲೆ, ವಿವಸ್ತ್ರಗೊಳಿಸಿ 10 ಲಕ್ಷ ರೂ.ಗೆ ಬ್ಲಾಕ್‌ಮೇಲ್; ರೌಡಿಶೀಟರ್ ಬಂಧನ
ಈ ವಿಚಾರದಲ್ಲಿ ಅಮ್ಮ, ಅಕ್ಕ, ತಂಗಿ ಮತ್ತು ತಮ್ಮ ಯಾರದ್ದು ಕೂಡ ತಪ್ಪಿಲ್ಲ. ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ಅಮ್ಮನನ್ನು ಯಾರು ಕೂಡ ಬೈಯ್ಯಬೇಡಿ. ತನಗೆ ಈ ಭೂಮಿ ಮೇಲೆ ಬದುಕಲು ಆರ್ಹತೆ ಇಲ್ಲ. ಅಮ್ಮ ಮತ್ತು ಎಲ್ಲರೂ ನನ್ನನ್ನ ಕ್ಷಮಿಸಿ ಎಂದು ವಿಧ್ಯಾರ್ಥಿನಿ ಮಧುಶ್ರೀ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾಳೆ ಎನ್ನಲಾಗಿದೆ. ಈ ಸಂಬಂಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 4:19 pm, Thu, 9 July 26
