‘ಶಿಕ್ಷಣ ಅಂದ್ರೆ ಶಾಲೆಗೆ ಹೋಗೋದಲ್ಲ, ಸಿನಿಮಾ ಜ್ಞಾನ’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ, ಕ್ಷಮೆಯಾಚನೆ – Kannada News | Neninasam Satish Clarifies ‘Cinema Education’ Remark, Apologizes to Producers for Ayogya 2 Row

‘ಅಯೋಗ್ಯ 2’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರ ಕುರಿತು ತಾವು ನೀಡಿದ್ದ ಹೇಳಿಕೆ ಚಿತ್ರರಂಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ, ನಟ ನೀನಾಸಂ ಸತೀಶ್ ಅವರು ವಿಡಿಯೋ ಸಂದೇಶವೊಂದರ ಮೂಲಕ ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಬಹಿರಂಗವಾಗಿ ಕ್ಷಮೆ ಯಾಚನೆ ಮಾಡೋದಾಗಿಯೂ ಹೇಳಿದ್ದಾರೆ.

ಇತ್ತೀಚೆಗೆ ‘ಅಯೋಗ್ಯ 2’ ಕಾರ್ಯಕ್ರಮದ ವೇದಿಕೆ ಮೇಲೆ ಮಾತನಾಡಿದ್ದ ಅವರು, ‘ ಸಿನಿಮಾ ಸೋಲುತ್ತದೆ ಎಂಬುದು ಗೊತ್ತಿದ್ದ ಮೇಲೂ ಯಾಕೆ ಸಿನಿಮಾ ಮಾಡಬೇಕು? ನಿರ್ಮಾಪಕರಿಗೆ ಶಿಕ್ಷಣದ ಅವಶ್ಯಕತೆ ಇದೆ ಎಂದು ಹೇಳಿದ್ದರು. ಇದು ನಿರ್ಮಾಪಕರನ್ನು ಕೆರಳಿಸಿದೆ. ಈ ಬೆನ್ನಲ್ಲೇ ಸತೀಶ್ ವಿಡಿಯೋ ಮಾಡಿದ್ದಾರೆ.

‘ನಾನು ಪತ್ರಿಕಾಗೋಷ್ಠಿಯಲ್ಲಿ ‘ಎಜುಕೇಷನ್’ ಎಂಬ ಪದವನ್ನು ಬಳಸಿದ್ದೆ. ಆದರೆ ಅದರ ಅರ್ಥ ಶಾಲೆಗೆ ಹೋಗಿ ಓದುವುದಲ್ಲ, ಬದಲಿಗೆ ಚಿತ್ರರಂಗಕ್ಕೆ ಹೊಸದಾಗಿ ಬರುವ ನಿರ್ಮಾಪಕರಿಗೆ ಸಿನಿಮಾ ಪ್ರಕ್ರಿಯೆಯ ಬಗ್ಗೆ ಇರುವ ಜ್ಞಾನದ ಕುರಿತು ನಾನು ಹೇಳಿದ್ದೆ. ಯಾವ ಇಲಾಖೆಗೆ ಎಷ್ಟು ಹಣ ಹೋಗುತ್ತಿದೆ, ಯಾವ ವಿಭಾಗದಲ್ಲಿ ನಾವು ತೊಡಗಿಸಿಕೊಳ್ಳಬೇಕು ಎಂಬ ಕನಿಷ್ಠ ತಿಳಿವಳಿಕೆ ಇದ್ದರೆ ಒಳ್ಳೆಯದು ಎಂಬುದು ನನ್ನ ಉದ್ದೇಶವಾಗಿತ್ತು. ನಾನು ಕೂಡ ನಿರ್ಮಾಪಕನಾಗಿ ಸೋತವನು. ಆ ಸೋಲಿನಿಂದ ಕಲಿಯಲು ನನಗೇ ಸಾಕಷ್ಟು ಸಮಯ ಬೇಕಾಯಿತು. ಹೊಸ ನಿರ್ಮಾಪಕರುಗಳು ಚಿತ್ರರಂಗಕ್ಕೆ ಬಂದು ನಷ್ಟ ಅನುಭವಿಸಬಾರದು ಎಂಬ ಕಾಳಜಿಯಿಂದ ಆ ಮಾತು ಹೇಳಿದ್ದೆ’ ಎಂದು ಸತೀಶ್ ವಿವರಿಸಿದ್ದಾರೆ.

ನಿರ್ಮಾಪಕರು ಇದ್ದರೆನೇ ಚಿತ್ರರಂಗ:

‘ಕನ್ನಡ ಚಿತ್ರರಂಗದಲ್ಲಿ ಲಕ್ಷಾಂತರ ಜನರ ಬದುಕು ಅಡಗಿದೆ. ಚಿತ್ರರಂಗ ಉಳಿಯಬೇಕು ಮತ್ತು ಬೆಳೆಯಬೇಕು ಎನ್ನುವುದಷ್ಟೇ ನನ್ನ ಆಶಯ. ನಿರ್ಮಾಪಕರು ಇದ್ದರೆ ಮಾತ್ರ ಚಿತ್ರರಂಗ ಇರಲು ಸಾಧ್ಯ. ಚಿತ್ರರಂಗವನ್ನು ಕಟ್ಟುವಲ್ಲಿ ಪ್ರತಿಯೊಬ್ಬ ನಿರ್ಮಾಪಕರ ಕೊಡುಗೆಯೂ ದೊಡ್ಡದಿದೆ. ಯಾರನ್ನೂ ವೈಯಕ್ತಿಕವಾಗಿ ನಿಂದಿಸುವ ಉದ್ದೇಶ ನನಗಿರಲಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಭಾರೀ ಮೊತ್ತಕ್ಕೆ ‘ಅಯೋಗ್ಯ 2’ ಆಡಿಯೋ ಹಕ್ಕು ಮಾರಾಟ; ಲೆಕ್ಕ ಕೊಟ್ಟ ಸತೀಶ್

ನಿರ್ಮಾಪಕರ ಸಂಘಕ್ಕೆ ಕ್ಷಮೆ:

‘ನನ್ನ ಹೇಳಿಕೆಯಿಂದ ಚಿತ್ರರಂಗದ ಹಿರಿಯ ನಿರ್ಮಾಪಕರಿಗೆ, ಅದರಲ್ಲೂ ವಿಶೇಷವಾಗಿ ನಿರ್ಮಾಪಕರ ಸಂಘದ ಪದಾಧಿಕಾರಿಗಳಿಗೆ ನೋವಾಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. ಯಾರನ್ನೂ ನೋಯಿಸಿ ಖುಷಿಪಡುವ ವ್ಯಕ್ತಿತ್ವ ನನ್ನದಲ್ಲ. ನಾನು ಕೂಡ ಇನ್ನೂ ಕಲಿಯುತ್ತಿರುವ ಹಂತದಲ್ಲೇ ಇದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳ ಬಗ್ಗೆ ನೆಗೆಟಿವ್ ಆಗಿ ಮಾತನಾಡುವುದರಿಂದ ಚಿತ್ರತಂಡಗಳು ಡಿಮೋಟಿವೇಟ್ ಆಗುತ್ತವೆ ಎಂಬ ಕಾರಣಕ್ಕೆ ನಾನು ಧ್ವನಿ ಎತ್ತಿದ್ದೆ. ನಮ್ಮ ‘ಅಯೋಗ್ಯ-2’ ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗುತ್ತಿದ್ದು, ಇಡೀ ಚಿತ್ರರಂಗ ಹಾಗೂ ನಿರ್ಮಾಪಕರ ಬೆಂಬಲ ನಮಗೆ ಬೇಕು’ ಎಂದು ಸತೀಶ್ ನೀನಾಸಂ ಮನವಿ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *