ಚಿಕ್ಕಬಳ್ಳಾಪುರ, (ಜನವರಿ 27): ಶಿಡ್ಲಘಟ್ಟದ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಅವಾಚ್ಯ ಶಬ್ಧಗಳ ನಿಂದನೆ ಹಾಗೂ ಬೆದರಿಕೆ ಪ್ರಕರಣಕ್ಕೆ (Sidlaghatta official threat case) ಸಂಬಂಧಿಸಿದಂತೆ ಆರೋಪಿ ರಾಜೀವ್ ಗೌಡನಿಗೆ (Rajeev Gowda) ಕೋರ್ಟ್ ಶಾಕ್ ಕೊಟ್ಟಿದೆ. ರಾಜೀವ್ ಗೌಡಗೆ ಮಧ್ಯಂತರ ಜಾಮೀನು ನೀಡಲು ಶಿಡ್ಲಘಟ್ಟದ ಜೆಎಂಎಫ್ಸಿ ಕೋರ್ಟ್ ನಿರಾಕರಿಸಿದೆ. ಬದಲಿಗೆ 14 ದಿನ ಅಂದರೆ ಫೆಬ್ರವರಿ 9ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ. ಇನ್ನೊಂದೆಡೆ ಆರೋಪಿ ರಾಜೀವ್ ಗೌಡನಿಗೆ ಆಶ್ರಯ ನೀಡಿ ಪೊಲೀಸರ ಬಂಧನಕ್ಕೊಳಗಾಗಿದ್ದ ಮಂಗಳೂರಿನ ಉದ್ಯಮಿಗೆ ಜಾಮೀನು ಸಿಕ್ಕಿದೆ.
ಕಳೆದ 14 ದಿನಗಳಿಂದ ತಲೆಮರೆಸಿಕೊಂಡಿದ್ದ ರಾಜೀವ್ ಗೌಡ ನಿನ್ನಿ (ಜನವರಿ 26) ಕೇರಳದ ಗಡಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇನ್ನು ಇದೇ ವೇಳೆ ಜೊತೆಗಿದ್ದ ಆಶ್ರಯ ನೀಡಿದ್ದ ಮಂಗಳೂರಿನ ಉದ್ಯಮಿ ಮೈಕಲ್ನನ್ನು ಸಹ ಫೊಲೀಸರು ಬಂಧಿಸಿ ಶಿಡ್ಗಘಟ್ಟಕ್ಕೆ ಕರೆತಂದಿದ್ದರು. ಬಳಿಕ ಆರೋಪಿಗಳಿಗೆ ವೈದ್ಯಕೀಯ ತಪಾಸಣೆ ಮಾಡಿಸಿ ಕೋರ್ಟ್ಗೆ ಹಾಜರುಡಿಸಲಾಯ್ತು. ಈ ವೇಳೆ ರಾಜೀವ್ ಗೌಡ ಪರ ವಕೀಲರು ಸಹ ಮಧ್ಯಂತರ ಜಾಮೀನಿಗೆ ಮನವಿ ಮಾಡಿದರು. ಆದ್ರೆ, ಕೋರ್ಟ್ ಜಾಮೀನು ಅರ್ಜಿಯನ್ನು ವಜಾಗೊಳಿಸಿ ರಾಜೀವ್ ಗೌಡನಿಗೆ ಫೆಬ್ರವರಿ 9ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ. ಇನ್ನು ರಾಜೀವ್ ಗೌಡನ ಆಶ್ರಯದಾಯ ಮೈಕಲ್ಗೆ ಕೋರ್ಟ್ ಜಾಮೀನು ನೀಡಿದೆ.
