
ಮಂಗಳೂರು, (ಮಾರ್ಚ್ 13): KSRTC ರಾಜಹಂಸ ಬಸ್ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು ತಾಲೂಕಿನ ಶಿರಾಡಿಘಾಟ್ನ (shiradi ghat) ಗುಂಡ್ಯ ಸಮೀಪ ನಡೆದಿದೆ. ಉಜಿರೆ ನಿವಾಸಿಗಳಾದ ಶ್ರೀಧರ ಮರಕಡ, ಜನಾರ್ದನ ಕೆರಿಮಾರ್ ಹಾಗೂ ಕೊಕ್ಕಡ ನಿವಾಸಿ ಚಂದ್ರಶೇಖರಗೌಡ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಇನ್ನು ಈ ಘಟನೆಯಲ್ಲಿ ಕಾರಿನಲ್ಲಿದ್ದ ಮತ್ತೋರ್ವ ಸುರೇಶ್ ಎಂಬುವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.
ನಾಲ್ವರು ಒಂದೇ ಕಾರಿನಲ್ಲಿ ಸಕಲೇಶಪುರದಲ್ಲಿ ಮದುವೆ ಮುಗಿಸಿಕೊಂಡು ವಾಪಸ್ ಉಜಿರೆ ಕಡೆ ಹೋಗುತ್ತಿದ್ದರು. ಇನ್ನು ಕೆಎಸ್ಆರ್ಟಿಸಿ ರಾಜಹಂಸ ಬಸ್ ಮಂಗಳೂರು ಕಡೆಯಿಂದ ಬಂದಿದ್ದು, ಶಿರಾಡಿಘಾಟ್ನ ಗುಂಡ್ಯ ಸಮೀಪ ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರ ಪೈಕಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಉಪ್ಪಿನಂಗಡಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.