ನೆಲಮಂಗಲ, ಆಗಸ್ಟ್ 10: ನಾಲ್ಕು ದಿನಗಳ ಹಿಂದೆ ಟ್ರೆಕ್ಕಿಂಗ್‌ಗೆ (Trekking) ಬಂದು ನಾಪತ್ತೆಯಾಗಿರುವ ಟೆಕ್ಕಿ ಅದ್ವೈತ್ ಉಪಾಧ್ಯಾಯ (Advait Upadhyaya) ಹುಡುಕಾಟ ಶೋಧ ಕಾರ್ಯಚರಣೆ ತೀವ್ರಗೊಂಡಿದೆ. ದಿನಕ್ಕೊಂದು ಹೊಸ ಸುಳಿವು ಸಿಗುತ್ತಿದ್ದು, ಇದೀಗ ಮತ್ತೊಂದು ಸುಳಿವು ಪತ್ತೆ ಆಗಿದೆ. ಇಂದಿನ ಕಾರ್ಯಚರಣೆ ವೇಳೆ ಬೆಟ್ಟದ ತುತ್ತ ತುದಿಯಲ್ಲಿ ಚಾರಣಿಗರು ಕ್ಲಿಕ್ಕಿಸಿದ ಫೋಟೋದಲ್ಲಿ ಅದ್ವೈತ್ ಕೂಡ ಇರುವುದು ಪತ್ತೆ ಆಗಿದೆ.
ನೆಲಮಂಗಲ ಡಿವೈಸ್ಪಿ ಉಮಾರಾಣಿ ನೇತೃತ್ವದಲ್ಲಿ ಶೋಧ
ಉತ್ತರ ಪ್ರದೇಶ ಇಂದೂರ್ ಮೂಲದ ಟೆಕ್ಕಿ ಅದ್ವೈತ್, ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ಹೋಗಿ ನಾಪತ್ತೆಯಾಗಿ ನಾಲ್ಕು ದಿನಗಳು ಕಳೆದಿವೆ. ಇಂದು ನೆಲಮಂಗಲ ಡಿವೈಸ್ಪಿ ಉಮಾರಾಣಿ ನೇತೃತ್ವದಲ್ಲಿ ಸಿಪಿಐ ಭರತ್ ಗೌಡ ಮತ್ತು ತಂಡ ಶೋಧ ಕಾರ್ಯದಲ್ಲಿ ನಿರತರಾಗಿದ್ದರು.
ಇದನ್ನೂ ಓದಿ: ಶಿವಗಂಗೆ ಬೆಟ್ಟದಲ್ಲಿ ಕಾಣೆಯಾದ ಟೆಕ್ಕಿ; ಅದ್ವೈತ್ ಬೆಟ್ಟ ಏರುತ್ತಿರುವ ಸಿಸಿಟಿವಿ ದೃಶ್ಯಾವಳಿ ಪತ್ತೆ!
ಅದ್ವೈತ್ ಉಪಾಧ್ಯಾಯನ ಪತ್ತೆಗೆ ಇಂದು ಕೂಡ ಡ್ರೋನ್ ಕಾರ್ಯಚರಣೆ, ನುರಿತರ ಕಾರ್ಯಚರಣೆ, ಎನ್ಡಿ ಆರ್ಎಫ್ ಜೊತೆಗೆ ನೆಲಮಂಗಲ ವಲಯ ಅರಣ್ಯ ಸಿಬ್ಬಂದಿ ಕಾರ್ಯಚರಣೆ ನಡೆಸಿದರೂ ಆತನ ಸುಳಿವು ಮಾತ್ರ ಇನ್ನೂ ನಿಗೂಢವಾಗಿದೆ.
ಪ್ರಾಣ ಪಣಕ್ಕಿಟ್ಟು ಕಾರ್ಯಚರಣೆ: ಮಳೆ ಅಡ್ಡಿ
ಇಂದಿನ ಕಾರ್ಯಚರಣೆ ವೇಳೆ ಕಡಿದಾದ ಬೆಟ್ಟದ ಮೂಲೆ ಮೂಲೆಯಲ್ಲಿ ತನಿಖಾ ತಂಡ ತಮ್ಮ ಪ್ರಾಣವನ್ನ ಪಣಕ್ಕಿಟ್ಟು ಕಾರ್ಯಚರಣೆ ಮಾಡಿದ್ದು, ಅದ್ವೈತ್ ಆತ್ಮಹತ್ಯೆಗೆ ಶರಣಾಗಿದ್ದಾನಾ ಅಥವಾ ನಾಪತ್ತೆಯಾಗಿದ್ದಾನಾ ಎಂಬುವುದು ಮೇಲ್ನೋಟಕ್ಕೆ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಶಿವಗಂಗೆ ಬೆಟ್ಟದಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಆತ್ಮಹತ್ಯೆಯ ಯೋಚನೆ ಮಾಡಿದ್ದರಾ ಅದ್ವೈತ್ ಉಪಾಧ್ಯಾಯ?
ಒಟ್ಟಾರೆ ಶಿವಗಂಗೆ ಬೆಟ್ಟಕ್ಕೆ ಬಂದ ಟೆಕ್ಕಿ ಪತ್ತೆ ಕಾರ್ಯಚರಣೆ ಮೂರನೇ ದಿನದ ಕೂಡ ಯಶಸ್ವಿಯಾಗದೆ ಧಾರಾಕಾರ ಮಳೆಯಿಂದಾಗಿ ಬ್ರೇಕ್ ಹಾಕಬೇಕಾಯಿತು. ಅದ್ವೈತ್ ನಿಗೂಢ ನಾಪತ್ತೆ ಸದ್ಯ ಕಾರ್ಯಚರಣೆ ತಂಡಕ್ಕೆ ದೊಡ್ಡ ಸವಾಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
