Headlines

ಶಿವಮೊಗ್ಗ ಉಳವಿ ಗ್ರಾಮದಲ್ಲಿ ಅನಿಷ್ಟ ಪದ್ಧತಿ: ರಸ್ತೆ ಕಾಮಗಾರಿ ಕಳಪೆ ಎಂದು ದೂರು ನೀಡಿದ ಗ್ರಾಮಸ್ಥರಿಗೆ 5 ವರ್ಷದಿಂದ ಬಹಿಷ್ಕಾರ – Kannada News | Social Boycott in Ulavi Village of Shivamogga: Family Ostracised for 5 Years After Complaining Against Poor Road Work

ಸಾಮಾಜಿಕ ಬಹಿಷ್ಕಾರ ಪ್ರಕರಣImage Credit source: tv9

ಶಿವಮೊಗ್ಗ, ಫೆಬ್ರವರಿ 13: ಇದು ನಾಗರೀಕ ಸಮಾಜವೇ ತಲೆ ತಗ್ಗಿಸುವ ವಿಚಾರ. ಮನೆಯನ್ನೆಲ್ಲಾ ಕಿತ್ತು ಬಿಸಾಡಿದ್ದಾರೆ. ಊರಲ್ಲಿ ಯಾವ ಕಾರ್ಯಕ್ರಮಕ್ಕೂ ಇವರು ಹೋಗುವಂತಿಲ್ಲ. ಯಾರ ಬಳಿಯೂ ಕೆಲಸಕ್ಕೆ ಹೋಗಲು ಆಗ್ತಿಲ್ಲ. ಇದಕ್ಕೆ ಕಾರಣವೇ ಸಾಮಾಜಿಕ ಬಹಿಷ್ಕಾರ. ಹಳ್ಳಿ ರಾಜಕೀಯ ದಿಲ್ಲಿಯನ್ನೂ ಮೀರಿಸುತ್ತೆ ಎನ್ನುತ್ತಾರೆ. ಇದಕ್ಕೆ ಜ್ವಲಂತ ಉದಾಹರಣೆಯಾಗಿದೆ ಶಿವಮೊಗ್ಗ (Shivamogga) ಜಿಲ್ಲೆ. ಇಲ್ಲಿ ನಡೆಯುತ್ತಿರುವ ರಾಜಕೀಯ ಮೇಲಾಟದಿಂದ ಕುಟುಂಬಗಳು ಬೀದಿಗೆ ಬಿದ್ದಿವೆ. ಸೊರಬ ತಾಲೂಕಿನ ಅರಣ್ಯಭಾಗದಲ್ಲಿರುವ ಉಳವಿ ಗ್ರಾಮದಲ್ಲಿ ಮೂರು ಬಾರಿ ರಸ್ತೆ ಕಾಮಗಾರಿ ಆಗಿತ್ತು. ಅದು ಕಳಪೆಯಾಗಿದೆ ಎಂದು ಚಂದ್ರಪ್ಪ ಎಂಬವರು ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಇಡೀ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿ, 25 ಸಾವಿರ ರೂ. ದಂಡ ವಿಧಿಸಲಾಗಿದೆ. ಈ ಬಗ್ಗೆ ಸೊರಬ ತಹಶೀಲ್ದಾರ್ ಸೇರಿದಂತೆ ಪೊಲೀಸರು, ಸಮಾಜ ಕಲ್ಯಾಣ ಅಧಿಕಾರಿಗಳಿಗೆ ದೂರು ನೀಡಿದರೂ ಏನೂ ಪ್ರಯೋಜನವಾಗಿಲ್ಲ.

ಇದು ಒಬ್ಬಿಬ್ಬರ ಕಥೆಯಲ್ಲ. ಗ್ರಾಮದಲ್ಲಿ ಬಹಿಷ್ಕಾರ ಮಾಡಿರುವುದು ಗ್ರಾಮ ಸಮಿತಿ. ಗ್ರಾಮ ಸಮಿತಿಯ ತೀರ್ಮಾನ ಒಪ್ಪದಿದ್ರೆ, ಬಹಿಷ್ಕಾರ ಹಾಕುತ್ತಾರೆ. ಬಹಿಷ್ಕಾರ ಹಾಕಿದ ಕುಟುಂಬದ ಜೊತೆ ಮಾತನಾಡಿದವರಿಗೂ 5 ಸಾವಿರ ದಂಡ ವಿಧಿಸುತ್ತಾರೆ. ಈ ಹಿನ್ನಲೆಯಲ್ಲಿ ಬಹಿಷ್ಕಾರ ಹಾಕಿದ ಕುಟುಂಬದ ಜೊತೆ ಗ್ರಾಮಸ್ಥರು ಭಯದಿಂದ ದೂರ ಇರುತ್ತಾರೆ ಎನ್ನಲಾಗಿದೆ.

ಮಾಜಿ ಸಿಎಂ ದಿ. ಎಸ್ ಬಂಗಾರಪ್ಪ ಮತ್ತು ಹಾಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪರ ತವರೂರಿನಲ್ಲೇ ಈ ರೀತಿ ಅನ್ಯಾಯ ನಡೆದಿದೆ. ಸೊರಬ ತಾಲೂಕಿನ ಗುಡವಿ, ದೂಗುರು, ಮಳಲಿ ಗದ್ದೆ, ಕುದುರೆ ಗಣಿ, ಚಿಮ್ಮನೂರು, ಉಳವಿ ಗ್ರಾಮದಲ್ಲಿ ಈ ಅನಿಷ್ಟ ಪದ್ಧತಿಗೆ ಜನ ಹೈರಾಣಾಗಿದ್ದಾರೆ.

ಗ್ರಾಮ ಸಭೆಗಳಲ್ಲಿ ಸಮಸ್ಯೆಗಳ ಬಗ್ಗೆ ಪ್ರಶ್ನಿಸುವಂತಿಲ್ಲ!

ಗ್ರಾಮ ಸಭೆಗಳಲ್ಲಿ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದ್ರೆ, ಅಂತಹ ಕುಟುಂಬಗಳನ್ನು ಗುರಿಯಾಗಿಸಲಾಗುತ್ತದೆ. ಜೀವನ ನಿರ್ವಹಣೆಗೆ ಅಂಗಡಿಗಳಲ್ಲಿ ಧವಸ-ಧಾನ್ಯ ನೀಡುತ್ತಿಲ್ಲ. ಶಾಲಾ-ಕಾಲೇಜಿಗೆ ತೆರಳಲು ಆಟೋಗಳಲ್ಲಿ ಪ್ರವೇಶ ನೀಡುತ್ತಿಲ್ಲ. ಕೂಡಲೇ ಜಿಲ್ಲಾಡಳಿತ ಗ್ರಾಮ ಸಮಿತಿ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಬಹಿಷ್ಕಾರಕ್ಕೆ ಮುಕ್ತಿ ಹಾಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *