ಶಿವಮೊಗ್ಗ, ಜುಲೈ 06: ರಾಜ್ಯದಲ್ಲಿ ಎಸ್‌ಐಆರ್ (SIR) ವೇಳೆ ಹಲವು ಎಡವಟ್ಟುಗಳು ನಡೆದಿವೆ. ಮನೆ ಮನೆಗೆ ತೆರಳುವ ಬದಲು ಕಲ್ಯಾಣ ಮಂಟಪ, ಮಸೀದಿ ದೇಗುಲ ಹಾಗೂ ಅಂಗನವಾಡಿಗಳಲ್ಲಿ ಬಿಎಲ್ಓಗಳು ಎಸ್‌ಐಆರ್ ಫಾರ್ಮ್ ಹಂಚಿಕೆ ಮಾಡುತ್ತಿದ್ದಾರೆ. ಈ ಮಧ್ಯೆ ಎಸ್‌ಐಆರ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕೆಲ ಸಿಬ್ಬಂದಿ ಹೃದಯಾಘಾತದಿಂದ (Heart attack) ಸಾವನ್ನಪ್ಪಿದ್ದಾರೆ. ಇದೀಗ ಇಂತಹದೊಂದು ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಎಸ್‌ಐಆರ್ ವೇಳೆ ಹೃದಯಾಘಾತವಾಗಿ ಬಿಎಲ್‌ಒ ಸಾವನ್ನಪ್ಪಿದ್ದಾರೆ.
ನಡೆದಿದ್ದೇನು?
ಕಲ್ಲಾಪುರ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯೂ ಆಗಿದ್ದ ಬಿಎಲ್‌ಒ (BLO) ಮಂಜುಳಾ (52) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮಂಜುಳಾ ಅವರು ಇಂದು ಕಲ್ಲಾಪುರ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಎಸ್‌ಐಆರ್ ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಅವರಿಗೆ ದಿಢೀರನೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಭದ್ರಾವತಿ ತಾಲೂಕು ಆಸ್ಪತ್ರೆಗೆ ರವಾನಿಸುವ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: SIR ಕರ್ತವ್ಯಕ್ಕೆ ತೆರಳುವಾಗ ಭೀಕರ ಅಪಘಾತ: ಚಿಕಿತ್ಸೆ ಫಲಿಸದೆ ಭುವನಾ ಸಾವು; ಸಿಬ್ಬಂದಿಯಿಂದ ಪ್ರತಿಭಟನೆ
ಸದ್ಯ ಮೃತದೇಹವನ್ನು ಭದ್ರಾವತಿ ತಾಲೂಕಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಒತ್ತಡದಿಂದಲೇ ಸಾವುವಾಗಿದೆ: ಮಂಜುಳಾ ಪತಿ ಸಂಗಯ್ಯ ಗಂಭೀರ ಆರೋಪ
ಇನ್ನು ಪತ್ನಿ ಮಂಜುಳಾ ಸಾವಿಗೆ ಪತಿ ಸಂಗಯ್ಯ ಕಣ್ಣೀರು ಹಾಕಿದ್ದಾರೆ. ನಿರಂತರವಾಗಿ ಅಧಿಕಾರಿಗಳು ಹೇರುತ್ತಿದ್ದ ಒತ್ತಡದಿಂದಲೇ ಸಾವಾಗಿದೆ ಎಂದು ಟಿವಿ9 ವಾಹಿನಿ ಎದುರು ಆಕ್ರೋಶ ವ್ಯಕ್ತಪಡಿಸಿದರು. ‘ನನ್ನ ಪತ್ನಿಗೆ ಸಕ್ಕರೆ ಕಾಯಿಲೆ ಇತ್ತು. ಅವರು ಎಸ್‌ಐಆರ್ ಕರ್ತವ್ಯ ಬೇಡ ಅಂದರೂ ಒತ್ತಡ ಹಾಕಲಾಗಿದೆ’ ಎಂದು ಗಂಭೀರ ಆರೋಪ ಮಾಡಿದರು.
ಇದನ್ನೂ ಓದಿ: ಗ್ರಾಮ ಆಡಳಿತ ಅಧಿಕಾರಿ ಭುವನಾ ದುರ್ಮರಣ: ಮಗಳ ಮದುವೆ ಕನಸು ಕಂಡಿದ್ದ ಕುಟುಂಬಕ್ಕೆ ಬರಸಿಡಿಲು
‘ಇಂದು ಕರ್ತವ್ಯ ಸಮಯದಲ್ಲಿ ಪತ್ನಿ ಸಾವು ಆಗಿದೆ. ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೆ. ವೈದ್ಯಕೀಯ ಪರೀಕ್ಷೆ ಬಳಿಕ ಸಾವಿನ ಕಾರಣ ಗೊತ್ತಾಗಲಿದೆ. ಅಂಗನವಾಡಿ ಕೆಲಸದ ಜೊತೆ ಈ ಕೆಲಸ ಹೆಚ್ಚಿನ ಹೊರೆ ಆಗಿತ್ತು’ ಎಂದು ಮಂಜುಳಾ ಸಹೋದ್ಯೋಗಿಗಳು ಕಣ್ಣೀರು ಹಾಕಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
