ಶಿವಮೊಗ್ಗ, ಜುಲೈ 11: ಶಿವಮೊಗ್ಗ ಮತ್ತು ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್ಗಳು ಮತ್ತು ಸಹಕಾರ ಸಂಘಗಳಿಗೆ ಬರೋಬ್ಬರಿ 28.87 ಲಕ್ಷ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಸಹೋದರರಾದ ರಾಹುಲ್ ಮತ್ತು ಲೋಕೇಶ್ ಸೇರಿ ಐವರ ವಿರುದ್ಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ತೀರ್ಥಹಳ್ಳಿಯ ಬಗ್ಗೋಡಿ ನಿವಾಸಿಗಳಾದ ರಾಹುಲ್ ಮತ್ತು ಲೋಕೇಶ್, ಮವಲಗೊಪ್ಪದ ಸುಧಾ, ರವಿಶಂಕರ್ ಮತ್ತು ಶರತ್ ಈ ವಂಚನೆಯಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ. ಸುಮಾರು ಅರ್ಧ ಕೆ.ಜಿ. ನಕಲಿ ಚಿನ್ನವನ್ನು ವಿವಿಧ ಬ್ಯಾಂಕ್ಗಳಲ್ಲಿ ಅಡವಿಟ್ಟು ಲಕ್ಷಾಂತರ ರೂಪಾಯಿ ಸಾಲ ಪಡೆದಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಚಿನ್ನ ಅಡವಿಟ್ಟು ನವೀಕರಿಸಲು ಬಾರದೆ ಇದ್ದಾಗ, ಬ್ಯಾಂಕ್ ಅಧಿಕಾರಿಗಳಿಗೆ ಅನುಮಾನ ಮೂಡಿದೆ. ಚಿನ್ನವನ್ನು ಪರಿಶೀಲಿಸಿದಾಗ ಅದು ನಕಲಿ ಎಂದು ತಿಳಿದುಬಂದಿದೆ. ಕೂಡಲೇ ದೊಡ್ಡಪೇಟೆ ಪೊಲೀಸರಿಗೆ ದೂರು ನೀಡಲಾಗಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಲೋಕೇಶ್ನನ್ನು ಬಂಧಿಸಿದ್ದಾರೆ. ಆದರೆ, ಕಿಂಗ್ಪಿನ್ ಎನ್ನಲಾದ ರಾಹುಲ್ ಸೇರಿದಂತೆ ಸುಧಾ, ರವಿಶಂಕರ್ ಮತ್ತು ಶರತ್ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ