ಹಾವೇರಿ, ಮಾರ್ಚ್ 01: ಇತ್ತೀಚೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಹಣಕ್ಕಾಗಿ ಶಿಕ್ಷಣ ನೀಡುತ್ತಿವೆ ಎಂಬ ಅನುಮಾನಗಳು ಮೂಡುತ್ತಿವೆ. ಏಕೆಂದರೆ ಇದಕ್ಕೆ ಸಾಕ್ಷಿಯೆಂಬಂತೆ ಘಟನೆಯೊಂದು ನಗರದಲ್ಲಿ ನಡೆದಿದೆ. ಇಲ್ಲೊಂದು ಖಾಸಗಿ ಶಿಕ್ಷಣ ಸಂಸ್ಥೆ ಶುಲ್ಕ ಕಟ್ಟಿಲ್ಲ ಅಂತಾ ಆರೋಪಿಸಿ ವಿದ್ಯಾರ್ಥಿನಿಗೆ ಪ್ರವೇಶ ಪತ್ರ ನೀಡಿಲ್ಲ. ಅಷ್ಟೇ ಅಲ್ಲದೆ ಮಧ್ಯಸ್ಥಿಕೆ ವಹಿಸಿದ ವ್ಯಕ್ತಿಯ ಬೈಕ್ ಅನ್ನು ಅಡವಿಟ್ಟುಕೊಂಡು ಬಳಿಕ ಹಾಲ್ ಟಿಕೆಟ್ (hall ticket) ನೀಡಿದ್ದಾರೆ. ಸದ್ಯ ಆಡಳಿತ ಮಂಡಳಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕ್ಷಕಿಯಿಂದ ದರ್ಪ
ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಬಿಎಜೆಎಸ್ಎಸ್ ಕಾಲೇಜು ಆವರಣದಲ್ಲಿರುವ ಪಿಯುಸಿ ಡಿಬಿಎಸ್ ಮೆಡಿಕಲ್ ನೀಟ್ ಅಕಾಡೆಮಿ ಕಾಲೇಜ್ನಲ್ಲಿ ಘಟನೆ ನಡೆದಿದೆ. ಸಾರಾ ಜೆಸ್ಸಿಕಾ ಪಿಯುಸಿ ವಿಜ್ಞಾನ ಭಾಗದಲ್ಲಿ ಓದುತ್ತಿದ್ದು, ಪರೀಕ್ಷೆ ಹಾಲ್ ಟಿಕೆಟ್ ನೀಡದೆ ಕಳೆದ ಒಂದು ವಾರದಿಂದ ಆಡಳಿತದ ಮಂಡಳಿ ಸತಾಯಿಸಿದೆ. ವಿದ್ಯಾರ್ಥಿನಿ ಭವಿಷ್ಯ ಹಾಳಾಗುತ್ತೆ, ಹಾಲ್ ಟಿಕೆಟ್ ನೀಡುವಂತೆ ಕೇಳಿದಾಗ ಸುನೀತಾ ಮೇಡಂ ಎನ್ನುವವರು ಎಲ್ಲಾ ಕಾಲೇಜಿನವರು ಪುಗಸಟ್ಟೆ ಕಲಿಸುತ್ತಾರಾ ಎಂದು ದರ್ಪ ತೋರಿದ್ದಾರೆ.
ಅಲ್ಲದೆ ಪ್ರಕರಣ ಮಧ್ಯಸ್ಥಿಕೆ ವಹಿಸಿದ ಶಿವಪುತ್ರ ಎಂಬುವವರ ಬೈಕ್ ಮತ್ತು ಮೊಬೈಲ್ ತೆಗೆದುಕೊಂಡಿದ್ದಾರೆ. ಕೊನೆಗೆ ಮೊಬೈಲ್ ಕೊಟ್ಟು ಬೈಕ್ ಇಟ್ಟುಕೊಂಡಿದ್ದಾರೆ. ಬಳಿಕ ಆಡಳಿತ ಮಂಡಳಿ ಸದಸ್ಯರು ವಿದ್ಯಾರ್ಥಿಗೆ ಹಾಲ್ ಟಿಕೆಟ್ ನೀಡಿ ಪರೀಕ್ಷೆಗೆ ಅವಕಾಶ ನೀಡಿದ್ದಾರೆ.
ಇದನ್ನೂ ಓದಿ: ಶುಲ್ಕ ಬಾಕಿ ಆರೋಪ: ವಿದ್ಯಾರ್ಥಿನಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಹಾಲ್ ಟಿಕೆಟ್ ನಿರಾಕರಿಸಿದ ಕಾಲೇಜು
ಸುನೀತಾ ಡಿಬಿ ಮೇಡಂ ಸರ್ಕಾರಿ ಹಿರಿಯ ಉನ್ನತ್ತೀಕರಣ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಖಾಸಗಿ ಶಾಲೆಯಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. 30 ಸಾವಿರ ಶುಲ್ಕಕ್ಕಾಗಿ ವಿದ್ಯಾರ್ಥಿನಿ ಕಣ್ಣೀರು ಹಾಕಿದ್ದು, ಸರ್ಕಾರಿ ಶಾಲೆಯ ಶಿಕ್ಷಕಿಗೆ ಖಾಸಗಿ ಶಾಲೆಯಲ್ಲಿ ಏನು ಕೆಲಸ ಎಂದು ಆಕ್ರೋಶ ವ್ಯಕ್ತವಾಗಿದೆ.
ಅಲ್ಲದೆ ಈ ಹಿಂದೆ ಈ ಶಾಲೆಯಲ್ಲಿ ಕೆಲಸ ಮಾಡಿದ ಶಿಕ್ಷಕರಿಗೆ ಸಂಬಳ ನೀಡಿಲ್ಲ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಲು ಸುನೀತಾ ಮೇಡಂ ನಿರಾಕರಿಸಿದರು. ವಿದ್ಯಾರ್ಥಿನಿ ಸಾರಾ ತಂದೆ ರಾಜು ಪ್ರತಿಕ್ರಿಯಿಸಿದ್ದು, ಶುಲ್ಕವನ್ನ ಕಟ್ಟಿದ್ದೇನೆ. ಅದಕ್ಕೆ ಸರಿಯಾದ ರಸೀದಿ ನೀಡಲ್ಲ ಎಂದರು. ಇನ್ನು ಈ ವಿಚಾರ ಬಿಇಒ ಶ್ಯಾಮಸುಂದರ್ ಗಮನಕ್ಕೆ ತರಲಾಗಿದ್ದು, ನೋಟಿಸ್ ನೀಡಿ ತನಿಖೆ ಮಾಡುತ್ತೇವೆ ಅಂದಿದ್ದಾರೆ.
ಇದನ್ನೂ ಓದಿ: ಪರೀಕ್ಷೆಗೆ ಹೆದರಿ ವಸತಿ ಶಾಲೆಯ ಕಾಂಪೌಂಡ್ ಹಾರಿ 5 ಮಂದಿ SSLC ವಿದ್ಯಾರ್ಥಿಗಳು ಪರಾರಿ!
ಒಟ್ಟಿನಲ್ಲಿ ಖಾಸಗಿ ಶಾಲೆಯ ಧನದಾಯಿ ಆಸೆಗಾಗಿ ವಿದ್ಯಾರ್ಥಿನಿ ಪ್ರವೇಶ ಪತ್ರ ನೀಡಿದೆ ಸತಾಯಿಸುತ್ತಿದ್ದಾರೆ. ಸ್ಥಳೀಯರು ಸುನೀತಾ ಮೇಡಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗ ವಿದ್ಯಾರ್ಥಿನಿ ಪರೀಕ್ಷೆ ಬರೆದಿದ್ದು, ಸರ್ಕಾರಿ ಶಾಲೆಯ ಶಿಕ್ಷಕಿಯ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ.
ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ
ಕರ್ನಾಟಕದ ಮತ್ತಷ್ಟು ಸುದ್ದಿಗಳ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
