ಚಿಕ್ಕಮಗಳೂರು, ಮೇ 03: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ (postal ballot recount) ಪ್ರಕ್ರಿಯೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್ ಮೌನವಾಗಿದೆ, ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಕ್ರಮವಾಗಿ ಜನಾದೇಶವನ್ನು ಕಸಿದುಕೊಂಡಿದ್ದ ಕಾಂಗ್ರೆಸ್‌ಗೆ ನ್ಯಾಯಾಲಯ ತಕ್ಕ ಪಾಠ ಕಲಿಸಿದೆ ಎಂದು ಅವರು ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಆರ್. ಅಶೋಕ್ ಟ್ವೀಟ್‌ನಲ್ಲಿ ಏನಿದೆ?
ಮತ ಕಳ್ಳ ಯಾರು? ರಾಹುಲ್ ಗಾಂಧಿ! ಎಂದಿರುವ ಅಶೋಕ್, ಶೃಂಗೇರಿಯ ಮರು ಎಣಿಕೆ ಫಲಿತಾಂಶ ಕಾಂಗ್ರೆಸ್‌ನ ಕರಾಳ ಮುಖವನ್ನು ಬಯಲು ಮಾಡಿದೆ ಎಂದಿದ್ದಾರೆ. 2023ರ ಚುನಾವಣೆಯಲ್ಲಿ 279 ಅಂಚೆ ಮತಗಳನ್ನು ಅಕ್ರಮವಾಗಿ ತಿರಸ್ಕರಿಸುವ ಮೂಲಕ ಜನಾದೇಶವನ್ನು ಕದಿಯಲಾಗಿತ್ತು. ಅಧಿಕಾರದ ಮದಕ್ಕೆ ತಲೆಬಾಗದೆ ಕಾನೂನು ಹೋರಾಟ ನಡೆಸಿದ ಡಿ.ಎನ್. ಜೀವರಾಜ್ ಅವರ ಈ ಹೋರಾಟ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂದ ಜಯ ಎಂದು ಅವರು ಶ್ಲಾಘಿಸಿದ್ದಾರೆ.
ಶೃಂಗೇರಿಯಲ್ಲಿ ಕಾಂಗ್ರೆಸ್ ಅಸಿಂಧು – ಸತ್ಯಕ್ಕೆ ಜಯ!
ವೋಟ್ ಚೋರ್ ಕೌನ್ ಹೈ? ರಾಹುಲ್ ಗಾಂಧಿ ಹೈ!
ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಎಣಿಕೆ ಫಲಿತಾಂಶ ಕಾಂಗ್ರೆಸ್ ಪಕ್ಷದ ಕರಾಳ ಮುಖವನ್ನ ಮತ್ತೊಮ್ಮೆ ಬಯಲು ಮಾಡಿದೆ. ಜನಾದೇಶಕ್ಕೆ ಮೋಸ ಮಾಡಿ ಅಕ್ರಮವಾಗಿ ಗೆಲುವು ಸಾಧಿಸಲು ಅಧಿಕಾರ ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್ ಪಕ್ಷಕ್ಕೆ ನ್ಯಾಯಾಂಗ… pic.twitter.com/P3gvGa9AmG
— R. Ashoka (@RAshokaBJP) May 3, 2026
ಪ್ರಕರಣದ ಹಿನ್ನೆಲೆ
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಅವರು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ವಿರುದ್ಧ ಕೇವಲ 201 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಆದರೆ, ಅಧಿಕಾರಿಗಳು ಅಂಚೆ ಮತಗಳ ಎಣಿಕೆಯಲ್ಲಿ ಗಂಭೀರ ಲೋಪ ಎಸಗಿದ್ದಾರೆ ಮತ್ತು ಎದುರಾಳಿ ಅಭ್ಯರ್ಥಿ ಚುನಾವಣೆಯಲ್ಲಿ ಸುಮಾರು 120 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ಆರೋಪಿಸಿ ಜೀವ ರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ರಾಜೇಗೌಡ ಅವರು ಈ ಅರ್ಜಿಯನ್ನು ವಜಾಗೊಳಿಸುವಂತೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರೂ, ನ್ಯಾಯಾಲಯಗಳು ಅದನ್ನು ತಿರಸ್ಕರಿಸಿ ಮರು ಎಣಿಕೆಗೆ ಹಸಿರು ನಿಶಾನೆ ನೀಡಿದ್ದವು. ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ನ್ಯಾಯಪೀಠವು ಅಂಚೆ ಮತಗಳ ಮರು ಪರಿಶೀಲನೆಗೆ ಐತಿಹಾಸಿಕ ಆದೇಶ ನೀಡಿತ್ತು.
ಇದನ್ನೂ ಓದಿ ರಾಜೇಗೌಡ vs ಜೀವರಾಜ್: ಅಂಚೆ ಮತಗಳ ಮರು ಎಣಿಕೆ ಹೈಕೋರ್ಟ್ ಆದೇಶದಿಂದ ಇಲ್ಲಿಯವರೆಗೆ ಆಗಿದ್ದೇನು? ಯಾರಿಗೆ ಗೆಲುವು?
ಮರು ಎಣಿಕೆಯಲ್ಲಿ ಏನಾಯಿತು?
ನಿನ್ನೆ (ಮೇ 2) ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ನಡೆದ ಸುದೀರ್ಘ ಮರು ಎಣಿಕೆ ಪ್ರಕ್ರಿಯೆಯಲ್ಲಿ ನಾಟಕೀಯ ಬೆಳವಣಿಗೆಗಳು ನಡೆದವು. ವರದಿಗಳ ಪ್ರಕಾರ, ಮರು ಎಣಿಕೆಯ ನಂತರ ರಾಜೇಗೌಡ ಅವರ ಮತಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ ಎನ್ನಲಾಗಿದ್ದು, ಇದು ಬಿಜೆಪಿ ಪಾಳಯದಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ನ್ಯಾಯದೇವತೆಯ ಮೇಲೆ ನಂಬಿಕೆ ಇಟ್ಟು ಸಾಂವಿಧಾನಿಕವಾಗಿ ಹೋರಾಡಿದ ಡಿ.ಎನ್. ಜೀವರಾಜ್ ಅವರಿಗೆ ಜಯ ಸಿಕ್ಕಿದೆ ಎಂದು ಅಶೋಕ್ ಅಭಿನಂದಿಸಿದ್ದಾರೆ. ಸದ್ಯ ಹೈಕೋರ್ಟ್ ನಿರ್ದೇಶನದಂತೆ ಚುನಾವಣಾಧಿಕಾರಿಗಳು ಮರು ಎಣಿಕೆಯ ವರದಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 10:42 am, Sun, 3 May 26
