ಶೇಖ್ ಹಸೀನಾ ಅವರ ನಾಳೆಯ ಸುದ್ದಿಗೋಷ್ಠಿಗೂ ನಮಗೂ ಸಂಬಂಧವಿಲ್ಲ; ಭಾರತ ಸ್ಪಷ್ಟನೆ – Kannada News | Organised by private media India distances itself from Sheikh Hasina’s August 5 press conference

ನವದೆಹಲಿ, ಆಗಸ್ಟ್ 4: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಆಗಸ್ಟ್ 5ರಂದು ನಡೆಸಲಿರುವ ಮಾಧ್ಯಮ ಸಂವಾದಕ್ಕೂ ತನಗೂ ಯಾವುದೇ ಸಂಬಂಧವಿಲ್ಲವೆಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಸ್ಪಷ್ಟಪಡಿಸಿದೆ. 2024ರಲ್ಲಿ ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಯ ನಂತರ ಅಧಿಕಾರ ಕಳೆದುಕೊಂಡು ದೇಶ ತೊರೆದಿದ್ದ ಶೇಖ್ ಹಸೀನಾ ದೆಹಲಿಯಲ್ಲಿ ಆಶ್ರಯ ಪಡೆದಿದ್ದರು. ಅದಾದ ಬಳಿಕ ಅವರ ಮೊದಲ ಮಾಧ್ಯಮ ಗೋಷ್ಠಿ ಇದಾಗಿದೆ. ಈ ಕಾರ್ಯಕ್ರಮವನ್ನು ಖಾಸಗಿ ಮಾಧ್ಯಮ ಸಂಸ್ಥೆಯೊಂದು ಆಯೋಜಿಸುತ್ತಿದ್ದು, ಇದರಲ್ಲಿ ವ್ಯಕ್ತವಾಗುವ ಯಾವುದೇ ಅಭಿಪ್ರಾಯಗಳನ್ನು ಭಾರತ ಸರ್ಕಾರ ಬೆಂಬಲಿಸುವುದಿಲ್ಲ ಹಾಗೂ ಆ ಕಾರ್ಯಕ್ರಮದೊಂದಿಗೆ ಭಾರತ ಸರ್ಕಾರಕ್ಕೆ ಯಾವುದೇ ಸಂಬಂಧವಿಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

“ಶೇಖ್ ಹಸೀನಾ ದೆಹಲಿಯಲ್ಲಿ ನಡೆಸಿರುವ ಸಂವಾದವನ್ನು ಖಾಸಗಿ ಮಾಧ್ಯಮ ಸಂಸ್ಥೆಯೊಂದು ಆಯೋಜಿಸುತ್ತಿದೆ. ಇದರಲ್ಲಿ ಭಾರತ ಸರ್ಕಾರದ ಯಾವುದೇ ಪಾತ್ರವಿಲ್ಲ. ಈ ವೇದಿಕೆಯಲ್ಲಿ ವ್ಯಕ್ತಪಡಿಸಲಾಗುವ ಯಾವುದೇ ಅಭಿಪ್ರಾಯಗಳನ್ನು ಸರ್ಕಾರ ಬೆಂಬಲಿಸುವುದಿಲ್ಲ” ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: “ನಾನು ಈ ವರ್ಷವೇ ನನ್ನ ದೇಶಕ್ಕೆ ಮರಳುತ್ತೇನೆ”; ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ

ಭಾರತದ ಭೂಪ್ರದೇಶವನ್ನು ಶೇಖ್ ಹಸೀನಾ ಮತ್ತು ಇತರ ಅವಾಮಿ ಲೀಗ್ ನಾಯಕರು ರಾಜಕೀಯ ಭಾಷಣಗಳಿಗೆ ಅಥವಾ ಬಾಂಗ್ಲಾದೇಶದ ಸ್ಥಿರತೆಗೆ ಧಕ್ಕೆ ತರುವ ಮತ್ತು ದ್ವಿಪಕ್ಷೀಯ ಬಾಂಧವ್ಯವನ್ನು ಹಾಳುಮಾಡುವ ಕಾರ್ಯಚಟುವಟಿಕೆಗಳಿಗೆ ಬಳಸದಂತೆ ನೋಡಿಕೊಳ್ಳಬೇಕು ಎಂದು ಬಾಂಗ್ಲಾದೇಶದ ಮನವಿಯ ಬೆನ್ನಲ್ಲೇ ಈ ಸ್ಪಷ್ಟನೆ ಬಂದಿದೆ.

ಶೇಖ್ ಹಸೀನಾ ಭಾಷಣ ಏಕೆ ಮುಖ್ಯ?:

ಆಗಸ್ಟ್ 2024ರಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಚಳವಳಿಯ ನಂತರ ಅಧಿಕಾರದಿಂದ ಕೆಳಗಿಳಿದು ಭಾರತದಲ್ಲಿ ತಲೆಮರೆಸಿಕೊಂಡಿರುವ ಶೇಖ್ ಹಸೀನಾ ಸುಮಾರು 2 ವರ್ಷಗಳ ನಂತರ ಆಗಸ್ಟ್ 5ರಂದು ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ. ನವದೆಹಲಿಯ ‘ಸರ್ ಮಾರ್ಕ್ ಟಲ್ಲಿ ಆಡಿಟೋರಿಯಂ’ನಲ್ಲಿ ನಡೆಯಲಿರುವ ‘ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ ಆಫ್ ಸೌತ್ ಏಷ್ಯಾ’ (FCC South Asia) ಆಯೋಜಿಸಿರುವ ಕಾರ್ಯಕ್ರಮದಲ್ಲಿ ಶೇಖ್ ಹಸೀನಾ ಆನ್‌ಲೈನ್ ಮೂಲಕ ಭಾಗವಹಿಸಿ ಮಾತನಾಡಲಿದ್ದಾರೆ. ಈ ವೇಳೆ ಅವರು ತಮ್ಮ ಭವಿಷ್ಯದ ಯೋಜನೆಗಳು ಮತ್ತು ಬಾಂಗ್ಲಾದೇಶಕ್ಕೆ ಮರಳುವ ಪ್ರಸ್ತಾವನೆಯ ಬಗ್ಗೆ ಮಾತನಾಡುವ ನಿರೀಕ್ಷೆಯಿದೆ.

ಇದನ್ನೂ ಓದಿ: ಗಲ್ಲು ಶಿಕ್ಷೆಗೆ ಒಳಗಾಗಿರುವ ಶೇಖ್ ಹಸೀನಾ ಭಾರತದಲ್ಲಿ ಎಷ್ಟು ದಿನ ಇರಬಹುದು? ಸರ್ಕಾರದ ಉತ್ತರ ಇಲ್ಲಿದೆ

ಈ ಕಾರ್ಯಕ್ರಮದಲ್ಲಿ ಅವರ ಪುತ್ರ ಸಜೀಬ್ ವಾಜೆದ್ ಜೋಯ್, ಬಾಂಗ್ಲಾದೇಶದ ಮಾಜಿ ಶಿಕ್ಷಣ ಸಚಿವ ಮೊಹಿಬುಲ್ ಹಸನ್ ಚೌಧರಿ ನೌಫೆಲ್ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಮಹಮ್ಮದ್ ಅಲಿ ಕೂಡ ಭಾಗವಹಿಸಲಿದ್ದಾರೆ. ತಮ್ಮ 15 ವರ್ಷಗಳ ಆಡಳಿತ ಪತನಗೊಂಡು 2 ವರ್ಷಗಳು ಪೂರೈಸುವ ಸಂದರ್ಭದಲ್ಲಿ ನಡೆಯುತ್ತಿರುವ ಈ ಭಾಷಣವು ಅವರು ಅಧಿಕಾರದಿಂದ ಕೆಳಗಿಳಿದ ನಂತರ ಭಾಗವಹಿಸುತ್ತಿರುವ ಅತ್ಯಂತ ಪ್ರಮುಖ ಸಾರ್ವಜನಿಕ ಕಾರ್ಯಕ್ರಮವಾಗಿದೆ. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಬಹಳ ಮುಖ್ಯವಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *