ನವದೆಹಲಿ, ಫೆಬ್ರುವರಿ 20: ಎಐನಿಂದ ಒಳಿತೂ ಇದೆ, ಕೆಡಕೂ ಇದೆ. ದೂರಗಾಮಿಯಾಗಿ ಎಐನಿಂದ ಮನುಕುಲಕ್ಕೆ ಸಾಕಷ್ಟು ಪ್ರಯೋಜನಗಳಾಗಬಹುದು ಎಂದು ಅನೇಕರು ಹೇಳುತ್ತಿದ್ದಾರೆ. ಐಎಂಎಫ್ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಕ್ರಿಸ್ಟಾಲಿನಾ ಜಾರ್ಜಿಯೆವಾ (Kristalina Georgieva) ಅವರು ಎಐನಿಂದ ಸದ್ಯೋಭವಿಷ್ಯದಲ್ಲಿ ಆಗಬಹುದಾದ ಒಳಿತು ಮತ್ತು ಅಪಾಯಗಳೆರಡನ್ನೂ ಪ್ರಸ್ತಾಪಿಸಿದ್ದಾರೆ.
ಉದ್ಯೋಗ ಮಾರುಕಟ್ಟೆಯಲ್ಲಿ ಎಐ ಸುನಾಮಿಯಂತೆ ಅಪ್ಪಳಿಸಲಿದೆ ಎಂದು ಜಾರ್ಜಿಯೆವಾ ಎಚ್ಚರಿಸಿದ್ದಾರೆ. ಉದಯೋನ್ಮುಖ ಆರ್ಥಿಕತೆಯ ದೇಶಗಳಲ್ಲಿ ಶೇ. 40ರಷ್ಟು ಉದ್ಯೋಗಗಳು ಎಐನಿಂದಾಗಿ ಇಲ್ಲವಾಗುತ್ತವೆ. ಶ್ರೀಮಂತ ದೇಶಗಳಲ್ಲಂತೂ ಇದರ ಪರಿಣಾಮ ಇನ್ನೂ ಭಿಕರವಾಗಿರುತ್ತದೆ. ಅಲ್ಲಿ ಶೇ 60ರಷ್ಟು ಉದ್ಯೋಗನಷ್ಟ ಆಗಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಹಿರಿಯ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಎಐ, ಡೀಪ್ಟೆಕ್ ಸ್ಟಾರ್ಟಪ್ಗಳ ಸಿಇಒಗಳೊಂದಿಗೆ ಪ್ರಧಾನಿ ಮೋದಿ ಸಭೆ; ಓಪನ್ಎಐ, ಆಂಥ್ರೋಪಿ ಸಿಇಒಗಳ ವೈಮನಸ್ಸು ಬಹಿರಂಗ?
ಜಗತ್ತಿಗೆ ಎಐನಿಂದ ಚುರುಕು ಬೆಳವಣಿಗೆ
ಎಐನಿಂದ ಜಾಗತಿಕ ಆರ್ಥಿಕ ಬೆಳವಣಿಗೆಗೆ ಪುಷ್ಟಿ ಸಿಗುತ್ತದೆ ಎಂದೂ ಐಎಂಎಫ್ನ ಎಂಡಿ ತಿಳಿಸಿದ್ದಾರೆ. ‘ನಾವು ಕೆಲ ಸಂಶೋಧನೆ ಮೂಕ ಉತ್ತರ ಕಂಡುಕೊಂಡಿದ್ದೇವೆ. ನಮಗೆ ಗೊತ್ತಾದಂತೆ, ಎಐನಿಂದ ಜಾಗತಿಕ ಬೆಳವಣಿಗೆಯಲ್ಲಿ ಒಂದು ಪ್ರತಿಶತ ಅಂಕ ಹೆಚ್ಚಬಹುದು. ಶೇ 0.8ರಷ್ಟು ಪ್ರಗತಿ ಹೆಚ್ಚಬಹುದು. ಕೋವಿಡ್ಗೆ ಮುಂಚಿನದಕ್ಕಿಂತ ಹೆಚ್ಚು ವೇಗವಾಗಿ ಜಗತ್ತು ಬೆಳೆಯಬಹುದು’ ಎಂದು ಎಐ ಇಂಪ್ಯಾಕ್ಟ್ ಸಮಿಟ್ನಲ್ಲಿ ನಡೆದ ಪ್ಯಾನಲ್ ಚರ್ಚೆಯ ವೇಳೆ ಆಕೆ ಮಾಹಿತಿ ನೀಡಿದ್ದಾರೆ.
ಭಾರತಕ್ಕೆ ವಿಕಸಿತ ದೇಶವಾಗಲು ಅವಕಾಶ
ಎಐನಿಂದಾಗಿ ಭಾರತವು ಹೆಚ್ಚು ವೇಗದಲ್ಲಿ ಬೆಳವಣಿಗೆ ದಾಖಲಿಸಲು ಅವಕಾಶ ಇರುತ್ತದೆ. ಭಾರತದ ವಿಕಸಿತ ಭಾರತದ ಗುರಿ ಈಡೇರಿಕೆ ಅಸಾಧ್ಯವೇನೂ ಆಗುವುದಿಲ್ಲ ಎಂದು ಕ್ರಿಸ್ಟಾಲಿನಾ ಜಾರ್ಜಿಯೆವಾ ಅಭಿಪ್ರಾಯಪಟ್ಟಿದ್ಧಾರೆ. ಭಾರತವು 2047ರೊಳಗೆ ವಿಕಸಿತ ದೇಶವಾಗುವ ಮತ್ತು 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಗುರಿ ಹೊಂದಲಾಗಿದೆ. ಈ ಸಾಧ್ಯತೆ ಬಗ್ಗೆ ಐಎಂಎಫ್ ಎಂಡಿ ಮಾತನಾಡುತ್ತಿದ್ದರು.
ಇದನ್ನೂ ಓದಿ: ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದ ಏಪ್ರಿಲ್ನಿಂದ ಚಾಲನೆ ಸಾಧ್ಯತೆ; ಓಮನ್, ಬ್ರಿಟನ್ ಒಪ್ಪಂದಗಳೂ ಏಪ್ರಿಲ್ನಲ್ಲೇ?
ಐಟಿ ಸೆಕ್ಟರ್ನಲ್ಲಿ ಕೋಡಿಂಗ್ ಬದಲು ಈ ಕೆಲಸ ಮಾಡಬೇಕು: ನಂದನ್ ನಿಲೇಕಣಿ
ಎಐ ಕ್ರಾಂತಿ ನಡೆಯುತ್ತಿರುವಾಗ ಕೋಡಿಂಗ್ ರಚಿಸುವುದು ಗುರಿಯಾಗಿರಬಾರದು. ಕೋಡಿಂಗ್ ಬದಲು, ಎಐ ಸಿಸ್ಟಂಗಳನ್ನು ನಿರ್ವಹಿಸುವ ಕೆಲಸಗಳಿಗೆ ವರ್ಗಾವಣೆ ಆಗಬೇಕು ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಮೊನ್ನೆಮೊನ್ನೆ (ಫೆ. 17) ಹೇಳಿದ್ದಾರೆ. ಅವರ ಪ್ರಕಾರ ಎಐ ತಂತ್ರಜ್ಞಾನವು ಜಾಗತಿಕವಾಗಿ 17 ಕೋಟಿ ಹೊಸ ಪ್ರಬಲ ಉದ್ಯೋಗಗಳನ್ನು ಸೃಷ್ಟಿಸಬಲ್ಲುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
