ಶ್ರೀರಂಗಪಟ್ಟಣ ADLR ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಪಾಸ್‌ವರ್ಡ್ ಮಾರಿ ಖಾಸಗಿ ವ್ಯಕ್ತಿಯಿಂದ ಲಂಚ ವಸೂಲಿ; ಅಧಿಕಾರಿ ಸೇರಿ 9 ಮಂದಿ ಅರೆಸ್ಟ್ – Kannada News | Srirangapatna ADLR Office Scam: Fake Land Accounts, Bribes and Arrests

ಮಂಡ್ಯ, ಜೂ.6: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಭೂದಾಖಲೆಗಳ ಸಹಾಯಕ ನಿರ್ದೇಶಕರ (ADLR) ಕಚೇರಿಯಲ್ಲಿ ನಡೆಯುತ್ತಿದ್ದ ಹಗರಣವನ್ನು ಲೋಕಾಯುಕ್ತ ಪೊಲೀಸರು ಪತ್ತೆಹಚ್ಚಿದ್ದಾರೆ. ಕಚೇರಿಯ ರಹಸ್ಯ ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಖಾಸಗಿ ವ್ಯಕ್ತಿಗೆ ನೀಡಿ, ಆತನ ಮೂಲಕ ಅಕ್ರಮ ಎಸಗುತ್ತಿದ್ದ 8 ಮಂದಿ ಸರ್ಕಾರಿ ಸಿಬ್ಬಂದಿ ಹಾಗೂ ಒಬ್ಬ ಖಾಸಗಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ದಿಢೀರ್ ಬಂಧನದಿಂದಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ ಇಡೀ ಸರ್ಕಾರಿ ಕಚೇರಿಯ ಕಾರ್ಯಕಲಾಪಗಳು ಸಂಪೂರ್ಣವಾಗಿ ಸ್ತಬ್ಧಗೊಂಡಿವೆ.

ಲೋಕಾಯುಕ್ತ ದಾಳಿ ನಡೆಯುತ್ತಿದ್ದಂತೆ ಮುಖ್ಯ ಎಡಿಎಲ್‌ಆರ್ ಅಧಿಕಾರಿ ಮೊಹಮ್ಮದ್ ಹುಸೇನ್ ಅವರು ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಕಚೇರಿಯಿಂದ ಪರಾರಿಯಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾರೆ. ಸರ್ವೆ ಮೇಲ್ವಿಚಾರಕ ಯೋಗರಾಜ್, ಭೂಮಾಪಕರಾದ ಅರವಿಂದ್, ಜಯಬೋರೇಗೌಡ, ದಯಾನಂದ್, ಮಧು, ರಮೇಶ್, ಹರೀಶ್, ನೇಹಾ ಸಾರಿಕಾ ಮಲ್ಲಿ ಸಿ. ಮತ್ತು ಖಾಸಗಿ ವ್ಯಕ್ತಿ ನಿತಿನ್ ಪ್ರೇಮಾನಂದ ಮಹಾಲೆ ಬಂಧಿತ ಆರೋಪಿಗಳಾಗಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಅಧಿಕಾರಿಗಳು ಶಾಮೀಲಾಗಿ ಸುಮಾರು 200 ಎಕರೆ ಸರ್ಕಾರಿ ಭೂಮಿಯನ್ನು ನಕಲಿ ಖಾತೆ ಸೃಷ್ಟಿಸಿ ಲೂಟಿ ಮಾಡುತ್ತಿದ್ದಾರೆ ಎಂದು ನಾಗೇಂದ್ರ ಎಂಬುವರು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಚೇತನಾ ಯಾದವ್, ಪಿಡಿಒ ಜಿ.ಆರ್. ನಾಗೇಂದ್ರ, ಎಡಿಎಲ್‌ಆರ್ ಮೊಹಮ್ಮದ್ ಹುಸೇನ್ ಹಾಗೂ ಎಸಿ ಶ್ರೀನಿವಾಸ್ ಅವರ ಕಚೇರಿಗಳ ಮೇಲೆ ದಾಳಿ ನಡೆಸಲು ಜಸ್ಟಿಸ್ ವೀರಪ್ಪ ವಾರಂಟ್ ಹೊರಡಿಸಿದ್ದರು.

ಲೋಕಾಯುಕ್ತ ಪೊಲೀಸರು ಎಡಿಎಲ್‌ಆರ್ ಕಚೇರಿಯನ್ನು ಪರಿಶೀಲಿಸಿದಾಗ, ಖಾಸಗಿ ವ್ಯಕ್ತಿ ನಿತಿನ್ ಪ್ರೇಮಾನಂದ ಮಹಾಲೆ ಎಂಬಾತ ಅಲ್ಲಿ ಅಧಿಕೃತ ಸರ್ಕಾರಿ ನೌಕರನಂತೆ ಕುಳಿತು ಕೆಲಸ ಮಾಡುತ್ತಿರುವುದು ಪತ್ತೆಯಾಗಿದೆ. ತನಿಖೆ ವೇಳೆ ಹಲವು ರಹಸ್ಯಗಳು ಬಯಲಾಗಿದೆ. ಸರ್ಕಾರಿ ನೌಕರರು ಸರ್ಕಾರದ ಅಧಿಕೃತ ಸರ್ವೆ ಪೋರ್ಟಲ್‌ಗೆ ಲಾಗಿನ್ ಆಗಲು ಬಳಸುವ ಯೂಸರ್ ಐಡಿ, ಪಾಸ್‌ವರ್ಡ್ ಹಾಗೂ ಮೊಬೈಲ್‌ಗೆ ಬರುವ ಒಟಿಪಿಗಳನ್ನು ನಿತಿನ್ ಪ್ರೇಮಾನಂದ ಮಹಾಲೆ ವ್ಯಕ್ತಿಗೆ ಹಂಚಿಕೊಂಡಿದ್ದರು.

ಡಿಜಿಟಲ್ ಪೋರ್ಟಲ್‌ನಲ್ಲಿ ಆಕಾರ್‌ಬಂದ್ ದಾಖಲೆಗಳು ಮತ್ತು ಇತರೆ ದತ್ತಾಂಶಗಳನ್ನು ನಮೂದಿಸಲು ಈ ನೌಕರರು ತಮ್ಮ ಸ್ವಂತ ಜೇಬಿನಿಂದ ಮಹಾಲೆಗೆ ತಿಂಗಳಿಗೆ 15,000 ರೂ. ಸಂಬಳ ನೀಡುತ್ತಿದ್ದರು. ಸಾರ್ವಜನಿಕರಿಂದ ಕೆಲಸ ಮಾಡಿಕೊಡಲು ಪಡೆಯುತ್ತಿದ್ದ ಲಂಚದ ಹಣವನ್ನುನಿತಿನ್ ಪ್ರೇಮಾನಂದ ಮಹಾಲೆ ತನ್ನ ಮೊಬೈಲ್‌ನ ಡಿಜಿಟಲ್ ಪೇಮೆಂಟ್ ಆ್ಯಪ್‌ಗಳ ಮೂಲಕ ಸಿಬ್ಬಂದಿಗಳ ಪರವಾಗಿ ವಸೂಲಿ ಮಾಡುತ್ತಿದ್ದ.

ಇದನ್ನೂ ಓದಿ: ಕರ್ನಾಟಕದಲ್ಲಿ 56 ಸಾವಿರಕ್ಕೂ ಹೆಚ್ಚು ಜನರಿಗೆ ತಮಗೇ ತಿಳಿಯದಂತೆ ಹರಡಿದೆ ಹೆಚ್‌ಐವಿ; ಪತ್ತೆಹಚ್ಚಲು ಅಭಿಯಾನ ಪ್ರಾರಂಭಿಸಿದ ಆರೋಗ್ಯ ಇಲಾಖೆ

ಮುಖ್ಯ ಅಧಿಕಾರಿ ಹುಸೇನ್ ಮತ್ತುಮಹಾಲೆ ಇಬ್ಬರೂ ಮೈಸೂರಿನ ಶಿವರಾತ್ರೀಶ್ವರ ನಗರದ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಈ ಮನೆಯ ಮೇಲೆ ದಾಳಿ ನಡೆಸಿದಾಗ ಹುಣಸೂರು, ಸಕಲೇಶಪುರ ಮತ್ತು ಕೋಲಾರದ ತಹಶೀಲ್ದಾರ್ ಹಾಗೂ ಸರ್ವೇಯರ್‌ಗಳ ಸಹಿ ಇರುವ ನಕಲಿ ದಾಖಲೆಗಳು ಮತ್ತು ನಕಲಿ ಸೀಲುಗಳು ಪತ್ತೆಯಾಗಿವೆ. ಜೊತೆಗೆ 1.40 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಮಹಾಲೆಯ ಬ್ಯಾಂಕ್ ಖಾತೆಯಲ್ಲಿ ಲಕ್ಷಾಂತರ ರೂಪಾಯಿಗಳ ಅಕ್ರಮ ವಹಿವಾಟು ನಡೆದಿರುವುದು ಪತ್ತೆಯಾಗಿದೆ. ಉಪ ಲೋಕಾಯುಕ್ತ ಜಸ್ಟಿಸ್ ಬಿ. ವೀರಪ್ಪ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿ, ತಹಶೀಲ್ದಾರ್ ಹಾಗೂ ಅಸಿಸ್ಟೆಂಟ್ ಕಮಿಷನರ್ ಕಚೇರಿಗಳ ಮೇಲಿನ ಶೋಧ ಕಾರ್ಯ ಇನ್ನು ಮುಂದುವರಿದಿದ್ದು, ತನಿಖೆ ನಡೆಯುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *