ನವದೆಹಲಿ, ಜೂನ್ 12: ಭಾರತೀಯ ಷೇರು ಮಾರುಕಟ್ಟೆ (India Stock Market) ಇಂದು ಶುಕ್ರವಾರ ಭಾರಿ ಏರಿಕೆ ಕಂಡಿದೆ. ಬಿಎಸ್‌ಇ ಸೆನ್ಸೆಕ್ಸ್ (BSE Sensex) ಸುಮಾರು 1,700 ಅಂಕಗಳಷ್ಟು ಜಿಗಿತ ಸಾಧಿಸಿದರೆ, ಎನ್‌ಎಸ್‌ಇ ನಿಫ್ಟಿ (NSE Nifty 50) ಮತ್ತೆ 23,600 ರ ಮಟ್ಟವನ್ನು ದಾಟಿದೆ. ಈ ಭರ್ಜರಿ ಚೇತರಿಕೆಯಿಂದಾಗಿ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ ಸುಮಾರು 7 ಲಕ್ಷ ಕೋಟಿ ರೂಗಿಂತಲೂ ಹೆಚ್ಚು ಹೆಚ್ಚಾಗಿದೆ. ಮಾರುಕಟ್ಟೆ ಇವತ್ತು ಶೇ. 2ರಷ್ಟು ಜಿಗಿತ ಕಂಡಿರುವುದು ವಿಶೇಷ. ಸೆನ್ಸೆಕ್ಸ್ 75,527 ಅಂಕಗಳೊಂದಿಗೆ ಟ್ರೇಡಿಂಗ್ ಮುಗಿಸಿದೆ. ನಿಫ್ಟಿ ಸೂಚ್ಯಂಕ 23,622 ಅಂಕಗಳೊಂದಿಗೆ ಅಂತ್ಯಗೊಂಡಿದೆ. ಭಾರತದ ಷೇರು ಮಾರುಕಟ್ಟೆ ಈ ಪರಿ ಭರ್ಜರಿ ಏರಿಕೆಗೆ ಏನು ಕಾರಣ? ಇಲ್ಲಿದೆ ಡೀಟೇಲ್ಸ್.
ಯುಎಸ್-ಇರಾನ್ ಶಾಂತಿ ಒಪ್ಪಂದದ ಭರವಸೆ
ಜಾಗತಿಕವಾಗಿ ಹೂಡಿಕೆದಾರರ ಉತ್ಸಾಹ ಹೆಚ್ಚಾಗಲು ಪ್ರಮುಖ ಕಾರಣ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ. ಅಮೆರಿಕ ಮತ್ತು ಇರಾನ್ ನಡುವೆ ಈ ವಾರಾಂತ್ಯದಲ್ಲೇ ಶಾಂತಿ ಒಪ್ಪಂದ ಏರ್ಪಡಬಹುದು ಎಂದು ಟ್ರಂಪ್ ಸುಳಿವು ನೀಡಿದ್ದಾರೆ. ಇದು ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಕಡಿಮೆಯಾಗುವ ಭರವಸೆ ಮೂಡಿಸಿದೆ.
ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಕುಸಿತ
ಯುದ್ಧದ ಆತಂಕ ದೂರವಾಗುತ್ತಿರುವ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ (Crude Oil) ಬೆಲೆ ಬ್ಯಾರೆಲ್‌ಗೆ 88.80 ಡಾಲರ್‌ಗೆ ಕುಸಿದಿದೆ. ಇದು ಕಳೆದ ಎರಡು ತಿಂಗಳಲ್ಲೇ ಅತ್ಯಂತ ಕನಿಷ್ಠ ಮಟ್ಟವಾಗಿದೆ. ತೈಲ ಬೆಲೆ ಇಳಿಕೆಯು ಭಾರತದಂತಹ ದೊಡ್ಡ ಆಮದು ದೇಶದ ಆರ್ಥಿಕತೆಗೆ ವರದಾನವಾಗಿದೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಬಡವರ ಪಟ್ಟಿಗೆ 6 ವರ್ಷದಲ್ಲಿ 2.7 ಕೋಟಿ ಜನರ ಸೇರ್ಪಡೆ; ಬಡತನ ಶೇ. 7ರಷ್ಟು ಹೆಚ್ಚಳ
ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ಟ್ರೆಂಡ್
ಟ್ರಂಪ್ ಅವರ ಶಾಂತಿ ಸಂಕೇತದಿಂದಾಗಿ ಏಷ್ಯಾದ ಪ್ರಮುಖ ಷೇರು ಮಾರುಕಟ್ಟೆಗಳಾದ ಜಪಾನ್‌ನ ಟೋಪಿಕ್ಸ್ (Topix), ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಮತ್ತು ಆಸ್ಟ್ರೇಲಿಯಾದ ಮಾರುಕಟ್ಟೆಗಳು ಶೇಕಡಾ 1 ರಿಂದ 1.5 ರಷ್ಟು ಏರಿಕೆ ಕಂಡವು. ಯುಎಸ್ ಮಾರುಕಟ್ಟೆಯ ಫ್ಯೂಚರ್ಸ್ ಕೂಡ ಲಾಭದಲ್ಲಿದ್ದವು.
ಬಲಗೊಂಡ ಭಾರತೀಯ ರೂಪಾಯಿ
ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು 60 ಪೈಸೆಗಿಂತಲೂ ಹೆಚ್ಚು ಜಿಗಿತ ಕಂಡು 95.25 ರೂ. ಮಟ್ಟದಲ್ಲಿ ವಹಿವಾಟು ಆರಂಭಿಸಿತು. ರೂಪಾಯಿ ಬಲಗೊಂಡಿರುವುದು ವಿದೇಶಿ ಹೂಡಿಕೆದಾರರಲ್ಲಿ (FIIs) ಭಾರತೀಯ ಮಾರುಕಟ್ಟೆಯ ಮೇಲಿನ ನಂಬಿಕೆಯನ್ನು ಹೆಚ್ಚಿಸಿದೆ.
ಆರ್‌ಬಿಐ (RBI) ತೆಗೆದುಕೊಂಡ ಮಹತ್ವದ ಕ್ರಮಗಳು
ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಮತ್ತು ರೂಪಾಯಿ ಮೌಲ್ಯಕ್ಕೆ ಬೆಂಬಲ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ಕೆಲವು ಪ್ರಮುಖ ನೀತಿ ಕ್ರಮಗಳನ್ನು ಪ್ರಕಟಿಸಿದೆ. ಇದು ಕೂಡ ಮಾರುಕಟ್ಟೆಯ ಇಂದಿನ ಮುನ್ನಡೆಗೆ ಮತ್ತೊಂದು ಪ್ರಮುಖ ಶಕ್ತಿಯಾಗಿದೆ.
ಇದನ್ನೂ ಓದಿ: ಈಗಲೂ ಭಾರತವೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ವಿಶ್ವಬ್ಯಾಂಕ್ ವರದಿ
ಬ್ಯಾಂಕಿಂಗ್, ಆಟೋಮೊಬೈಲ್, ಮೆಟಲ್ ಮತ್ತು ಐಟಿ ಸೇರಿದಂತೆ ಎಲ್ಲಾ ವಲಯದ ಷೇರುಗಳೂ ಇಂದು ಹಸಿರು ನಿಶಾನೆ (ಲಾಭ) ಕಂಡಿವೆ. ಶ್ರೀರಾಮ್ ಫೈನಾನ್ಸ್, ಟ್ರೆಂಟ್, ಎಲ್‌ಆಂಡ್‌ಟಿ ಮತ್ತು ಬಜಾಜ್ ಫೈನಾನ್ಸ್ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿವೆ. ನಿಫ್ಟಿ ಬ್ಯಾಂಕ್ ಬಹುತೇಕ ಶೇ. 3ರ ಸಮೀಪದಷ್ಟು ಹೆಚ್ಚಳ ಕಂಡಿದೆ. ನಿಫ್ಟಿ ಫಿನಾನ್ಷಿಯಲ್ ಸರ್ವಿಸ್ ಇಂಡೆಕ್ಸ್ ಸಾಧಿಸಿದ ಹೆಚ್ಚಳವು ಶೇ. 3 ಅನ್ನು ದಾಟಿ ಹೋಗಿದೆ. ಬಿಎಸ್ಇನಲ್ಲೂ ಬ್ಯಾಂಕ್ ಮತ್ತು ಹಣಕಾಸು ಸೇವೆಗಳ ಸೂಚ್ಯಂಕಗಳು ಸಖತ್ ಹಿಗ್ಗಿವೆ. ಹೆಚ್ಚಿನ ಇಂಡೆಕ್ಸ್ಗಳು ಪಾಸಿಟಿವ್ ಇವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
