ಚಿಕ್ಕಮಗಳೂರು, ಮಾ.3: ಕಾಫಿನಾಡಿನ ಹೃದಯಭಾಗದಲ್ಲಿರುವ ಜೂನಿಯರ್ ಕಾಲೇಜು ಬಳಿ ಇಂದು (ಮಾ.3) ಮಧ್ಯಾಹ್ನ ಕೆಎಸ್‌ಆರ್‌ಟಿಸಿ ಬಸ್ ಸಂಚರಿಸುತ್ತಿದ್ದಾಗಲೇ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರು ಡಿಪೋಗೆ ಸೇರಿದ ಈ ಬಸ್ ಇಂದು ಮಧ್ಯಾಹ್ನ ಜಿಲ್ಲಾ ಕೇಂದ್ರದಿಂದ ಹಾಸನಕ್ಕೆ ತೆರಳುತ್ತಿತ್ತು ಎಂದು ಹೇಳಲಾಗಿದೆ. ಬಸ್ ನಿಲ್ದಾಣದಿಂದ ಹೊರಟು ಜೂನಿಯರ್ ಕಾಲೇಜು ಸಮೀಪ ತಲುಪುತ್ತಿದ್ದಂತೆ ಬಸ್ಸಿನ ಇಂಜಿನ್ ಭಾಗದಲ್ಲಿ ಏಕಾಏಕಿ ದಟ್ಟ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿತು. ಬೆಂಕಿಯ ಸುಳಿವು ಸಿಗುತ್ತಿದ್ದಂತೆ ಚಾಲಕ ತಕ್ಷಣ ಬಸ್ಸನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ, ಪ್ರಯಾಣಿಕರೆಲ್ಲರನ್ನು ಕೆಳಗಿಳಿಯುವಂತೆ ಸೂಚಿಸಿದರು. ಇದರಿಂದಾಗಿ ಬಸ್ಸಿನಲ್ಲಿದ್ದ ಹತ್ತಾರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕೂಡಲೇ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು. ಆದರೂ ಬಸ್ಸಿನ ಮುಂಭಾಗ ಹಾನಿಯಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
