1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣ ದೇಶದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಸರ್ಕಾರಿ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್ ಅವರು ಬಾಲಿವುಡ್ ನಟ ಸಂಜಯ್ ದತ್ ಕುರಿತು ನೀಡಿರುವ ಒಂದು ಸ್ಫೋಟಕ ಹೇಳಿಕೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ‘ಸಂಜಯ್ ದತ್ ಅಂದು ಸಮಯಪ್ರಜ್ಞೆ ಮೆರೆದಿದ್ದರೆ ಮುಂಬೈ ಬಾಂಬ್ ಸ್ಫೋಟವನ್ನು ತಡೆಯಬಹುದಿತ್ತು. ನೂರಾರು ಅಮಾಯಕ ಜೀವಗಳನ್ನು ಉಳಿಸಬಹುದಿತ್ತು’ ಎಂದು ಅವರು ಹೇಳಿದ್ದಾರೆ. ಖ್ಯಾತ ಮಾಧ್ಯಮ ಸಂಸ್ಥೆ ‘ದಿ ಲಲ್ಲಂಟಾಪ್’ಗೆ ನೀಡಿದ ಸಂದರ್ಶನದಲ್ಲಿ ಉಜ್ವಲ್ ನಿಕಮ್ ಅವರು ಈ ಅಚ್ಚರಿಯ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಶಸ್ತ್ರಾಸ್ತ್ರಗಳ ಬಗ್ಗೆ ಮೊದಲೇ ತಿಳಿದಿತ್ತು
ಅಂದು ನಿಖರವಾಗಿ ಏನಾಗಿತ್ತು ಎಂಬುದನ್ನು ವಿವರಿಸಿದ ಉಜ್ವಲ್ ನಿಕಮ್, ‘ಬಾಂಬ್ ಸ್ಫೋಟಕ್ಕೂ ಮೊದಲು ಭೂಗತ ಪಾತಕಿ ಅಬು ಸಲೇಂ ದೊಡ್ಡ ಪ್ರಮಾಣದ ಮಾರಕಾಸ್ತ್ರಗಳನ್ನು ಹೊತ್ತು ಟೆಂಪೋದಲ್ಲಿ ಬಂದಿದ್ದ. ಆ ವಾಹನದಲ್ಲಿ ಹ್ಯಾಂಡ್ ಗ್ರೆನೇಡ್‌ಗಳು ಹಾಗೂ ಎಕೆ-47 ರೈಫಲ್‌ಗಳಿದ್ದವು. ಆ ಮಾರಕಾಸ್ತ್ರಗಳಲ್ಲಿ ಕೆಲವನ್ನು ಸಂಜಯ್ ದತ್ ತನ್ನ ಬಳಿ ಇಟ್ಟುಕೊಂಡಿದ್ದರು. ಆ ಬಳಿಕ ಕೆಲವು ಹ್ಯಾಂಡ್ ಗ್ರೆನೇಡ್‌ಗಳನ್ನು ವಾಪಸ್ ಮಾಡಿದ್ದರು’ ಎಂದಿದ್ದಾರೆ.
ಪೊಲೀಸರಿಗೆ ಮಾಹಿತಿ ನೀಡಿದ್ದರೆ ದೃಶ್ಯವೇ ಬೇರೆಯಾಗುತ್ತಿತ್ತು
‘ತಮ್ಮ ಬಳಿಗೆ ಬಂದಿದ್ದ ಶಸ್ತ್ರಾಸ್ತ್ರಗಳ ಅಕ್ರಮ ಸಾಗಾಟದ ಬಗ್ಗೆ ಸಂಜಯ್ ದತ್ ಅವರಿಗೆ ಮೊದಲೇ ಮಾಹಿತಿ ಇತ್ತು. ಅವರು ತಕ್ಷಣವೇ ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದರೆ, ಚಿತ್ರಣವೇ ಬದಲಾಗುತ್ತಿತ್ತು. ಪೊಲೀಸರು ತಕ್ಷಣ ಅಲರ್ಟ್ ಆಗಿ ಕಠಿಣ ಕ್ರಮ ಕೈಗೊಳ್ಳುತ್ತಿದ್ದರು. ಇದರಿಂದ ಬಾಂಬ್ ಸ್ಫೋಟದ ಇಡೀ ಪಿತೂರಿ ಮೊದಲೇ ಬಯಲಾಗುತ್ತಿತ್ತು ಮತ್ತು ಸ್ಫೋಟವನ್ನು ತಡೆಯಲು ಸಾಧ್ಯವಾಗುತ್ತಿತ್ತು’ ಎಂದು ನಿಕಮ್ ಅಭಿಪ್ರಾಯಪಟ್ಟಿದ್ದಾರೆ.
ಸಂಜಯ್ ದತ್ ಭಯೋತ್ಪಾದಕನಲ್ಲ
ಇದೇ ವೇಳೆ ಸಂಜಯ್ ದತ್ ಪರವಾಗಿಯೂ ಮಾತನಾಡಿದ ಉಜ್ವಲ್ ನಿಕಮ್, ‘ಸಂಜಯ್ ದತ್ ಅವರಿಗೆ ಸ್ಫೋಟವನ್ನು ತಡೆಯುವ ಅವಕಾಶವಿತ್ತು ಎಂದು ನಾನು ಹೇಳುತ್ತಿರುವುದರ ಅರ್ಥ ಅವರು ಭಯೋತ್ಪಾದಕ ಎಂದಲ್ಲ. ಮುಂಬೈನಲ್ಲಿ ದಾಳಿ ನಡೆಸಬೇಕು ಅಥವಾ ವಿಧ್ವಂಸಕ ಕೃತ್ಯ ಎಸಗಬೇಕು ಎಂಬ ಯಾವುದೇ ಕೆಟ್ಟ ಉದ್ದೇಶ ಸಂಜಯ್ ದತ್ ಅವರಿಗೆ ಇರಲಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಅವರ ಮುಂಬರುವ ‘ಪ್ರಹಾರ್’ ಚಿತ್ರದ ಕಾರಣಕ್ಕಾಗಿ ಉಜ್ವಲ್ ನಿಕಮ್ ಅವರ ಹೆಸರು ಮುಂಚೂಣಿಯಲ್ಲಿದೆ. ಈ ಸಿನಿಮಾದಲ್ಲಿ ರಾಜ್‌ಕುಮಾರ್ ರಾವ್ ಅವರು ಖ್ಯಾತ ವಕೀಲ ಉಜ್ವಲ್ ನಿಕಮ್ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚರ್ಚೆಗಳ ನಡುವೆಯೇ ನಿಕಮ್ ಅವರ ಸಂದರ್ಶನದ ಹೇಳಿಕೆಗಳು ವೈರಲ್ ಆಗುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 8:15 am, Mon, 13 July 26
