ಸಂಪುಟ ವಿಸ್ತರಣೆಗೆ ಇಂದೇ ಗ್ರೀನ್ ಸಿಗ್ನಲ್? ದೆಹಲಿಯಲ್ಲಿ ಡಿಕೆಶಿ, ಸಿದ್ದರಾಮಯ್ಯ, ಹರಿಪ್ರಸಾದ್ ಮಹತ್ವದ ಸಭೆ – Kannada News | Karnataka Cabinet Expansion: DK Shivakumar, Siddaramaiah and BK Hariprasad Hold Key Delhi Talks Today

ದೆಹಲಿಯ ಕರ್ನಾಟಕ ಭವನದಲ್ಲಿ ಸಿಎಂ, ಡಿಸಿಎಂ ಹಾಗೂ ಇತರರುImage Credit source: tv9

ನವದೆಹಲಿ/ಬೆಂಗಳೂರು, ಜುಲೈ 28: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ (Karnataka Cabinet Expansion) ಕುರಿತು ಕಾಂಗ್ರೆಸ್ ಹೈಕಮಾಂಡ್ ಇಂದು ಮಹತ್ವದ ಚರ್ಚೆ ನಡೆಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar), ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಸಂಪುಟ ವಿಸ್ತರಣೆ ಕುರಿತ ಅಂತಿಮ ಪಟ್ಟಿಗೆ ರೂಪುರೇಷೆ ಸಿಗುವ ನಿರೀಕ್ಷೆಯಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿ ಎರಡು ತಿಂಗಳು ಸಮೀಪಿಸುತ್ತಿದ್ದರೂ, ಸಚಿವ ಸಂಪುಟದಲ್ಲಿರುವ 20 ಖಾಲಿ ಸ್ಥಾನಗಳು ಇನ್ನೂ ಭರ್ತಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಪೂರ್ಣಗೊಳಿಸುವ ಉದ್ದೇಶದಿಂದ ಕಾಂಗ್ರೆಸ್ ನಾಯಕರು ಮತ್ತೊಮ್ಮೆ ದೆಹಲಿಯಲ್ಲಿ ಸಮಾಲೋಚನೆ ನಡೆಸುತ್ತಿದ್ದಾರೆ.

ಆಗಸ್ಟ್ 6ರಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭವಾಗಲಿರುವುದರಿಂದ, ಅದಕ್ಕೂ ಮುನ್ನವೇ ಸಚಿವ ಸಂಪುಟ ವಿಸ್ತರಣೆಗೆ ಅಂತಿಮ ರೂಪ ನೀಡುವ ಪ್ರಯತ್ನಗಳು ನಡೆಯುತ್ತಿವೆ. ಈ ಬಾರಿ ಯಾವುದೇ ನಿರ್ಧಾರವಿಲ್ಲದೆ ವಾಪಸ್ ಬಾರದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ನಿರಂತರ ಮೀಟಿಂಗ್​ಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ವೇಣುಗೋಪಾಲ್ ಜತೆ ಇಂದು ಮಹತ್ವದ ಸಭೆ

ಸೋಮವಾರ ರಾತ್ರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನಿವಾಸದಲ್ಲಿ ನಡೆಯಬೇಕಿದ್ದ ಸಭೆ ಕೊನೆಯ ಕ್ಷಣದಲ್ಲಿ ಮುಂದೂಡಲ್ಪಟ್ಟಿದೆ. ಇದೀಗ ಮಂಗಳವಾರ ಸಭೆ ನಡೆಯಲಿದ್ದು, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸುವ ಸಾಧ್ಯತೆ ಇದೆ.

ಈ ಸಭೆಯಲ್ಲಿ ಸಚಿವ ಸ್ಥಾನಕ್ಕೆ ಪರಿಗಣಿಸಿರುವ ಹೆಸರುಗಳ ಪಟ್ಟಿಯನ್ನು ಪರಿಶೀಲಿಸಿ, ಬಳಿಕ ಅದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸಲ್ಲಿಸುವ ಸಾಧ್ಯತೆ ಇದೆ. ನಂತರ ಅಂತಿಮ ಪಟ್ಟಿಗೆ ಒಪ್ಪಿಗೆ ಪಡೆಯುವ ಪ್ರಕ್ರಿಯೆ ನಡೆಯುವ ನಿರೀಕ್ಷೆಯಿದೆ.

ಯುವ ಮುಖಗಳಿಗೆ ಮಣೆ?

ಈ ಬಾರಿ ಸಚಿವ ಸಂಪುಟದಲ್ಲಿ ‘ಹಳೆ ಬೇರು-ಹೊಸ ಚಿಗುರು’ ಸೂತ್ರ ಅನುಸರಿಸುವ ಕುರಿತು ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ. ಯುವ ನಾಯಕತ್ವಕ್ಕೆ ಹೆಚ್ಚಿನ ಅವಕಾಶ ನೀಡುವ ಬಗ್ಗೆ ಒಲವು ವ್ಯಕ್ತವಾಗಿದ್ದು, ಖಾಲಿ ಇರುವ 20 ಸಚಿವ ಸ್ಥಾನಗಳ ಪೈಕಿ 12ರಿಂದ 15 ಸ್ಥಾನಗಳಿಗೆ ಹೊಸ ಮುಖಗಳಿಗೆ ಅವಕಾಶ ದೊರೆಯುವ ಸಾಧ್ಯತೆ ಇದೆ.

ಆದರೆ ಇಲ್ಲಿ ಹೊಸ ಮುಖಗಳು ಎಂದರೆ ಕೇವಲ ಮೊದಲ ಬಾರಿಗೆ ಶಾಸಕರಾದವರು ಮಾತ್ರವಲ್ಲ. ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಾಗೂ ಆಡಳಿತಾತ್ಮಕ ಸಾಮರ್ಥ್ಯ ಹೊಂದಿರುವವರಿಗೆ ಆದ್ಯತೆ ನೀಡುವ ಸಾಧ್ಯತೆಯಿದೆ. ಇದಕ್ಕಾಗಿ ಜಾತಿ, ಪ್ರದೇಶ, ಶಿಕ್ಷಣ ಮತ್ತು ಅನುಭವ ಸೇರಿದಂತೆ ವಿವಿಧ ಮಾನದಂಡಗಳನ್ನು ಪರಿಗಣಿಸಿ ಪ್ರತ್ಯೇಕ ಪಟ್ಟಿಯೂ ಸಿದ್ಧವಾಗಿದೆ ಎನ್ನಲಾಗಿದೆ.

ಸಚಿವಾಕಾಂಕ್ಷಿಗಳ ಲಾಬಿ ಮುಂದುವರಿಕೆ

ದೆಹಲಿ ತಲುಪಿರುವ ಸಚಿವಾಕಾಂಕ್ಷಿ ಶಾಸಕರು ಲಾಬಿ ಮುಂದುವರಿಸಿದ್ದಾರೆ. ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ವಿಶ್ವಾಸವನ್ನು ಹಲವರು ವ್ಯಕ್ತಪಡಿಸುತ್ತಿದ್ದು, ಹೈಕಮಾಂಡ್ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ.

ಪ್ರಮಾಣವಚನಕ್ಕೆ ರಾಜ್ಯಪಾಲರ ಪ್ರವಾಸ ಅಡ್ಡಿ?

ಸಚಿವರ ಪಟ್ಟಿ ಅಂತಿಮಗೊಂಡರೂ ಪ್ರಮಾಣವಚನ ಕಾರ್ಯಕ್ರಮದಲ್ಲಿ ಸ್ವಲ್ಪ ವಿಳಂಬವಾಗುವ ಸಾಧ್ಯತೆಯಿದೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಎರಡು ದಿನಗಳ ಮಧ್ಯಪ್ರದೇಶ ಪ್ರವಾಸ ಕೈಗೊಳ್ಳಲಿದ್ದು, ಜುಲೈ 30ರವರೆಗೆ ಬೆಂಗಳೂರಿನಲ್ಲಿ ಇರುವುದಿಲ್ಲ. ಮಂಗಳವಾರ ಮಧ್ಯಾಹ್ನ ಬೆಂಗಳೂರಿನಿಂದ ಇಂದೋರ್‌ಗೆ ತೆರಳಲಿರುವ ರಾಜ್ಯಪಾಲರು, ಗುರು ಪೂರ್ಣಿಮೆಯ ಹಿನ್ನೆಲೆಯಲ್ಲಿ ಸ್ವಗೃಹಕ್ಕೆ ಭೇಟಿ ನೀಡಲಿದ್ದಾರೆ. ಜುಲೈ 30ರ ರಾತ್ರಿ ಬೆಂಗಳೂರಿಗೆ ಮರಳುವ ನಿರೀಕ್ಷೆಯಿದೆ.

ಇದನ್ನೂ ಓದಿ: ಕರ್ನಾಟಕದ ಎಲ್ಲ ಸಂಸದರ ಜೊತೆ ಡಿಕೆ ಶಿವಕುಮಾರ್ ಸಭೆ , ಏನೇನು ಚರ್ಚೆ ಆಯ್ತು? ಇಲ್ಲಿದೆ ಡಿಟೇಲ್ಸ್

ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಇಂದು ಅಥವಾ ಶೀಘ್ರದಲ್ಲೇ ಸಚಿವರ ಪಟ್ಟಿಗೆ ಅಂತಿಮ ಮುದ್ರೆ ಒತ್ತಿದರೆ, ರಾಜ್ಯಪಾಲರು ವಾಪಸಾದ ನಂತರ ಜುಲೈ 31ರಂದು ಪ್ರಮಾಣವಚನ ಸಮಾರಂಭ ನಡೆಯುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *