ಬೆಂಗಳೂರು, ಜೂ.25 : ಸಿಲಿಕಾನ್ ಸಿಟಿಯಲ್ಲಿ ಸೈಬರ್ ಕಳ್ಳರ ವಂಚನೆ ಮಿತಿಮೀರಿದ್ದು, ಬೇರೆ ಬೇರೆ ರೀತಿಯಲ್ಲಿ ವಂಚನೆ ಮಾಡುವ ದಾರಿಯನ್ನು ಹುಡುಕಿಕೊಂಡಿದ್ದ, ಇವರು ಇದೀಗ ಸಾವಿನ ಮನೆಯನ್ನು ಬಿಟ್ಟಿಲ್ಲ. ನೋವಿನಲ್ಲಿರುವ ಕುಟುಂಬಸ್ಥರನ್ನು ಟಾರ್ಗೆಟ್ ಮಾಡಿ ಹಣ ಲೂಟಿ ಮಾಡುತ್ತಿರುವ ಆಘಾತಕಾರಿ ಜಾಲವೊಂದು ಬಯಲಾಗಿದೆ. ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ವಿದ್ಯುತ್ ಚಿತಾಗಾರಗಳಲ್ಲಿ ಶವ ಸಂಸ್ಕಾರಕ್ಕಾಗಿ ಆನ್‌ಲೈನ್ ಸ್ಲಾಟ್ ಕಾಯ್ದಿರಿಸುವ (Crematorium Slot Booking) ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿಸಿ ಸಾರ್ವಜನಿಕರಿಂದ ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿದ್ದ ಸೈಬರ್ ಖದೀಮರ ವಿರುದ್ಧ ಈಗ ಪೊಲೀಸ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಹಾಗೂ ಬೆಂಗಳೂರು ಉತ್ತರ ನಗರ ಪಾಲಿಕೆಯ ನಿಯಮಾವಳಿಗಳ ಪ್ರಕಾರ, ಪಾಲಿಕೆ ವ್ಯಾಪ್ತಿಯ ಹೆಬ್ಬಾಳ ಕೆಂಪಾಪುರದ ‘ಚಿರಶಾಂತಿಧಾಮ’ ಮತ್ತು ಮೇಡಿ ಅಗ್ರಹಾರದ ‘ಮುಕ್ತಿಧಾಮ’ ವಿದ್ಯುತ್ ಚಿತಾಗಾರಗಳಲ್ಲಿ ಶವಸಂಸ್ಕಾರ ನಡೆಸಲು ಕೇವಲ 250 ರೂ. ಅಧಿಕೃತ ಶುಲ್ಕ ನಿಗದಿಪಡಿಸಲಾಗಿದೆ. ಆದರೆ ಗೂಗಲ್ನಲ್ಲಿ ಹಾಗೂ ಇಂಟರ್ನೆಟ್‌ನಲ್ಲಿ ತಾವೇ ಅಧಿಕೃತ ಏಜೆಂಟ್‌ಗಳು ಎಂಬಂತೆ ಬಿಂಬಿಸಿಕೊಂಡಿರುವ ಸೈಬರ್ ಕಳ್ಳರು, ನಕಲಿ ಲಿಂಕ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ತೆರೆದಿದ್ದಾರೆ. ಕಷ್ಟದ ಸಮಯದಲ್ಲಿ ತರಾತುರಿಯಲ್ಲಿ ಆನ್‌ಲೈನ್ ಬುಕ್ಕಿಂಗ್ ಮಾಡಲು ಹೋಗುವ ಜನರನ್ನು ನಂಬಿಸಿ, ಈ ಖದೀಮರು ನಿಯಮ ಬಾಹಿರವಾಗಿ ಸಾವಿರಾರು ರೂಪಾಯಿ ಹೆಚ್ಚುವರಿ ಹಣ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಬೆಂಗಳೂರಿನ ಆಸ್ತಿ ಮಾಲೀಕರ ಜೇಬಿಗೆ ಬೀಳಲಿದೆ ಕತ್ತರಿ! ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಆಸ್ತಿ ತೆರಿಗೆ ಹೆಚ್ಚಳದ ಪ್ರಸ್ತಾಪ
ಈ ಮೋಸವನ್ನು ಪತ್ತೆ ಮಾಡಲು ಮತ್ತು ಸಾರ್ವಜನಿಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ನಗರ ಪಾಲಿಕೆಯು ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ಯಾರೂ ಸಹ ಇಂತಹ ಮೂರನೇ ವ್ಯಕ್ತಿ ಅಥವಾ ಖಾಸಗಿ ವೆಬ್‌ಸೈಟ್‌ಗಳನ್ನು ಬಳಸಿಕೊಳ್ಳಬಾರದು ಎಂದು ವಿನಂತಿಸಿದೆ. ಈ ವಂಚಕ ಜಾಲದ ವಿರುದ್ಧ ಯಲಹಂಕದ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 8:24 am, Thu, 25 June 26
